
ಉಳ್ಳಾಲ: ಉಳ್ಳಾಲ ಸಮುದ್ರತೀರದಲ್ಲಿ ಅಲೆಗಳ ರಭಸ ಶುಕ್ರವಾರ ಮಧ್ಯಾಹ್ನದಿಂದ ಹೆಚ್ಚಾಗಿದ್ದು, ಮೀನುಗಾರಿಕೆಗೆ ತೆರಳಿರುವ ದೋಣಿಗಳು ವಾಪಸ್ಸಾಗುತ್ತಿದ್ದಾರೆ. ಜೋರಾಗಿ ಬೀಸುತ್ತಿರುವ ಗಾಳಿಯಿಂದ ಮುಳುಗಡೆಯಾಗಿರುವ ಬಾರ್ಜ್ ಮೇಲೆತ್ತುವ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ದೋಣಿ ಮೂಲಕ ವಾಪಸ್ಸಾಗಿದ್ದಾರೆ.
ಉಳ್ಳಾಲದ ಮೊಗವೀರಪಟ್ನ, ಸುಭಾಷನಗರ, ಕೋಟೆಪುರ, ಮುಕ್ಕಚ್ಚೇರಿ, ಕೈಕೋ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಸಮುದ್ರದ ಅಲೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಜೋರಾಗಿ ಬೀಸುತ್ತಿರುವ ಗಾಳಿಯಿಂದ ಮೀನುಗಾರಿಕೆಗೆ ತೆರಳಿರುವ ಮೀನುಗಾರ ದೋಣಿಗಳು ಸಂಜೆ ವೇಳೆ ವಾಪಸ್ಸಾಗಿದೆ. ಆಳಸಮುದ್ರದಲ್ಲಿ ಗಾಳಿ ಬೀಸುತ್ತಿರುವುದರಿಂದ ಅಪಾಯದ ಮುನ್ಸೂಚನೆ ಅರಿತು ವಾಪಸ್ಸಾಗುತ್ತಿದ್ದಾರೆ. ಓಖಿ ಚಂಡಮಾರುತದ ಸಂದರ್ಭ ಸಂಜೆ ನಂತರ ಕಡಲಬ್ಬರ ಜೋರಾಗಿ ಒಂಭತ್ತುಕೆರೆ ಸಮೀಪ ಎರಡು ಮನೆಗಳು ಸಂಪೂರ್ಣ ಸಮುದ್ರಪಾಲಾಗಿತ್ತು. ಇದೀಗ ಮತ್ತೆ ಚಂಡಾಮಾರುತದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಮುದ್ರ ಬಿರುಸುಗೊಳ್ಳುವ ಆತಂಕವಿದೆ. ಸಮುದ್ರ ತೀರದ ಎಲ್ಲರೂ ಜಾಗೃತರಾಗಿದ್ದೇವೆ ಎಂದು ಮೀನುಗಾರ ಮೊಗವೀರಪಟ್ನದ ಯೊಗೀಶ್ ತಿಳಿಸಿದ್ದಾರೆ.
ವರದಿ: ಆರೀಫ್ ಉಳ್ಳಾಲ