Header Ads
Header Ads
Breaking News

ಎರಡನೇ ವಾರಕ್ಕೆ ಮುನ್ನುಗ್ಗುತ್ತಿರುವ ದೇವರಾಜ್ ಪೂಜಾರಿ ನಿರ್ದೇಶನದ “ಕಿನಾರೆ” ಸಿನೆಮಾ

ಕುಂದಾಪುರ: ಮಾನಸಿಕ ಅಸ್ವಸ್ಥರಾದ ಮುಗ್ದ ಪ್ರೇಮಿಗಳಿಬ್ಬರ ನಡುವೆ ಸಾಗುವ ಕಥಾ ಹಂದರವೇ ಕಿನಾರೆ. ಭಾವನಾತ್ಮಕ ಹಾಗೂ ಕಲಾತ್ಮಕವಾಗಿ ಚಿತ್ರಕಥೆಯನ್ನು ಹೆಣೆಯಲಾಗಿದ್ದು, ಈಗಾಗಲೇ ಒಂದು ವಾರಗಳ ಯಶಸ್ವಿ ಪ್ರದರ್ಶನಗೊಂಡು ಎರಡನೇ ವಾರಕ್ಕೆ ಮುನ್ನುಗ್ಗುತ್ತಿದೆ. ಬಹುವರ್ಷಗಳ ಕನಸಾದ ಕಿನಾರೆ ಸಿನೆಮಾ ಚಂದನವನದಲ್ಲಿ ನನಗೊಂದು ಗಟ್ಟಿ ನೆಲೆ ಒದಗಿಸಲಿದೆ ಎಂಬ ಭರವಸೆ ಇದೆ ಎಂದು ರಾಜ್ಯದಾದ್ಯಂತ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಿನಾರೆ ಸಿನೆಮಾದ ನಿದೇರ್ಶಕ ದೇವರಾಜ್ ಪೂಜಾರಿ ಹೇಳಿದರು.ಶುಕ್ರವಾರ ನಗರದ ಶರೋನ್ ಹೊಟೇಲ್‌ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವರ್ಷಗಟ್ಟಲೇ ಕಾದು ಕರಾವಳಿಯ ಅದ್ಭುತ ತಾಣಗಳಲ್ಲೇ ಚಿತ್ರವನ್ನು ಚಿತ್ರೀಕರಿಸಿದ್ದೇವೆ. ಸುಮ್ಮನೆ ಏನೋ ಮಾಡಬೇಕು ಎಂದು ಮಾಡಿದ್ದಲ್ಲ.

ಗುಣಮಟ್ಟದ ಚಿತ್ರ ಜನರಿಗೆ ತಲುಪಿಸಬೇಕು. ಕಥೆಯಲ್ಲಿ ಒಂದೊಳ್ಳೆ ಸಾರಾಂಶ ಇರಬೇಕೆಂದು ಕಿನಾರೆಯನ್ನು ರೂಪಿಸಿದ್ದೇವೆ. ಹೊಸ ಕಥೆ, ಹೊಸ ವಿಚಾರ, ಹೊಸ ಪ್ರಯೋಗ ಕಿನಾರೆಯಲ್ಲಿ ಮೇಳೈಸಿದ್ದು ಸಿನೆಮಾ ನೋಡಿದವರಿಗೆ ಬಾಲ್ಯದ ನೆನಪು, ಪ್ರೀತಿಯ ಅನುಭವ ಕಟ್ಟಿಕೊಡುತ್ತದೆ. ಎಲ್ಲವೂ ವಿಭಿನ್ನವಾಗಿ ಕಾಣುವಷ್ಟರ ಮಟ್ಟಿಗೆ ಕಿನಾರೆ ಮೂಡಿಬಂದಿದೆ ಎಂದವರು ತಿಳಿಸಿದರು.ರೆಡ್ ಆಪಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಸತೀಶ್‌ರಾಜ್ ಹಾಗೂ ಗೌತಮಿ ಜಾಧವ್ ಮೊದಲ ಬಾರಿಗೆ ನಾಯಕ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಸಿಹಿಕಹಿ ಚಂದ್ರು, ಪ್ರಮೋದ್ ಶೆಟ್ಟಿ, ದತ್ತಣ್ಣ, ಅಪೂರ್ವ ಪುರೋಹಿತ್, ಅರುಣಾ ಬಾಲರಾಜ್ ಸೇರಿದಂತೆ ಅನುಭವಿ ತಾರಾ ಬಳಗವೇ ಸಿನಿಮಾದಲ್ಲಿದೆ. ಸಿನೆಮಾದ ಶೇಕಡಾ೮೦ ರಷ್ಟು ಚಿತ್ರೀಕರಣ ಮಂಗಳೂರು, ಉಡುಪಿ, ಕುಂದಾಪುರದ ಪ್ರದೇಶಗಳಲ್ಲಿ ನಡೆಸಿದ್ದು ಸ್ಥಳೀಯ ಕಲಾವಿದರಾದ ರಘು ಪಾಂಡೇಶ್ವರ್, ಶಮಂತ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ ಎಂದರು.

