Breaking News

ಉಲನ್ ಬತಾರ್ ಅಂತರರಾಷ್ಟ್ರೀಯ ಬಾಕ್ಸಿಂಗ್, ಪದಕ ಖಚಿತಪಡಿಸಿಕೊಂಡ ದೇವೇಂದ್ರೊ ಸಿಂಗ್

ಭಾರತದ ಎಲ್. ದೇವೆಂದ್ರೊ ಸಿಂಗ್ ಮಂಗೋಲಿಯಾದ ಉಲನ್ ಬತಾರ್ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯ ಪುರುಷರ ಸಿಂಗಲ್ಸ್ನ ನಾಲ್ಕನೇ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
೫೨ ಕೆಜಿ ವಿಭಾಗದಲ್ಲಿ ದೇವೆಂದ್ರೊ ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾದ ದಿಮಿ ಯುಸುಪೊವ್ ಎದುರು ಗೆದ್ದರು. ಮಣಿಪುರದ ೨೩ ವರ್ಷದ ದೇವೆಂದ್ರೊ ಜನವರಿಯಲ್ಲಿ ಏಷ್ಯನ್ ಚಾಂಪಿಯನ್ಷಿಪ್ನ ಅರ್ಹತಾ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಅದರನಂತರ ಬಲ್ಗೇರಿಯಾದಲ್ಲಿ ನಡೆದಿದ್ದ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿ ಮತ್ತು ಥಾಯ್ಲೆಂಡ್ನಲ್ಲಿ ನಡೆದಿದ್ದ ಕಿಂಗ್ಸ್ ಕಪ್ ಟೂರ್ನಿಗಳಲ್ಲಿಯೂ ಸೋತಿದ್ದರು. ಆದರೆ, ಇಲ್ಲಿ ಸೆಮಿಫೈನಲ್ ತಲುಪುವ ಮೂಲಕ ಪದಕ ಖಚಿತ ಪಡಿಸಿಕೊಂಡಿದ್ದಾರೆ. ತಮ್ಮ ಎದುರಾಳಿಯ ಮೇಲೆ ಮಿಂಚಿನ ವೇಗದಲ್ಲಿ ಮುಷ್ಟಿಪ್ರಹಾರ ಮಾಡಿದ ಅವರು ಗೆಲುವು ಸಾಧಿಸಿದರು.
ಶುಕ್ರವಾರ ನಡೆಯಲಿರುವ ೫೧ ಕೆ.ಜಿ. ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಎಂ.ಸಿ. ಮೇರಿ ಕೋಮ್ ಕಣಕ್ಕಿಳಿಯಲಿದ್ದಾರೆ. ರಷ್ಯಾದ ಅನ್ನಾ ಏಡ್ಮಾ ಮತ್ತು ಕೊರಿಯಾದ ಚೋಲ್ ಮಿ ಬಾಂಗ್ ಅವರ ನಡುವೆ ನಡೆಯಲಿರುವ ಪ್ರೀ ಕ್ವಾರ್ಟರ್ನಲ್ಲಿ ಜಯಿಸಿದವರು ಮೇರಿ ಕೋಮ್ ಅವರಿಗೆ ಸವಾಲೊಡ್ಡಲಿದ್ದಾರೆ.

Related posts

Leave a Reply