Header Ads
Header Ads
Breaking News

ಉಳ್ಳಾಲ ಹೊಯ್ಗೆ ನಿವಾಸಿಗಳ ಜೀವ ತೂಗುಯ್ಯಾಲೆಯಲ್ಲಿ ಶತವರ್ಷಗಳು ಕಳೆದರೂ ಸೇತುವೆ ಕಾಮಗಾರಿ ನಡೆದಿಲ್ಲ ಸವೆದು ಹೋದ ಕಬ್ಬಿಣದ ರಾಡ್ ಶೀಘ್ರದಲ್ಲಿ ಸೇತುವೆ ದುರಸ್ಥಿಗೆ ಜನತೆಯ ಆಗ್ರಹ

ದಿನದಲ್ಲಿ ಸಾವಿರದಷ್ಟು ಮಂದಿ ಆಶ್ರಯಿಸಿರುವ ಪುಟ್ಟ ಸೇತುವೆ. ಅಲ್ಲಿ ಸ್ವಲ್ಪ ಯಾಮಾರಿದರೂ ನದಿಗೆ ಉರುಳುವುದು ಖಚಿತ, ಸವೆದು ಇನ್ನೇನು ಮುರಿಯುವ ಹಂತದಲ್ಲಿರುವ ಕಬ್ಬಿಣದ ಬೆರಳಣಿಕೆಯ ರಾಡಿನಲ್ಲಿ ತೂಗುತ್ತಿರುವ ಸೇತುವೆ ದುರಸ್ತಿ ಕಾರ್ಯ ವರ್ಷದ ಹಿಂದೆ ನಡೆದಿದೆಯಾದರೂ, ಶಾಶ್ವತ ಸೇತುವೆ ನಿರ್ಮಾಣ ಮರೀಚಿಕೆಯಾಗಿದೆ.ನೇತ್ರಾವತಿ ಸೇತುವೆಯಿಂದ ಉಳ್ಳಾಲ ಹೊಯ್ಗೆಗೆ ಸಂಪರ್ಕಿಸುವ ಕಾಲುದಾರಿಗೆ ಬ್ರಿಟೀಷ್ ಕಾಲದಲ್ಲಿ ನಿರ್ಮಿಸಲಾದ ಸೇತುವೆಯಿದೆ. ಸಂಪೂರ್ಣವಾಗಿ ಕಬ್ಬಿಣದಿಂದಲೇ ನಿರ್ಮಿಸಲಾದ ಸೇತುವೆ 100 ಮೀ.ನಷ್ಟು ಉದ್ದವಿದೆ. ಕೆಳಗೆ ಒಂದು ಭಾಗದಲ್ಲಿ ನೇತ್ರಾವತಿ ನದಿ ಇನ್ನೊಂದು ಭಾಗದಲ್ಲಿ ನದಿಗೆ ಸೇರುವ ನೀರು ಹರಿಯುತ್ತಿದೆ. ಸೇತುವೆಯಿಂದ ಬಿದ್ದರೂ ದೊಡ್ಡ ಪ್ರಮಾಣದಲ್ಲಿ ಹರಿಯುವ ನೀರಿನ ಸೆಳೆತಕ್ಕೆ ಸಿಲುಕಿ ಅಪಾಯ ಕಟ್ಟಿಟ್ಟ ಬುತ್ತಿ. ಈ ಮೂಲಕವೇ ದಿನದಲ್ಲಿ ಮಕ್ಕಳು, ದೊಡ್ಡವರು ಎಲ್ಲರೂ ಸೇರಿ ಸಾವಿರದಷ್ಟು ಮಂದಿ ಉಳ್ಳಾಲ ಹೊಯ್ಗೆ ನಿವಾಸಿಗಳು ಹಾಗೂ ರೈಲಿನಲ್ಲಿ ಬರುವ ಪ್ರಯಾಣಿಕರು ಜೀವ ಕೈಯಲ್ಲಿಟ್ಟುಕೊಂಡು ನಡೆದುಕೊಂಡು ದಡ ಸೇರುತ್ತಿದ್ದಾರೆ.

