Breaking News

ಉಳ್ಳಾಲದ ಮೊಗವೀರಪಟ್ಣ ಬಳಿ ಸಮುದ್ರಪಾಲಾಗುವವರು ಪಾರು, ಬೆಂಗಳೂರು ಮೂಲದ ಆರು ಜನರನ್ನು ರಕ್ಷಿಸಿದ ಜೀವರಕ್ಷಕರು


ಉಳ್ಳಾಲದ ಮೊಗವೀರಪಟ್ಣದ ಬೀಚ್‌ನಲ್ಲಿ ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಮೂಲದ ಕುಟುಂಬವೊಂದರ ಆರು ಜನರನ್ನು ಸ್ಥಳೀಯ ಜೀವರಕ್ಷಕ ಈಜುಗಾರರು ಮತ್ತು ಸ್ಥಳೀಯರು ರಕ್ಷಿಸಿದ ಘಟನೆ ಸಂಜೆ ನಡೆದಿದೆ.
ಬೆಂಗಳೂರು ವಿಲ್ಸನ್ ಗಾರ್ಡನ್ ಮತ್ತು ಶಿವಾಜಿನಗರ ಮೂಲದ ಸುಮಾರು ೨೦ ಜನರ ತಂಡವೊಂದು ಗುರುವಾರ ಉಳ್ಳಾಲ ದರ್ಗಾ ವೀಕ್ಷಣೆಗೆಂದು ಆಗಮಿಸಿದ್ದು, ದರ್ಗಾ ವೀಕ್ಷಣೆಯ ಬಳಿಕ ಮೊಗವೀರಪಟ್ಣ ಬಳಿಯ ಬೀಚ್‌ಗೆ ಬಂದಿದ್ದರು. ಬೀಚ್‌ನಲ್ಲಿ ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ ದೊಡ್ಡದೊಂದು ಅಲೆಗೆ ಕೊಚ್ಚಿ ಹೋಗಿದ್ದು ಈ ಸಂದರ್ಭದಲ್ಲಿ ಮೊಗವೀರಪಟ್ಣದ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರಾದ ಜೀವನ್ ಬಂಗೇರ, ವಾಸುದೇವ ಬಂಗೇರ ಯಾನೆ ಠಾಕೂರು, ವಸಂತ ಪುತ್ರನ್, ಕೇಶವ ಪಾಂಗಳ್, ಸ್ಥಳೀಯರಾದ ಖಾಸಿಂ ಮೇಲಂಗಡಿ, ಹಸೈನಾರ್, ಚೆರಿಯೋನು ರಕ್ಷಿಸಿದವರು.
ರಕ್ಷಣೆಯಾದ ಕುಟುಂಬದ ಸದಸ್ಯರಲ್ಲಿ ಒಂದು ವರ್ಷದ ಮಗುವೂ ಸೇರಿದೆ. ಮಗು ಮತ್ತು ತಾಯಿ ಇಬ್ಬರೂ ಸಮುದ್ರ ಪಾಲಾಗಿದ್ದು, ತಾಯಿ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಮಗು ಅಪಾಯದಿಂದ ಪಾರಾಗಿದ್ದು ಇಬ್ಬರನ್ನು ಮೇಲಕ್ಕೆ ತಂದ ಬಳಿಕ ಮಗುವಿನ ಹೊಟ್ಟೆಗೆ ಸೇರಿದ್ದ ನೀರನ್ನು ತೆಗೆದಾಗ ಮಗು ಚೇತರಿಸಿಕೊಂಡಿತು ಎಂದು ರಕ್ಷಿಸಿದ ವಾಸುದೇವ ಬಂಗೇರ ತಿಳಿಸಿದರು. ಉಳ್ಳಾಲದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಹೋಮ್‌ಗಾರ್ಡ್ ಅಥವಾ ಪೊಲೀಸರನ್ನು ನೇಮಿಸುವ ಅಗತ್ಯ ಇದೆ ಎಂದು ಸ್ಥಳೀಯರು ತಿಳಿಸಿದರು.

Related posts

Leave a Reply