ಅಭಿಷೇಕ್ ಕಾಸರಗೋಡು ಹಾಗೂ ಅಭಿರಾಮ್ ಅವರ ಛಾಯಾಗ್ರಹಣ, ವಿಕ್ರಮ್ ಶ್ರೀಧರ್ ಅವರ ಸಂಕಲನ, ಸುರೇಂದ್ರನಾಥ್ ಸಂಗೀತ ಸಂಯೋಜನೆಯಲ್ಲಿ ಸಾಹಿತಿಗಳಾದ ಜಯಂತ ಕಾಯ್ಕಿಣಿ, ಯೋಗರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್ ವರ ರಚನೆಯಲ್ಲಿ ಮೂಡಿಬಂದಿದೆ. ಗಾಯಕರಾದ ಸೋನು ನಿಗಮ್, ವಿಜಯ್ ಪ್ರಕಾಶ್, ಟಿಪ್ಪು, ಮಧುಬಾಲಕೃಷ್ಣ, ಚಂದನ್ ಶೆಟ್ಟಿ ಹಡುಗಳನ್ನು ಹಾಡಿದ್ದಾರೆ ಎಂದರು.ಚಿತ್ರದ ನಟಿ ಗೌತಮಿ ಜಾದವ್ ಮಾತನಾಡಿ, ಚಿತ್ರಕ್ಕೆ ಆಯ್ಕೆಯಾದ ಬಳಿಕ ಆರೇಳು ತಿಂಗಳು ಕರಾವಳಿ ಭಾಷೆ, ಸಂಸ್ಕೃತಿಯ ಬಗ್ಗೆ ತರಬೇತಿ ನೀಡಿದ್ದಾರೆ.

ಎಲ್ಲಾ ನಟರಿಗೂ ಜನಮನದಲ್ಲಿ ಉಳಿಯುವ ಪಾತ್ರಗಳು ಇಷ್ಟ ಆಗುತ್ತದೆ. ಎಲ್ಲರಂತೆ ನನಗೂ ಕೂಡ ಚಾಲೆಂಜ್ ಆಗಿರುವ ಪಾತ್ರಗಳನ್ನು ನಿಭಾಯಿಸಬೇಕೆಂಬ ಮಹದಾಸೆ ಇತ್ತು. ಕಿನಾರೆ ಸಿನೆಮಾ ನಿರ್ದೇಶಕರು ನನಗೆ ಒಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಈ ಸಿನೆಮಾದಲ್ಲಿ ನಾನು ಮೀರಾ ಹೆಸರಿನ ವಿಭಿನ್ನವಾದ ಪಾತ್ರವನ್ನು ನಿರ್ವಹಿಸಿದ್ದೇನೆ. ವೃತ್ತಿ ಬದುಕಿನಲ್ಲಿ ವಿಭಿನ್ನವಾದ ಪಾತ್ರ ಮಾಡಿದ ಖುಷಿ ನನಗಿದೆ ಎಂದರು.ಚಿತ್ರದ ನಾಯಕ ನಟ ಸತೀಶ್‌ರಾಜ್ ಮಾತನಾಡಿ, ಹಿಂದೆ ನಾಟಕಗಳಲ್ಲಿ ನಟಿಸಿದ ಅನುಭವವಿದ್ದು, ನನ್ನ ಪ್ರಥಮ ಸಿನೆಮಾವೇ ಕಿನಾರೆ. ಸಿನೆಮಾ ಈಗಾಗಲೇ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಚಿತ್ರದ ಚಿತ್ರೀಕರಣವೆಲ್ಲವೂ ಕರಾವಳಿಯಲ್ಲೇ ಆಗಿರುವುದರಿಂದ ಕರಾವಳಿಯ ಜನರು ಸಾಥ್ ಕೊಡಬೇಕು ಎಂದರು.

Related posts

Leave a Reply