Header Ads
Header Ads
Header Ads
Breaking News

ಎಕ್ಸಲೆಂಟ್ ಕಾಲೇಜಿನಲ್ಲಿ ಕನ್ನಡ ಹಬ್ಬದ ಕಲರವ ಕನ್ನಡ ಶಾಲೆಗಳನ್ನು ಆಧುನೀಕರಣಗೊಳಿಸಿ ಮೂಡಬಿದರೆಯಲ್ಲಿ ಸಾಹಿತಿ ವೈದೇಹಿ ಅಭಿಪ್ರಾಯ

ಮೂಡುಬಿದಿರೆ ಸಮೀಪದ ಕಲ್ಲಬೆಟ್ಟುವಿನ ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಹಾಗೂ ಎಕ್ಸಲೆಂಟ್ ಪ್ರೌಢಶಾಲೆಯ ಆಶ್ರಯದಲ್ಲಿ ಶುಕ್ರವಾರ ಕನ್ನಡ ಹಬ್ಬ ಕಾರ್ಯಕ್ರಮ ನಡೆಯಿತು.
ಸಾಹಿತಿ ವೈದೇಹಿ ಕನ್ನಡ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ಕನ್ನಡ ಭಾಷೆ ಸ್ವಲ್ಪ ಉಳಿದಿದೆ ಎಂದರೆ ಅದರು ರೈತರು ಮತ್ತು ಆಟೋ ಚಾಲಕರಿಂದ ಮಾತ್ರ. ಇಂದು ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳ ದುಸ್ಥಿತಿಗೆ ಸರ್ಕಾರವೇ ಕಾರಣವಾಗುತ್ತಿದೆ.

ಸರಿಯಾದ ಸವಲತ್ತುಗಳಿಲ್ಲದೆ ಶಾಲೆಗಳು ಸೊರಗುತ್ತಿದೆ. ಸರ್ಕಾರವು ಕನ್ನಡ ಶಾಲೆಗಳನ್ನು ಆಧುನೀಕರಿಸಬೇಕಾಗಿದೆ. ಕನ್ನಡ ಭಾಷೆಯು ತಂತ್ರಜ್ಞಾನಗಳಿಗೆ ಒಗ್ಗುತ್ತಿದ್ದು, ಕನ್ನಡ ಮಾಧ್ಯಮ ಶಿಕ್ಷಣದಲ್ಲೂ ಹೊಸತನ ತರುವಂತಾಗಬೇಕು. ಒಂದನೇ ಕ್ಲಾಸಿನಿಂದ ಇಂಗ್ಲೀಷ್ ಮಾಧ್ಯಮ ಕಲಿಸುವ ಮೂಲಕ ಮಕ್ಕಳಿಗೆ ನಾವು ಅನ್ಯಾಯ ಮಾಡುತ್ತಿದ್ದೇವೆ. ಕನ್ನಡ, ಅದರ ಇತಿಹಾಸದಿಂದ ಮಕ್ಕಳನ್ನು ವಿಮುಖರಾಗಿಸುವ ಪ್ರಯತ್ನವು ಹಿರಿಯರಿಂದಾಗುತ್ತಿರುವುದು ಪಾಪದ ಕೆಲಸ. ಕನ್ನಡವನ್ನು ದೂರ ಮಾಡುವುದು ತಾಯಿಯಿಂದ ಮಗುವನ್ನು ದೂರ ಮಾಡಿದಂತೆ. ಯಕ್ಷಗಾನವು ಕನ್ನಡವನ್ನು ಅಂಕುರಿಸುತ್ತಿದ್ದು, ಕನ್ನಡ ಉಳಿವಿಗಾಗಿ ನೈಜ್ಯ ಸೇವೆ ಮಾಡುತ್ತಿದೆ. ನಮ್ಮೊಳಗೆ ನಮ್ಮ ಭಾಷೆಯ ಸತ್ವ ಬೇರೂರಿದರೆ, ಪ್ರಪಂಚ ಪರಿಕಲ್ಪನೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು ಎಂದರು.


ಚಿತ್ರನಟ ರವಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕನ್ನಡ ಸಮೃದ್ಧವಾಗಿ ಬೆಳೆಯುತ್ತಿದೆ. ನಾವು ಯಾವ ಪ್ರದೇಶದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದೇವೆಯೋ ಅಲ್ಲಿಯ ಭಾಷೆಯ ಬಗ್ಗೆ ಅರಿವು ನಮಗಿರಬೇಕು. ನಮ್ಮ ಸಾಮರ್ಥ್ಯವನ್ನು ನಾವು ಅರಿತು ಭಾಷೆಯ ಅಭಿಮಾನದೊಂದಿಗೆ ಜೀವನ ನಂದನಗೊಳಿಸಬಹುದು ಎಂದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾಲೇಜಿನಲ್ಲಿ ಕನ್ನಡ ಭಾಷೆಯ ಬಗ್ಗೆ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಪ್ರಥಮ ವರ್ಷದ ವಾಣಿಜ್ಯ ವಿದ್ಯಾರ್ಥಿ ಕಾರ್ತಿಕ್ ಉಮೇಶ್ ಬರೆದ ೩ನೇ ಕೃತಿ ‘ಜೇಡರ ಬಲೆ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಪುಸ್ತಕದ ಮಾರಾಟದಿಂದ ಬಂದ ಹಣವನ್ನು ಕಾರ್ಕಳದ ಅನಾಥಾಶ್ರಮಕ್ಕೆ ದಾನ ಮಾಡಲು ಉದ್ದೇಶ ಹೊಂದಿರುವ ಕಾರ್ತಿಕ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಎಕ್ಸಲೆಂಟ್ ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಪಿಯು ಕಾಲೇಜಿನ ಪ್ರಾಂಶುಪಾಲ ಸುರೇಶ್ ಬಾಬು, ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯಶೀಲ, ಸಂಯೋಜಕ ನವೀನ್ ಮರಿಕೆ ಉಪಸ್ಥಿತರಿದ್ದರು.

Related posts

Leave a Reply