Header Ads
Header Ads
Breaking News

ಎಪಿ‌ಎಂಸಿಯಲ್ಲಿ ಖಾಲಿ ಹುದ್ದೆಯಿಂದ ಆಡಳಿತಕ್ಕೆ ಸಂಕಷ್ಟ ಸಾಮಾನ್ಯ ಸಭೆಯಲ್ಲಿ ಸದಸ್ಯರ ಕಳವಳ

 

ಪುತ್ತೂರು: ವರ್ಷಕ್ಕೆ ೬ ಕೋಟಿ ಆದಾಯ ಹೊಂದಿರುವ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡಲು ೧೫ ಹುದ್ದೆಗಳು ಮಂಜೂರುಗೊಂಡಿದ್ದು, ಇದೀಗ ಕೇವಲ ೩ ಮಂದಿ ಮಾತ್ರ ಕರ್ತವ್ಯದಲ್ಲಿರುವಾಗ ಎಪಿ‌ಎಂಸಿ ಕೆಲಸ ಮಾಡುವ ಬಗೆ ಹೇಗೆ ಎಂಬ ವಿಚಾರದ ಬಗ್ಗೆ ಎಪಿ‌ಎಂಸಿ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು.
ಶುಕ್ರವಾರ ಎಪಿ‌ಎಂಸಿ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಪುತ್ತೂರು ಎಪಿ‌ಎಂಸಿಯಲ್ಲಿ ಪ್ರಭಾರ ನೆಲೆಯಲ್ಲಿದ್ದ ಕಾರ್ಯದರ್ಶಿ ಎಷ್.ಕೆ. ಕೃಷ್ಣ ಮೂರ್ತಿ ಜುಲಾಯಿ ೩೧ಕ್ಕೆ ನಿವೃತ್ತಿ ಹೊಂದಲಿದ್ದು.ನಂತರ ಕೇವಲ ಇಬ್ಬರು ಮಾತ್ರ ಉಳಿಯುತ್ತಾರೆ. ಸರಕಾರ ಈ ಹುದ್ದೆಗಳನ್ನು ಭರ್ತಿ ಮಾಡದೇ ಹೋದರೆ ಇಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಎಪಿ‌ಎಂಸಿ ನಿರ್ದೇಶಕರಾದ ಪುಲಸ್ತ್ಯಾ ರೈ, ದಿನೇಶ್ ಮೆದು, ತೀರ್ಥಾನಂದ ದುಗ್ಗಳ, ತ್ರಿವೇಣಿ ಕರುಣಾಕರ ಪೆರ್ವೋಡಿ, ಮಂಜುನಾಥ್ ಎನ್.ಎಸ್., ಕೃಷ್ಣ ಕುಮಾರ್ ರೈ ಕೆದಂಬಾಡಿ ಗುತ್ತು ಕಳವಳ ವ್ಯಕ್ತಪಡಿಸಿದರು.
ಎಪಿ‌ಎಂಸಿಗೆ ಆರೂವರೆ ಕೋಟಿ ಆದಾಯವಿದೆ. ಇದರಲ್ಲಿ ಸರಕಾರದ ಸಂಚಿತ ನಿಧಿಗೆ ತಿಂಗಳಿಗೆ ಸುಮಾರು ೧೦ ಲಕ್ಷದಷ್ಟು ಮೊತ್ತವನ್ನು ಪಾವತಿ ಮಾಡುತ್ತಿದ್ದೇವೆ. ರಾಜ್ಯ ಕೃಷಿ ಮಾರಾಟ ಮಂಡಳಿಗೆ ವಂತಿಗೆ, ಕೃಷಿ ವಿಶ್ವವಿದ್ಯಾನಿಲಯ ವಂತಿಗೆ, ಆವರ್ತ ನಿಧಿಗೆ ಹಣ ಪಾವತಿ ಮಾಡಲಾಗುತ್ತದೆ. ನಮಗೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕೊಡಲು ಸರಕಾರಕ್ಕೇನು ಸಮಸ್ಯೆ ಎಂದು ನಿರ್ದೇಶಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಎಪಿ‌ಎಂಸಿ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ ಇಲಾಖೆಯ ಜಂಟಿ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಸಿಬ್ಬಂದಿ ಸಮಸ್ಯೆ ಬಗ್ಗೆ ಗಮನ ಸೆಳೆಯಲಾಗಿದೆ. ಒಬ್ಬ ಖಾಯಂ ಕಾರ್ಯದರ್ಶಿಯನ್ನು ನೀಡುವಂತೆ ವಿನಂತಿಸಲಾಗಿದೆ. ಸಮಿತಿ ಸಭೆಯ ನಿರ್ಣಯವನ್ನೂ ಕಳುಹಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಖಾಯಂ ಕಾರ್ಯದರ್ಶಿ ಸಿಗುವ ನಿರೀಕ್ಷೆ ಇದೆ ಎಂದರು.

