Header Ads
Header Ads
Breaking News

ಉಳ್ಳಾಲ:ಹಿಲಿರಿಯಾ ನಗರದಲ್ಲಿ ಮನೆಗೆ ಅಪ್ಪಳಿಸಿದ ಸಮುದ್ರದ ಅಲೆಗಳು

ಉಳ್ಳಾಲದಲ್ಲಿ ಸಮುದ್ರದ ಅಲೆಗಳ ಅಬ್ಬರ ಸೋಮವಾರ ಇನ್ನಷ್ಟು ಹೆಚ್ಚಿದ್ದು ಉಳ್ಳಾಲದ ಕೈಕೋ, ಹಿಲೆರಿಯಾನಗರದ ಮನೆಗಳಿಗೆ ಅಲೆಗಳು ಅಪ್ಪಳಿಸಿ ೬ ಮನೆಗಳು ಭಾಗಶ: ಹಾನಿಗೊಂಡಿದೆ. 35 ಕುಟುಂಬಗಳು ಸ್ಥಳಾಂತರಗೊಂಡಿದ್ದಾರೆ.ಹಿಲಿರಿಯಾನಗರದ ಆಲಿಯಬ್ಬ , ಝೈನಾಬಿ, ಸಕೀನಾ , ಜಮೀಲಾ , ಸಾಕಿರಾ ಬಾನು, ರುಖಿಯಾ ಎಂಬವರ ಮನೆಗಳಿಗೆ ಅಲೆಗಳು ಅಪ್ಪಳಿಸುವುದರಿಂದ ಭಾಗಶ: ಹಾನಿಯಾಗಿದ್ದು, ವಾಸಿಸಲು ಅಸಾಧ್ಯವಾಗಿದೆ. ಭಾನುವಾರ ತಡರಾತ್ರಿಯಿಂದ ಅಲೆಗಳು ಮನೆಗಳಿಗೆ ಅಪ್ಪಳಿಸಲು ಆರಂಭವಾಗಿದ್ದು, ಸೋಮವಾರ ಮಧ್ಯಾಹ್ನದ ವೇಳೆ ಕೆಲ ಮನೆಗಳ ಅವಶೇಷಗಳು ಮಾತ್ರ ಉಳಿದಿದೆ. ಉಳ್ಳಾಲ ನಗರಸಭೆ ವತಿಯಿಂದ ಒಂಭತ್ತುಕೆರೆ ಸರಕಾರಿ ಶಾಲೆ ಮತ್ತು ಉಳ್ಳಾಲ ದರ್ಗಾ ವಠಾರದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಆದರೆ ಮನೆಮಂದಿ ಮಹಿಳೆಯರಿಗೆ ಅಲ್ಲಿ ನೆಲೆಸಲು ಅಸಾಧ್ಯ, ಎಂದು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ.ಶಾಶ್ವತ ಪರಿಹಾರಕ್ಕೆ ಒತ್ತಾಯ : ಮುಕ್ಕಚ್ಚೇರಿ, ಹಿಲೆರಿಯಾನಗರ, ಕೈಕೋ ನಿವಾಸಿಗಳು ಮಧ್ಯಾಹ್ನ ಉಳ್ಳಾಲ ನಗರಸಭೆಗೆ ಮುತ್ತಿಗೆ ಹಾಕಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದರು. ಸ್ಥಳಕ್ಕೆ ಜನಪ್ರತಿನಿಧಿಗಳು ಬರುವುದು ಬೇಡ, ಅಧಿಕಾರಿಗಳೇ ಬಂದು ಸಮಸ್ಯೆಯನ್ನು ಆಲಿಸಲಿ. ಜನಪ್ರತಿನಿಧಿಗಳಲ್ಲಿ ವಿಶ್ವಾಸ ಕಳೆದುಹೋಗಿದೆ ಎಂದು ನಗರಸಭೆ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ತಹಶೀಲ್ದಾರ್ ಭೇಟಿ :ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರ್ ‘ ಉಳ್ಳಾಲ ಗ್ರಾಮ ಮತ್ತು ಸಮೀಪದ ಗ್ರಾಮಗಳಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಮೂರು ತಿಂಗಳ ಒಳಗೆ ಸಂತ್ರಸ್ತ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಅಷ್ಟರವರೆಗೆ ಅಪಾಯದ ಸ್ಥಳದಲ್ಲಿ ನಿಲ್ಲದಂತೆ ಹಾಗೂ ನಗರಸಭೆ ವತಿಯಿಂದ ಸೂಚಿಸುವ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ನೆಲೆ ನಿಲ್ಲುವಂತೆ ಸೂಚಿಸಿದ್ದಾರೆ. ಉಚ್ಚಿಲ, ಪೆರಿಬೈಲು, ಬಟ್ಟಂಪಾಡಿ, ಸೋಮೇಶ್ವರ ಸಮುದ್ರ ತೀರದಲ್ಲಿಯೂ ಕಡಲಬ್ಬರ ಹೆಚ್ಚಿದ್ದು, ಮಧ್ಯಾಹ್ನ ಮತ್ತು ರಾತ್ರಿ ಹೊತ್ತಿಗೆ ರಸ್ತೆಗೆ ಅಪ್ಪಳಿಸಲು ಆರಂಭಿಸಿದೆ. ಈ ಭಾಗದಲ್ಲಿ ರೆಸಾಟ್ ಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದು, ಮನೆಗಳಿರುವ ಪ್ರದೇಶದಲ್ಲಿ ಕಲ್ಲುಗಳನ್ನು ಹಾಕುವ ಕಾರ್ಯ ಮುಂದುವರಿದಿದೆ. ಕಡಲ್ಕೊರೆತ ಪ್ರದೇಶಕ್ಕೆ ತಹಶೀಲ್ದಾರ್ ಗುರುಪ್ರಸಾದ್ , ಕಂದಾಯ ನಿರೀಕ್ಷಕ ಜೋಸ್ಲಿನ್ ಸ್ಟೀಫನ್ , ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಗ್ರಾಮಕರಣಿಕರಾದ ಕೆ.ಪ್ರಮೋದ್ ಕುಮಾರ್, ಸಹಾಯಕ ನವನೀತ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

Related posts

Leave a Reply