ಹಲವು ವರ್ಷಗಳಿಂದ ಮುರಿದು ಬಿದ್ದಿದ್ದಂತಹ ಸೇತುವೆಯಲ್ಲೇ ಈ ಭಾಗದ ಜನ ನಡೆದುಕೊಂಡೇ ಸಾಗುತ್ತಿದ್ದರು. ವಿದ್ಯಾರ್ಥಿಗಳು, ಮಕ್ಕಳು ರಸ್ತೆಯ ಮೂಲಕ ಸಾಗುವುದೇ ಕಷ್ಟವೆನಿಸಿತ್ತು. ಸೇತುವೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವುದರಿಂದ ಹಲವು ಬಾರಿ ಹಿಂದಿನ ಶಾಸಕರಿಗೆ ಮನವಿ ಮಾಡಿದ್ದರು. ಆದರೆ ಶಾಶ್ವತ ಯೋಜನೆ ಬಿಡಿ, ದುರಸ್ತಿ ಕಾರ್ಯವನ್ನು ನಡೆಸದೆ, ಪ್ರದೇಶ ತಮ್ಮ ವ್ಯಾಪ್ತಿಗೆ ಒಳಪಟ್ಟರೂ ಒಮ್ಮೆಯೂ ಭೇಟಿ ನೀಡಿರಲಿಲ್ಲ. ಆದರೂ ಪ್ರಯತ್ನ ಮುಂದುವರಿಸಿದ ಹೊಯ್ಗೆ ನಿವಾಸಿಗಳು ಉಳ್ಳಾಲ ಹೊಯ್ಗೆ ಅಭಿವೃದ್ಧಿ ಸಮಿತಿ ರಚಿಸಿಕೊಂಡು ನೂತನ ಶಾಸಕರಾಗಿ ಆಯ್ಕೆಗೊಂಡಿದ್ದ ಜೆ.ಆರ್.ಲೋಬೋ ಅವರಲ್ಲಿ ಮನವಿ ಮಾಡಿದ್ದರು. ಒಂದೂವರೆ ವರ್ಷದ ಹಿಂದೆ ಮನವಿಗೆ ಸ್ಪಂಧಿಸಿದ್ದ ಜೆ.ಆರ್.ಲೋಬೊ ಸ್ಥಳಕ್ಕಾಗಮಿಸಿ ಅಪಾಯ ಅರಿತು ದುರಸ್ತಿ ಕಾರ್ಯವನ್ನು ಶೀಘ್ರವೇ ನಡೆಸಿದ್ದರು. ಮುರಿದು ಬಿದ್ದಿದ್ದ ಸೇತುವೆಯ ಆಧಾರ ಕಂಬಗಳಿಗೆ ವೆಲ್ಡಿಂಗ್ ನಡೆಸಿ, ಮರುಜೋಡಣೆ ಮಾಡುವ ಮೂಲಕ ದುರಸ್ತಿ ಕಾರ್ಯ ನಡೆಸಿದ್ದರು.ಉಪ್ಪು ನೀರಿಗೆ ಮತ್ತೆ ಸವೆತಿರುವ ಆಧಾರ ಕಂಬಗಳು ಮತ್ತೆ ಅಪಾಯದಂಚಿನಲ್ಲಿದೆ. ನಡೆದುಕೊಂಡು ಸಾಗುವಾಗಲೂ ಕೈಗಳಿಗೆ ಹಿಡಿಯಲು ಆಧಾರವಿಲ್ಲ. ನಡೆದುಕೊಂಡು ಹೋಗಲು ಹಾಕಿರುವ ತಗಡು ಶೀಟುಗಳು ಮುರಿದಿವೆ. ಅದರಲ್ಲಿ ಕಾಲು ಸಿಕ್ಕಿ ಹಾಕಿಕೊಂಡಲ್ಲಿ ಮತ್ತೆ ಅಪಾಯ. ಏಕಕಾಲಕ್ಕೆ ಹೆಚ್ಚು ಜನರನ್ನು ಹೊತ್ತಯ್ಯಲು ಸೇತುವೆಗೆ ಸಾಮರ್ಥ್ಯವಿಲ್ಲದಂತಾಗಿದೆ.

