Breaking News

ಉಳ್ಳಾಲ ಕಡಲಲ್ಲಿ ಮುಳುಗಲಿದ್ದ ಬಾರ್ಜ್‌ನಲ್ಲಿ ಇಪ್ಪತ್ತೇಳು ಜನ, ಕೊನೆಗೂ ಎಲ್ಲರನ್ನೂ ರಕ್ಷಿಸಿದ ನೆಮ್ಮದಿ ಸುದ್ದಿ

ಉಳ್ಳಾಲ ಮೊಗವೀರಪಟ್ಣ ಸಮೀಪ ಸಮುದ್ರ ಮಧ್ಯದಲ್ಲಿ ಅಪಾಯಕ್ಕೆ ಸಿಲುಕಿದ್ದ ಕಡಲ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿ ನಿರತ ಬಾರ್ಜ್ನಲ್ಲಿ ೨೭ ಮಂದಿಯನ್ನು ಸತತ ಕಾರ್ಯಾಚರಣೆ ನಡೆಸಿ ಭಾನುವಾರ ರಕ್ಷಣೆ ಮಾಡಲಾಗಿದೆ.
ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಕಡಲು ಪ್ರಕ್ಷುಬ್ಧವಾಗಿದ್ದು, ಕಾಮಗಾರಿಯಲ್ಲಿ ನಿರತವಾಗಿದ್ದ ಬಾರ್ಜ್ ಇದರಲ್ಲಿ ಸಿಲುಕಿಕೊಂಡು ೨೭ ಮಂದಿ ಪ್ರಾಣಾಪಾಯಕ್ಕೆ ಸಿಲುಕಿಕೊಂಡಿದ್ದರು. ಬಾರ್ಜ್ ದುರಂತದ ಬಗ್ಗೆ ಕ್ಷಿಪ್ರ ಕ್ರಮ ಕೈಗೊಂಡಿರುವ ಸ್ಥಳೀಯ ಶಾಸಕರು ಹಾಗೂ ರಾಜ್ಯ ಆಹಾರ ಸಚಿವರಾದ ಯು. ಟಿ. ಖಾದರ್, ಮೈಸೂರು ಕಾರ್ಯಕ್ರಮ ಮುಗಿಸಿ ಮಧ್ಯರಾತ್ರಿ ೩ ಗಂಟೆಗೆ ಮಂಗಳೂರು ತಲುಪಿರುವ ಸಚಿವರು ಅನಂತರ ರಂಝಾನ್ ಉಪವಾಸದ ಸಹರಿ ಸೇವಿಸಿ ಮಸೀದಿಯಲ್ಲಿ ಭಾನುವಾರ ಬೆಳಗ್ಗಿನ ನಮಾಝ್ ಮುಗಿಸಿ ಬಾರ್ಜ್ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗೆ ವಿಶೇಷ ಪ್ರಾರ್ಥನೆ ನಡೆಸಿದರು. ಬಳಿಕ ನೇರವಾಗಿ ಪಣಂಬೂರು ಕೋಸ್ಟ್ ಗಾರ್ಡ್ ಕಛೇರಿಗೆ ತೆರಳಿ ಕಾರ್ಯಾಚರಣೆ ತಂಡದೊಂದಿಗೆ ಕ್ರಿಯಾಶೀಲರಾಗಿದ್ದರು.
ಬ್ರಿಟಿಷ್ ಕಂಪೆನಿಯ ದುಬಾರಿ ಎ.ಸಿ.ವಿ. ಓವರ್ ಕ್ರಾಫ್ಟ್ ಬೋಟನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. ಈ ವಿಶೇಷ ಬೋಟ್ ನೀರು ಹಾಗೂ ಮರಳಿನಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ೫೦ ಮಂದಿ ಕೋಸ್ಟ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಶನಿವಾರ ಮಧ್ಯಾಹ್ನದಿಂದ ಕಡಲು ಪ್ರಕ್ಷುಬ್ಧವಾಗತೊಡಗಿದ್ದು, ಭಾರೀ ಗಾತ್ರದ ಅಲೆಗಳು ಅಪ್ಪಳಿಸಲು ಆರಂಭ ವಾಯಿತು. ಅಲೆಗಳ ಹೊಡೆತಕ್ಕೆ ಬಾರ್ಜ್ ಅಪಾಯದಲ್ಲಿ ಸಿಲುಕಿಕೊಂಡಿತ್ತು. ಈ ಕುರಿತಂತೆ ಬಾರ್ಜ್ನಲ್ಲಿದ್ದ ಸಿಬಂದಿ ರಕ್ಷಣೆ ಕೋರಿ ಸಂದೇಶ ರವಾನಿಸಿದ್ದರು. ಆದರೆ ಸಮುದ್ರ ಪ್ರಕ್ಷುಬ್ಧವಾಗಿದ್ದ ಕಾರಣ ಅದರಲ್ಲಿದ್ದ ಕಾರ್ಮಿಕರನ್ನು ದಡಕ್ಕೆ ಕರೆತರಲು ಬೋಟ್ಗಳನ್ನು ಕಳುಹಿಸಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ಗೆ ಮಾಹಿತಿ ನೀಡಲಾಯಿತು.
ಸಂಜೆ ವೇಳೆಗೆ ಬಾರ್ಜ್ ತೀರಾ ಅಪಾಯಕ್ಕೆ ಸಿಲುಕಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ೬ ಗಂಟೆ ವೇಳೆಗೆ ಬಾರ್ಜ್ ಸಿಬಂದಿ ಸ್ಫೋಟಕವನ್ನು ಸಿಡಿಸಿ ಅಪಾಯದ ಸಂಕೇತವನ್ನು ರವಾನಿಸಿದ್ದರು. ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯ ಆರಂಭಿಸಿ ಸಿಬಂದಿಯನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿತು. ಕೆಲ ಹೊತ್ತಿನಲ್ಲಿ ೨ ಬಾರಿ ಸ್ಫೋಟಕ ಸಿಡಿಸಿ ಬಾರ್ಜ್ ತೀರಾ ಅಪಾಯದಲ್ಲಿದೆ ಎಂದು ಸಂಕೇತ ರವಾನಿಸಿದರು. ಬಾರ್ಜ್ ಅಪಾಯಕ್ಕೆ ಸಿಲುಕುವ ಸಾಧ್ಯತೆಯ ಸುದ್ದಿ ತಿಳಿದು ಸಂಜೆ ೫.೩೦ರ ವೇಳೆಗೆ ಕೋಟೆಪುರದಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ರಬ್ಬರ್ ದೋಣಿಯನ್ನು ಬಳಸಿ ರಕ್ಷಣಾ ಕಾರ್ಯ ನಡೆಸಬೇಕಾಗಿದೆ. ಸಮುದ್ರದಲ್ಲಿ ಬೃಹತ್ ಅಲೆ ಏಳುತ್ತಿರುವುದರಿಂದ ಡಿಂಗಿಯನ್ನು ಕಳುಹಿಸುವುದಕ್ಕೆ ಅಡ್ಡಿಯಾಗಿದೆ. ಶನಿವಾರ ಒಮ್ಮೆ ಮಾತ್ರ ಡಿಂಗಿ ಮೂಲಕ ಯಶಸ್ವಿ ಕಾರ್ಯಾಚರಣೆ ಸಾಧ್ಯವಾಯಿತು.

Related posts

Leave a Reply