Breaking News

ಎಡೆಬಿಡದ ಮಳೆಗೆ ಕಡಲು ತೆರೆಮೊರೆ, ಕೋಟ ಬೆಳ್ಳಿಮನೆ ತಡೆಗೋಡೆ ಸಮುದ್ರಪಾಲು

ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದ ಕೋಟ ಪರಿಸರದಲ್ಲಿ ಕಡಲು ಬಿರುಸುಗೊಂಡು ತಡೆಗೋಡೆಗೆ ಹಾಕಿದ ಕಲ್ಲುಗಳು ಸಮುದ್ರ ಪಾಲಾಗಿವೆ.
ಕೋಟ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳ್ಳಿಮನೆ ಪರಿಸರ ಮತ್ತು ಕೋಡಿ ಕನ್ಯಾನ, ಪಡುಕೆರೆ ಪರಿಸರದಲ್ಲಿ ನಿರಂತರ ಕಡಲು ಕೊರೆತ ಕಾಣಿಸಿಕೊಂಡಿದ್ದು, ಸಮುದ್ರ ತೀರದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಈ ಪ್ರದೇಶಗಳಲ್ಲಿ ಕಳೆದ ವರ್ಷ ವ್ಯಾಪಕ ಕಡಲ್ಕೊರೆತ ಆದ ಕಾರಣ ಜನರು ನಲುಗಿ ಹೋಗಿದ್ದರು. ಅತೀ ಹೆಚ್ಚು ಕಡಲು ಕೊರೆತ ಆಗುವ ಭಾಗದಲ್ಲಿ ಇಲಾಖೆ ಕಲ್ಲಿನ ತಡೆಗೋಡೆ ನಿರ್ಮಿಸುವ ಮೂಲಕ ಕಡಲ ತೀರವಾಸಿಗಳಿಗೆ ಒಂದಿಷ್ಟು ಮನಸ್ಥೈರ್ಯ ನೀಡಿದ್ದರು.
ಆದರೆ ಈ ಬಾರಿ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಕೋಟ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಮನೆ ಪರಿಸರದಲ್ಲಿ ಕಡಲಿಗೆ ಹಾಕಿರುವ ಕಲ್ಲಿನ ತಡೆಗೋಡೆ ಕಡಲು ಪಾಲಾಗುತ್ತಿದೆ. ೩ ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ಭೀಕರ ಕಡಲ್ಕೊರೆತ ಉಂಟಾಗಿ ಸಂಪರ್ಕ ರಸ್ತೆ ಕೂಡ ಸಮುದ್ರ ಪಾಲಾಗಿತ್ತು. ಆ ಬಳಿಕ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಬೆಳ್ಳಿಮನೆ ಪರಿಸರದಲ್ಲಿ ಸುಮಾರು ೫೦ ಮೀಟರ್ ಉದ್ದಕ್ಕೆ ಕಡಲಿಗೆ ತಡೆಗೋಡೆ ನಿರ್ಮಿಸಿದ್ದರು. ಈಗ ಒಂದು ಬದಿಯಿಂದ ತಡೆಗೋಡೆಯ ಕಲ್ಲುಗಳು ನಿಧಾನವಾಗಿ ನೀರು ಪಾಲಾಗುತ್ತಿವೆ.

Related posts

Leave a Reply