Breaking News

ಉಷ್ಣ ವಲಯ ತಂಪಾಗಿಸುವ ಮಳೆ, ಹವಾಮಾನ ವೈಪರೀತ್ಯದ ನಾಸಾ ವರದಿ

ಹವಾಮಾನ ವೈಪರೀತ್ಯದ ಪರಿಣಾಮ ಉಷ್ಣ ವಲಯಗಳಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಜತೆಗೆ ಸದಾ ಉಷ್ಣಾಂಶದಿಂದ ಕೂಡಿರುವ ವಾತಾವರಣ ಕೂಡ ತಂಪಾಗುತ್ತಿದೆ.
ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಕೇಂದ್ರ ‘ನಾಸಾ’ ನಡೆಸಿದ ಅಧ್ಯಯನ ಈ ಬದಲಾವಣೆಯನ್ನು ಪತ್ತೆ ಹಚ್ಚಿದೆ. ಇತ್ತೀಚಿನ ದಶಕಗಳಲ್ಲಿ ಉಷ್ಣವಲಯಗಳ ಮೋಡಗಳಲ್ಲಿಯ ಕೆಲ ಬದಲಾವಣೆಗಳನ್ನು ಹ್ಯೂ ಸೂ ನೇತೃತ್ವದ ನಾಸಾ ವಿಜ್ಞಾನಿಗಳ ತಂಡ ಗಮನಿಸಿದೆ. ಭೂ ಮೇಲ್ಮೈ ತಾಪಮಾನ ಹೆಚ್ಚಳದಿಂದ ಉಷ್ಣ ವಲಯದಲ್ಲಿ ದಟ್ಟ ಮೋಡಗಳ ಸೃಷ್ಟಿಯಾಗುತ್ತಿವೆ. ಈ ಮೋಡಗಳು ಸುರಿಸುವ ಮಳೆಯಿಂದ ಉಷ್ಣವಲಯದ ಬಿಸಿಗಾಳಿಯು ತಂಗಾಳಿಯಾಗುತ್ತಿದೆ. ಒಂದೆಡೆ ನಿರಂತರವಾಗಿ ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಉಷ್ಣವಲಯಗಳಲ್ಲಿ ಮಳೆ ಪ್ರಮಾಣವೂ ಹೆಚ್ಚಾಗುತ್ತಿದೆ. ಕಳೆದ ಮೂರ್ನಾಲ್ಕು ದಶಕಗಳ ೨೩ ಭೂ ವಾತಾವರಣದ ಮಾದರಿಗಳನ್ನು ಈ ತಂಡ ಅಧ್ಯಯನ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬಂದಿದೆ.
ಭವಿಷ್ಯದಲ್ಲಿ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನದ ಪರಿಣಾಮ ಅಂದಾಜಿಸಲು ಈ ಅಧ್ಯಯನ ನೆರವಾಗಲಿದೆ ಎಂದು ನಾಸಾ ಹೇಳಿದೆ. ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವ ಉಷ್ಣವಲಯದ ಮೋಡಗಳು ವಾತಾವರಣದಿಂದ ಶಾಖ ಹೀರಿಕೊಳ್ಳುತ್ತಿವೆ. ಇಂತಹ ಮೋಡಗಳ ಸಂಖ್ಯೆ ಹೆಚ್ಚಾದಲ್ಲಿ ಭವಿಷ್ಯದಲ್ಲಿ ಉಷ್ಣ ವಲಯಗಳ ವಾತಾವರಣ ತಂಪಾಗಿರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Related posts

Leave a Reply