Breaking News

ಎಡಿಜಿಪಿ ಅಲೋಕ್ ಮೋಹನ್ ಬಂಟ್ವಾಳಕ್ಕೆ ಭೇಟಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾರ್ಗದರ್ಶನ

ಕಲ್ಲಡ್ಕ ಗಲಭೆಯ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಬಂಟ್ವಾಳಕ್ಕೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್ ಮೋಹನ್ ಮತ್ತೆ ಬಂಟ್ವಾಳಕ್ಕೆ ಭೇಟಿ ನೀಡಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧೀನ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು.
ತಾಲೂಕಿನಲ್ಲಿ ಶಾಂತಿಯುತ ಪರಿಸ್ಥಿತಿಯಿದ್ದೂ ಯಾವುದೇ ತೊಂದರೆಯಿಲ್ಲ. ಬೆಂಜನಪದವು ಅಶ್ರಫ್ ಕೊಲೆ ಪ್ರಕರಣ ತನಿಖೆ ಪ್ರಗತಿಯಲ್ಲಿದ್ದು ಆರೋಪಿಗಳ ಶೀಘ್ರ ಬಂಧನವಾಗಲಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ಹೇಳಿದರು. ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ, ಯಾವ ರೀತಿಯಲ್ಲಿ ತನಿಖೆ ವಿಸ್ತರಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದ್ದೇವೆ, ತಕ್ಷಣವೇ ಆರೋಪಿಗಳನ್ನು ಬಂಧಿಸಲಿದ್ದೇವೆ ಎಂದರು. ಜಿಲ್ಲೆಯಲ್ಲಿ ಜೂ. ೨೭ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಯಾವುದೇ ರೀತಿಯ ಪ್ರತಿಭಟನೆಗಳಿಗೆ ಅವಕಾಶ ನೀಡುವುದಿಲ್ಲ. ನಿಷೇಧಾಜ್ಞೆ ಸಂದರ್ಭದಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ, ಇನ್ನೂ ಪ್ರತಿಭಟನೆಗೆ ಎಲ್ಲಿ ಅವಕಾಶ ಎಂದು ಎಡಿಜಿಪಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂಧರ್ಭ ಪಶ್ಚಿಮ ವಲಯದ ಐಜಿಪಿ ಹರಿಶೇಖರನ್, ದ.ಕ. ಜಿಲ್ಲಾ ನೂತನ ಎಸ್ಪಿ ಸುಧೀರ್ ರೆಡ್ಡಿ, ನಿರ್ಗಮನ ಎಸ್ಪಿ ಭೂಷಣ್ ಜಿ. ಬೊರಾಸೆ, ಚಿಕ್ಕಮಗಳೂರು ಎಸ್ಪಿ ಅಣ್ಣಮಲೈ ಮತ್ತಿತರ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಇದಕ್ಕಿಂತ ಮುಂಚೆ ಎಡಿಜಿಪಿ ಕಲ್ಲಡ್ಕ ಸಹಿತ ವಿವಿಧ ಭಾಗಗಳಿಗೆ ರೌಂಡ್ಸ್ ತೆರಳಿ ಕಾನೂನು ಸುವ್ಯವಸ್ಥೆಯ ಬಗ್ಗೆ ಕೈಗೊಂಡಿರುವ ಕ್ರಮಗಳನ್ನು ಹಾಗೂ ಅಲ್ಲಿನ ಸದ್ಯದ ಪರಿಸ್ಥಿತಿಯನ್ನು ವೀಕ್ಷಿಸಿದರು.

Related posts

Leave a Reply