ಪ್ರಭಾರ ಕಾರ್ಯದರ್ಶಿ ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ, ರಾಜ್ಯದ ಎಪಿ‌ಎಂಸಿಗಳಲ್ಲಿ ಹಿಂದೆ ೩೫೦೦ ಹುದ್ದೆಗಳಿತ್ತು. ಈಗ ೬೫೦೦ ಸಾವಿರಕ್ಕೇರಿದೆ. ಇದರಲ್ಲಿ ಕೇವಲ ೧೨೦೦ ಹುದ್ದೆಗಳನ್ನು ಮಾತ್ರ ಭರ್ತಿಯಾಗಿದೆ. ಉಳಿದೆಲ್ಲ ಹುದ್ದೆಗಳನ್ನು ಆಯಾ ಎಪಿ‌ಎಂಸಿಗಳೇ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿವೆ. ನಮ್ಮ ಎಪಿ‌ಎಂಸಿಗೆ ಎಂಜಿನಿಯರ್ ಕೂಡ ಇಲ್ಲ. ಎಂಟು ಎಪಿ‌ಎಂಸಿಗೆ ಒಬ್ಬರು ಎಂಜಿನಿಯರ್ ಇದ್ದು, ಅವರೇ ಇಲ್ಲಿಗೂ ಬಂದು ಹೋಗುತ್ತಿದ್ದಾರೆ ಎಂದರು. ಪುತ್ತೂರು ಎಪಿ‌ಎಂಸಿ ಹುದ್ದೆಗಳನ್ನು ಭರ್ತಿ ಮಾಡುವಂತೆ ವಿನಂತಿಸಿ ಇಲಾಖೆಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಎಪಿ‌ಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ನಿರ್ದೇಶಕರಾರ ಶಕೂರ್ ಹಾಜಿ, ತ್ರಿವೇಣಿ ಕರುಣಾಕರ ಪೆರ್ವೋಡಿ, ಪುಲಸ್ತ್ಯಾ ರೈ, ದಿನೇಶ್ ಮೆದು, ಮೇದಪ್ಪ ಗೌಡ, ಕೊರಗಪ್ಪ, ಕುಶಾಲಪ್ಪ ಗೌಡ ಅನಿಲ, ಕಾರ್ತಿಕ್ ರೈ, ತೀರ್ಥಾನಂದ ದುಗ್ಗಳ, ಕೃಷ್ಣ ಕುಮಾರ್ ರೈ, ಮಂಜುನಾಥ ಎನ್.ಎಸ್., ನಾಮ ನಿರ್ದೇಶಿತರಾದ ಗೀತಾ ದಾಸರಮೂಲೆ, ಶಶಿಕಿರಣ್ ರೈ, ರಾಮಕೃಷ್ಣ ಉಪಸ್ಥಿತರಿದ್ದರು. ಲೆಕ್ಕಪತ್ರ ವಿಭಾಗದ ರಾಮಚಂದ್ರ ಸಹಕರಿಸಿದರು.

ಎಪಿ‌ಎಂಸಿ ಯಾರ್ಡ್‌ನ ಒಳಗಿರುವ ಕಟ್ಟಡಗಳಿಗೆ ತೆರಿಗೆ ಕಟ್ಟುವಂತೆ ನಗರಸಭೆಯಿಂದ ನೊಟೀಸ್ ಬಂದಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ೩೭ ಅಂಗಡಿಗಳಿಗೆ ನಾವು ತೆರಿಗೆ ಕಟ್ಟಿದ್ದೇವೆ. ಇನ್ನೂ ಕೆಲವಕ್ಕೆ ಕಟ್ಟಲು ಸೂಚಿಸಲಾಗಿದೆ. ಆದರೆ ಅದರ ಡೋರ್ ನಂಬರ್ ಕೊಟ್ಟಿಲ್ಲ. ಯಾವ ಕಟ್ಟಡ ಎಂದು ನಗರಸಭೆಯರು ಹೇಳಲಿ. ಇಲ್ಲದಿದ್ದರೆ ಅವರ ಎಂಜಿನಿಯರ್ ಮತ್ತು ನಮ್ಮ ಎಂಜಿನಿಯರ್‌ಗಳು ಇದ್ದು ಜಂಟಿ ಸರ್ವೆ ನಡೆಸೋಣ. ಆಮೇಲೆ ಯಾವ ಕಟ್ಟಡಗಳಿಗೆ ಡೋರ್ ನಂಬರ್ ಕೊಡಲು ಬಾಕಿ ಇದೆಯೋ ಅದನ್ನು ಕೊಡಲಿ. ಆಮೇಲೆ ತೆರಿಗೆ ಕಟ್ಟೋಣ. ಈ ಬಗ್ಗೆ ನಾವು ನಗರಸಭೆಗೆ ಪತ್ರ ಬರೆದಿದ್ದೇವೆ ಎಂದು ಅಧ್ಯಕ್ಷರು ನುಡಿದರು. ಎಪಿ‌ಎಂಸಿ ಆವರಣದ ಒಳಗೆ ರೈತರಿಗೆ ಮತ್ತು ವರ್ತಕರಿಗೆ ಸಹಕಾರಿಯಾಗುವಂತೆ ಜನೌಷಧಿ ಕೇಂದ್ರ ತೆರಯಬೇಕೆಂದು ನಿರ್ದೇಶಕಿ ತ್ರಿವೇಣಿ ಕರುಣಾಕರ ಪೆರ್ವೋಡಿ ಒತ್ತಾಯಿಸಿದರು.

