Header Ads
Header Ads
Breaking News

ಪೆರ್ಮನ್ನೂರು ಗುಂಡಿ ಕೆರೆ ಗುಳುಂ, ಕೆರೆ ಬದಲಿಗೆ ಬಂದ ನಾಟಕದ ಬಾವಿ


ಇಪ್ಪತ್ತು ವರ್ಷಗಳ ಹಿಂದೆ ಅದು ಬೃಹತ್ ಕೆರೆಯಾಗಿತ್ತು. ಇಡೀ ಗ್ರಾಮದ ಕೃಷಿ ಚಟುವಟಿಕೆಯಿಂದ ಹಿಡಿದು ಕುಡಿಯುವ ನೀರಿಗೂ ಅದೇ ಕೆರೆ ನೀರೇ ಉಪಯೋಗವಾಗುತಿತ್ತು. ಆದರೆ ಇದೀಗ ಕೆರೆ ಅಭಿವೃದ್ಧಿಯಾಗದೆ ಸಂಪೂರ್ಣ ಮುಚ್ಚಿ ಹೋಗಿದ್ದು, ಇದನ್ನು ಮತ್ತೆ ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿ ೮೫ರ ಹರೆಯದ ಹಿರಿಯರೋರ್ವರು ಏಕಾಂಗಿಯಾಗಿ ಹೋರಾಟಕ್ಕೆ ಇಳಿದಿದ್ದಾರೆ.
ಪೆರ್ಮನ್ನೂರು ಗ್ರಾಮದ ಗಂಡಿ ಪ್ರದೇಶದ ಸರ್ವೆ ನಂಬ್ರ ೧೧೬/೪ರಲ್ಲಿ ೦.೭೩ ಎಕ್ರೆ ಸ್ಥಳ ಸರಕಾರಿ ಅಧೀನದ ಕೆರೆಯಾಗಿತ್ತು. ೨೦ ವರ್ಷಗಳ ಹಿಂದೆ ಬೇಸಿಗೆ ಕಾಲದಲ್ಲೂ ನೀರು ಇದ್ದುದರಿಂದ ಈ ಭಾಗದ ಜನರಿಗೆ ಕುಡಿಯುವ ನೀರಿಗೆ ಅಭಾವವೇ ಇರಲಿಲ್ಲ. ಅಲ್ಲದೆ ಕೃಷಿ ಚಟುವಟಿಕೆಗೂ ಬಹಳ ಉಪಯುಕ್ತವಾಗಿತ್ತು. ಕೆರೆಯ ಸಮೀಪದ ಮೂಡಣ ದಿಕ್ಕಿನಲ್ಲಿ ೨೦೦೪ರಲ್ಲಿ ಕಟ್ಟಡ ಕಾಮಗಾರಿ ಆರಂಭವಾಗಿತ್ತು. ಇಲ್ಲಿಗೆ ಹೋಗಲು ನಿರ್ಮಿಸಿದ ಸೇತುವೆ ಕೆರೆಯ ಭಾಗ ಕಬಳಿಸಿತ್ತು. ಅಲ್ಲದೆ ಕೆರೆಯ ಜಾಗದಲ್ಲಿ ಸದ್ಯ ಗಿಡಗಂಟೆಗಳು, ಮರ ಬೆಳೆದುನಿಂತಿವೆ. ಗಂಡಿ ಪ್ರದೇಶದ ಜನರ ಬಾವಿಗಳಲ್ಲಿ ಮಾರ್ಚ್ ಅಂತ್ಯದೊಳಗೆ ನೀರು ಖಾಲಿಯಾಗುತ್ತದೆ. ಅದಕ್ಕಾಗಿ ಪರ್‍ಯಾಯ ವ್ಯವಸ್ಥೆಯನ್ನು ಅವಲಂಬಿಸುವ ಸ್ಥಿತಿಯಿದೆ. ಅಲ್ಲದೆ ಕೃಷಿ ಚಟುವಟಿಕೆಯೂ ಕುಂಟಿತವಾಗುತ್ತಾ ಬಂದಿದೆ. ಇದರಿಂದ ಪ್ರದೇಶದಲ್ಲಿ ಬಹಳಷ್ಟು ನೀರಿನ ಅಭಾವವಿರುವುದರಿಂದ ಕೆರೆಯ ಅಭಿವೃದ್ಧಿಗೆ ಊರಿನ ಜನರು ೧೦ ವರ್ಷಗಳ ಹಿಂದೆಯೇ ಧ್ವನಿ ಎತ್ತಿದ್ದರು.