ತೂಗುಸೇತುವೆ ನಿರ್ವಹಣೆ ಕರಾವಳಿ ಭಾಗದಲ್ಲಿ ಕಷ್ಟದಾಯಕವಾಗಿದೆ. ಸರಕಾರ ಕಾಮಗಾರಿ ಮುಗಿಸಲು ಅನುದಾನ ಒದಗಿಸುತ್ತದೆ. ಆದರೆ ನಿರ್ವಹಣೆಗೆ ಅನುದಾನ ಕೊಡುವುದಿಲ್ಲ. ತೂಗುಸೇತುವೆ ನಿರ್ಮಿಸಿದಲ್ಲಿ ಉಪ್ಪು ನೀರು ಹೊಂದಿರುವ ಪ್ರದೇಶದಲ್ಲಿ ವಾರ್ಷಿಕ ನಿರ್ವಹಣೆ ಅಗತ್ಯ. ಇದನ್ನು ನಡೆಸಲು ಅಸಾಧ್ಯ. ಕಾಮಗಾರಿಗೆ ಹೆಚ್ಚಿನ ಅನುದಾನ ದೊರಕಿಸಲು ಪ್ರಯತ್ನಿಸುವುದಾಗಿ ಶಾಸಕ ಜೆ,.ಆರ್. ಲೋಬೊ ಪ್ರತಿಕ್ರಿಯಿಸಿದ್ದಾರೆ.ನಾದುರಸ್ತಿಯಲ್ಲಿರುವ ಸೇತುವೆ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಉಳ್ಳಾಲ ಹೊಯ್ಗೆ ಒಂದು ಭಾಗ ಉಳ್ಳಾಲ ನಗರಸಭೆಗೆ ಒಳಪಟ್ಟರೆ, ಇನ್ನೊಂದು ಭಾಗ ಮಂಗಳೂರು ಮಹಾನಗರ ಪಾಲಿಕೆಗೆ ಒಳಪಡುವುದು. ಸೇತುವೆ ಇರುವ ಪ್ರದೇಶ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಒಳಪಟ್ಟಿರುವುದರಿಂದ ಅಲ್ಲಿನ ಶಾಸಕರ ಗಮನ ಸೆಳೆಯುತ್ತಾ ಬಂದಿದ್ದೆವು. ಅದಕ್ಕಾಗಿ ಶಾಸಕ ಜೆ.ಆರ್ ಲೋಬೊ ಸ್ಪಂಧಿಸಿ ಅನುದಾನ ಮಂಜೂರುಗೊಳಿಸಿದ್ದಾರೆ. ಆದರೆ ಬಿಡುಗಡೆಗೊಂಡ ಅನುದಾನದಿಂದ ಕಾಮಗಾರಿ ಅಸಾಧ್ಯ, ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಅನ್ನುವುದು ತಿಳಿದುಬಂದಿದೆ. ಉಳ್ಳಾಲ ಹೊಯ್ಗೆಯಲ್ಲಿ ಹಿಂದೆ ಪೂರ್ವಜರು ಮಾಡಿದ ಕೃಷಿಯಿಲ್ಲ. ಸದ್ಯ ಅದು ಕ್ಷೀಣಿಸುತ್ತಾ ಬಂದಿದೆ. ಇದೀಗ ಮೀನುಗಾರಿಕೆ ಮತ್ತು ತರಕಾರಿ ಬೆಳೆಸುವವರಿದ್ದಾರೆ. ತರಕಾರಿಯಾಗಲಿ, ಹಿಡಿದ ಮೀನನ್ನಾಗಲಿ ಸೇತುವೆ ಮುಖೇನ ತರಬೇಕಾಗಿದೆ.

Related posts

Leave a Reply