ನಗರದ ಎಪಿ‌ಎಂಸಿ ರಸ್ತೆ ಎಪಿ‌ಎಂಸಿ ಆಸ್ತಿ. ಇದನ್ನು ಪುರಸಭೆಗೆ ಹಸ್ತಾಂತರಿಸುವಂತೆ ೨೦೦೭ರಲ್ಲಿ ಇಲಾಖೆ ಸೂಚಿಸಿದೆ. ನಾವು ಕೊಡಲು ರೆಡಿಯಾಗಿದ್ದೇವೆ. ಆದರೆ ನಗರಸಭೆ ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದು ಅಧ್ಯಕ್ಷರು ತಿಳಿಸಿದರು. ಎಪಿ‌ಎಂಸಿಯೇ ಭೂಸ್ವಾಧೀನ ಮಾಡಿ ನಿರ್ಮಿಸಿದ ರಸ್ತೆ ಇಧಾಗಿದ್ದು, ಆರ್‌ಟಿಸಿ ಎಪಿ‌ಎಂಸಿ ಹೆಸರಿನಲ್ಲೇ ಇದೆ. ಈ ರಸ್ತೆಯನ್ನು ಸ್ಥಳೀಯ ಸಂಸ್ಥೆಗೆ ಹಸ್ತಾಂತರ ಮಾಡಬಹುದು. ಆದರೆ ರಸ್ತೆಯ ಅಕ್ಕಪಕ್ಕದಲ್ಲಿರುವ ಕಟ್ಟಡ ಹಾಗೂ ಅಂಗಡಿಗಳ ತೆರಿಗೆ ಸಂಗ್ರಹವನ್ನು ನಗರಸಭೆಯೇ ಮಾಡುತ್ತಿದೆ, ರಸ್ತೆ ಅಭಿವೃದ್ಧಿಗೆ ಮಾತ್ರ ನಮ್ಮ ಮೇಲೆ ಗೂಬೆ ಕೂರಿಸುತ್ತಿದೆ. ರಸ್ತೆಯನ್ನು ಅವರೇ ಪಡೆದುಕೊಂಡು ನಿರ್ವಹಣೆ ಮಾಡಲಿ. ಒಂದು ವೇಳೆ ಅವರು ಸ್ವೀಕರಿಸಲು ನಿರಾಕರಿಸಿದರೆ ನಾವೇನೂ ಮಾಡುವಂತಿಲ್ಲ. ಆದರೆ ಅದರ ಅಭಿವೃದ್ಧಿ ಕಾರ್ಯ ನಾವು ಮಾಡುವುದಿಲ್ಲ ಎಂದು ಅಧ್ಯಕ್ಷರು ಹೇಳಿದರು.

ಈ ಸಂದರ್ಭದಲ್ಲಿ ಸನ್ಮಾನಿತರಾದ ಕೃಷ್ಣಮೂರ್ತಿ ಕುರಿತು ಪುತ್ತೂರು ಎಪಿ‌ಎಂಸಿ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಎಪಿ‌ಎಂಸಿ ನಿರ್ದೇಶಕರಾದ ಪುಲಸ್ತ್ಯಾ ರೈ, ಎಪಿ‌ಎಂಸಿ ಮಾಜಿ ಉಪಾಧ್ಯಕ್ಷ ಕರುಣಾಕರ ಗೌಡ, ಸಹಾಯಕ ಮಾರುಕಟ್ಟೆ ಮೇಲ್ವಿಚಾರಕ ರಾಮಚಂದ್ರ ಮಾತನಾಡಿ ನಿವೃತ್ತ ಬದುಕಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಚ್.ಕೆ.ಕೃಷ್ಣಮೂರ್ತಿ ಅವರ ಪತ್ನಿ ಸರ್ವಮಂಗಳಾ ಉಪಸ್ಥಿತರಿದ್ದರು.

ವರದಿ: ಅನೀಶ್ ಪುತ್ತೂರು

Related posts

Leave a Reply