ಕೆರೆಯ ಹೂಳೆತ್ತಿ ಗ್ರಾಮದ ಜನರ ನೀರಿನ ಸಮಸ್ಯೆ ನೀಗಿಸಬೇಕೆಂದು ಒತ್ತಾಯಿಸಿ ಗಂಡಿ ನಿವಾಸಿಗಳು ೨೦೧೭ರ ಜ. ೧೯ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಅಂದಿನ ಜಿಲ್ಲಾಧಿಕಾರಿಗಳು ಉಳ್ಳಾಲ ಪುರಸಭೆ ಅಧಿಕಾರಿಗಳಿಗೆ ಸಮಸ್ಯೆ ಸೂಚಿಸಿದ್ದಲ್ಲದೆ, ರೂ. ೭ ಲಕ್ಷ ಕೆರೆ ಅಭಿವೃದ್ಧಿಗೆಂದು ಮಂಜೂರು ಮಾಡಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ರೂ. ೭ ಲಕ್ಷ ಅನುದಾನ ಮಂಜೂರಾದರೂ ಅದರಲ್ಲಿ ಕೆರೆಯನ್ನು ಅಭಿವೃದ್ಧಿ ನಡೆಸದೆ, ಕೆರೆಯ ಜಾಗದಲ್ಲಿ ಬಾವಿಯನ್ನು ತೋಡಲಾಗಿತ್ತು. ಆದರೆ ಬಾವಿಯಲ್ಲಿ ಬೇಸಿಗೆ ಕಾಲದಲ್ಲಿ ನೀರೇ ಇಲ್ಲದಂತಾಗಿ, ಜನ ನೀರಿಗಾಗಿ ಪರದಾಡಬೇಕಾಗಿದೆ. ಕೆರೆ ಜಾಗವನ್ನು ಖಾಸಗಿಯವರಿಗೆ ನೀಡುವ ದುರುದ್ದೇಶದಿಂದ ಬಾವಿಯನ್ನು ನಿರ್ಮಿಸಲಾಗಿದೆ ಅನ್ನುವ ಆರೋಪ ಸ್ಥಳೀಯರದ್ದಾಗಿದೆ. ಕೇಳಿದ್ದು ಕೆರೆ ಅಭಿವೃದ್ಧಿಯಾದರೂ, ಆಗಿದ್ದು ಕೇವಲ ಬಾವಿ ಮಾತ್ರ.
ಪಿಟಿಐ ಸಂಸ್ಥೆಯ ನಿವೃತ್ತ ಉದ್ಯೋಗಿ ಹಾಗೂ ಗಂಡಿ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿರುವ ೮೫ರ ಹರೆಯದ ಸುಂದರ್ ಅವರು ಕೆರೆ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಡುತ್ತಲೇ ಬಂದಿದ್ದಾರೆ. ಗ್ರಾಮದ ಜನರಲ್ಲಿ ಹೆಚ್ಚಿನವರು ಕೃಷಿ ಚಟುವಟಿಕೆಯಲ್ಲೇ ತೊಡಗಿಸಿಕೊಂಡವರಾಗಿರುವುದರಿಂದ ಕಚೇರಿ ಅಲೆದಾಟ ಅವರಿಂದ ಅಸಾಧ್ಯ. ಆದರೆ ಕಷ್ಟದಿಂದ ನಡೆದುಕೊಂಡು ಹೋಗುವ ಸುಂದರ್ ಅವರು ೧೦ ವರ್ಷಗಳಿಂದಲೂ ಕೆರೆ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ಕಚೇರಿ, ಶಾಸಕರ ಕಚೇರಿ, ಸ್ಥಳೀಯಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿಗೆ ಅಲೆದಾಡುತ್ತಲೇ ಬಂದಿದ್ದಾರೆ.

Related posts

Leave a Reply