Header Ads
Header Ads
Breaking News

ಎರಡೂ ಬದಿ ರಸ್ತೆಯೇ ಇಲ್ಲದೆ ಸೇತುವೆ ನಿರ್ಮಾಣ. ಊರ ಸೇರಬೇಕಿದ್ದರೆ ಕೊಂಕಣ ಸುತ್ತಿ ಮೈಲಾರ ಸೇರಬೇಕು.

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಕೂಡ ಇಂದಿಗೂ ಹಲವಾರು ಹಳ್ಳಿಗಳಲ್ಲಿ ರಸ್ತೆ, ಸೇತುವೆಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಆದರೆ ಇಲ್ಲೊಂದು ಊರಲ್ಲಿ ಸುಸಜ್ಜಿತವಾದ ಸೇತುವೆ ಇದ್ದರೂ ಕೂಡ ಈ ಸೇತುವೆಯ ಮೇಲೆ ಯಾರೂ ಓಡಾಟ ನಡೆಸುತ್ತಿಲ್ಲ. ಆರು ವರ್ಷಗಳ ಹಿಂದೆ ನಿರ್ಮಿಸಿರುವ ಈ ಸೇತುವೆ ಇಲ್ಲಿನ ನಿವಾಸಿಗಳಿಗೆ ಕಿಂಚಿತ್ತೂ ಉಪಯೋಗಕ್ಕಿಲ್ಲ. ಸೇತುವೆ ಇದ್ದರೂ ಸುಮಾರು ಹದಿನೈದು ಕಿ.ಮೀ ಸುತ್ತುವರಿದು ಬರಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದು. ಅಷ್ಟಕ್ಕೂ ಈ ಊರು ಯಾವುದು, ಇಲ್ಲಿನ ಸಮಸ್ಯೆ ಏನು ಅಂತೀರಾ.. ಈ ಸ್ಟೋರಿ ನೋಡಿ.
ವಾಯ್ಸ್೧; ಹಿಂದೆ ಮುಂದೆ ನೋಡದೆ, ಗೊತ್ತುಗುರಿ ಇಲ್ಲದೆ ಸರ್ಕಾರಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದರೆ ಏನೆಲ್ಲಾ ಫಜೀತಿ ಆಗುತ್ತದೆ ಎನ್ನೋದಕ್ಕೆ ಇದೊಂದು ಸ್ಯಾಂಪಲ್ ಅಷ್ಟೆ. ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ವ್ಯಾಪ್ತಿಯ ಕೆಂಚನೂರು ದಶಭುಜ ಗಣಪತಿ ದೇವಸ್ಥಾನದಿಂದ ಕೆಂಚನೂರು ಶಾಲೆಗೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ಸೇತುವೆ ಇಂದಿಗೂ ಜನರಿಗೆ ಉಪಯೋಗವಾಗುತ್ತಿಲ್ಲ. ಸೇತುವೆಯ ಎರಡೂ ಬದಿಗಳಲ್ಲಿ ರಸ್ತೆಗಳಿಲ್ಲದೆ ಇಲ್ಲಿನ ಜನರು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಆರು ವರ್ಷಗಳ ಹಿಂದೆ ಬಿಜೆಪಿಯ ಲಕ್ಷ್ಮೀನಾರಾಯಣ ಶೇರುಗಾರ್ ಶಾಸಕರಾಗಿದ್ದ ಅವಧಿಂiiಲ್ಲಿ ಸಣ್ಣ ನೀರಾವರಿ ಅನುದಾನದಿಂದ ಐವತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆ ಬಳಿಕ ಶಾಸಕರಾಗಿ ಆಯ್ಕೆಯಾದ ಕೆ. ಗೋಪಾಲ ಪೂಜಾರಿಯವರ ಅವಧಿ ಮುಗಿದು ಇದೀಗ ಸುಕುಮಾರ್ ಶೆಟ್ಟಿ ಶಾಸಕರಾಗಿ ಆಯ್ಕೆಯಾದರೂ ಇಲ್ಲಿನ ಜನರ ಸಮಸ್ಯೆಗಳಿಗೆ ಇಂದಿಗೂ ಮುಕ್ತಿ ಸಿಕ್ಕಿಲ್ಲ. ಬರೋಬ್ಬರಿ ಮೂವರು ಶಾಸಕರನ್ನು ಕಂಡರೂ ಕೂಡ ರಸ್ತೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದಿಯೇ ಹೊರತು ಇದನ್ನು ಬಗೆಹರಿಸುವ ಗೋಜಿಗೆ ಇದುವರೆಗೂ ಯಾವ ಜನಪ್ರತಿನಿಧಿಗಳು ಹೋಗದಿರುವುದು ಸ್ಥಳೀಯರ ಕಣ್ಣು ಕೆಂಪಗಾಗಿಸಿದೆ.ಕೆಂಚನೂರಿನ ಮಧ್ಯೆ ಹಾದು ಹೋಗುವ ಚಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆ ನಿರ್ಮಾಣಗೊಳ್ಳುತ್ತಿರುವ ಸಂದರ್ಭದಲ್ಲಿ ಇಲ್ಲಿನ ಜನರ ಖುಷಿಗೆ ಪಾರವೇ ಇಲ್ಲವೆಂಬಂತಾಗಿತ್ತು. ಆದರೆ ಇಷ್ಟೊಂದು ದೊಡ್ಡ ಮೊತ್ತದ ಅನುದಾನದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಿದರೂ ಸೇತುವೆಯ ಎರಡೂ ಬದಿಗಳಲ್ಲಿ ರಸ್ತೆಗಳಿಲ್ಲ. ಮೊದಲು ರಸ್ತೆ ಸಮಸ್ಯೆ ನಿವಾರಿಸಿಕೊಂಡು ಸೇತುವೆ ಮಾಡುವ ಬದಲು ಮೊದಲೇ ಸೇತುವೆ ನಿರ್ಮಿಸಿದ್ದರಿಂದ ಇದೀಗ ಸೇತುವೆ ಜನರ ಉಪಯೋಗಕ್ಕೆ ಇಲ್ಲದಂತಾಗಿದೆ. ಸೇತುವೆ ನಿರ್ಮಾಣದ ಸಮಯ ಖಾಸಗಿ ಜಾಗದವರು ರಸ್ತೆಗೆ ಸ್ಥಳ ಬಿಟ್ಟು ಕೊಡುವ ಬಗ್ಗೆ ಸ್ಪಷ್ಟತೆ ಇಲ್ಲದೆ ಸೇತುವೆ ನಿರ್ಮಾಣ ಮಾಡಿದ ಪರಿಣಾಮ ಇದೀಗ ಸೇತುವೆಯ ಎರಡೂ ಬದಿಗಳಲ್ಲಿ ರಸ್ತೆಯೇ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಜಾಡಿ, ಕೆಂಚನೂರಿಂದ ಪ್ರತಿದಿನ ಕಾಲೇಜಿಗೆ ಹೋಗುವ ೪೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದು, ಅಂಗನವಾಡಿ, ಪ್ರಾಥಮಿಕ ಶಾಲೆಗೆ ಹೋಗುವ ಹತ್ತಾರು ಮಕ್ಕಳು ಸುತ್ತಿಬಳಸಿ ಶಾಲೆ, ಕಾಲೇಜು ಸೇರಬೇಕಾಗಿದೆ. ಪರಿಸರದ ಜನರ ಮುಖ್ಯ ಮಾರುಕಟ್ಟೆ ಪಡಿತರ ಸಾಮಗ್ರಿ ತರಲು ಮಾವಿನಕಟ್ಟೆ ಹೋಗಬೇಕಿದ್ದು, ಸಂಪರ್ಕ ರಸ್ತೆಯಾದರೆ ಕೇವಲ ಐದು ಕಿಮೀ ಅಂತರದಲ್ಲಿ ಮಾವಿನಕಟ್ಟೆ ಸೇರಲು ಸಾಧ್ಯ. ಈಗ ಇಲ್ಲಿನ ಜನರು ನೆಂಪು ಸರ್ಕಲ್ಲಿಗೆ ಬಂದು, ಅಲ್ಲಿಂದ ಎರಡು ಬಸ್ ಬದಲಾಯಿಸಿ 15 ಕಿಮೀ ಸುತ್ತಿ ಮಾವಿನಕಟ್ಟೆ ಸೇರಬೇಕು. ಒಟ್ಟಾರೆ ಸೇತುವೆ ಆದರೂ ಸಂಪರ್ಕ ರಸ್ತೆಯಿಲ್ಲದೆ ಜನರ ಓಡಾಟ ತಪ್ಪದಿರುವುದು ಖೇದಕರ. ಮಳೆಗಾಲದಲ್ಲಿ ಹೇಗೋ ಸುತ್ತುವರಿದು ಬರುವ ಇಲ್ಲಿನ ನಿವಾಸಿಗಳು ಬೇಸಿಗೆಯಲ್ಲಿ ಕಿಂಡಿ ಅಣೆಕಟ್ಟಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗಾಗಿ ಸೇತುವೆಗೆ ಸಮೀಪವೇ ನಿರ್ಮಿಸಲಾದ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿದ ಬಿಳಿಕ ನೀರು ತುಂಬಿ ಗದ್ದೆಗಳಿಗೆ ನುಗ್ಗುವುದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ. ಆದರೂ ಬೇಸಿಗೆಯ ಕೊನೆಯಲ್ಲಿ ಗದ್ದೆಯಂಚಿನಲ್ಲೇ ಸರ್ಕಸ್ ಮಾಡಿಕೊಂಡು ಸೇತುವೆ ಮೂಲಕ ಇಲ್ಲಿನ ಜನರು ಪ್ರಯಾಣ ಬೆಳೆಸುತ್ತಾರೆ. ಸೇತುವೆಯ ಎರಡೂ ಕಡೆಗಳಲ್ಲಿ ರಸ್ತೆ ಮಾಡಿದರೆ ಸರ್ಕಾರದ ಅನುದಾನ ಖರ್ಚು ಮಾಡಿ ನಿರ್ಮಿಸಿದ ಸೇತುವೆಗೆ ಒಂದು ಬೆಲೆ ಬರುತ್ತದೆ. ಮಳೆಗಾದಲ್ಲಿ ನೆರೆ ನೀರು ಬಯಲಲ್ಲಿ ನುಗ್ಗಿ ನಡೆದಾಡಲು ಕಷ್ಟವಾದರೆ ಬೇಸಿಗೆಯಲ್ಲಿ ಕಿಂಡಿ ಆಣೆಕಟ್ಟಿನಿಂದಾಗಿ ಸಂಚರಿಸಲು ಕಷ್ಟವಾಗುತ್ತಿದೆ. ಒಟ್ಟಿನಲ್ಲಿ ಇಲ್ಲಿನ ನಿವಾಸಿಗಳಿಗೆ ಅನುಗಾಲವೂ ಸಂಕಷ್ಟ ತಪ್ಪಿದ್ದಲ್ಲ. ಆರು ವರ್ಷಗಳಿಂದ ಇಲ್ಲಿನ ಜನರು ರಸ್ತೆ ಮಾಡಿಕೊಡಿ ಎಂದು ಸಂಬಂಧಪಟ್ಟ ಜನಪ್ರತಿನಿಧಿಗಳಲ್ಲಿ ಪ್ರತೀ ಭಾರಿ ಬೇಡಿಕೆ ಇಟ್ಟಾಗಲೂ, ಜಾಗದ ಸಮಸ್ಯೆ ಇದೆ. ರಸ್ತೆ ನಿರ್ಮಾಣಕ್ಕೆ ಖಾಸಗಿಯವರು ಜಾಗ ಬಿಟ್ಟುಕೊಡುತ್ತಿಲ್ಲ ಎಂದು ತಲೆ ಸವರಿ ವಾಪಾಸು ಕಳುಹಿಸುತ್ತಾರೆಯೇ ವಿನಃ ಈ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಇದುವರೆಗೆ ಯಾರೂ ಹೋಗಿಲ್ಲ. ಶಾಸಕರ ಮುಂದಾಳತ್ವದಲ್ಲಿ ಜಾಗಕ್ಕೆ ಸಂಬಂಧಪಟ್ಟವರನ್ನು ಕರೆದು ಕೂತು ಮಾತನಾಡಿದರೆ ಕ್ಷಣಾರ್ಧದಲ್ಲೇ ಬಗೆಹರಿಯುವ ಸಮಸ್ಯೆ ಇದು. ಈಗಾಗಲೇ ಕೆಲವು ಕಡೆಗಳಲ್ಲಿ ರಸ್ತೆ ಸಮಸ್ಯೆ ಬಗೆಹರಿಸಿದ್ದ ಬೈಂದೂರಿನ ನೂತನ ಶಾಸಕ ಸುಕುಮಾರ್ ಶೆಟ್ಟರು ಕೆಂಚನೂರು ರಸ್ತೆ ಸಮಸ್ಯೆ ಬಗೆಹರಿಸುವರೆ ಎಂದು ಕಾದು ನೋಡಬೇಕಿದೆ.

Related posts

Leave a Reply