Header Ads
Breaking News

ಎಲ್ಲೆಲ್ಲೂ ಹೋಳಿಯ ಬಣ್ಣಗಳ ಚಿತ್ತಾರ: ಕಲರ್‌ಫುಲ್ಲಾಗಿ ಮಿಂಚಿದ ಕುಂದಾಪುರ

ಕಾಮನಬಿಲ್ಲಿನ ಬಣ್ಣಗಳ ಹಬ್ಬ ಹೋಳಿ ಹಬ್ಬ. ವರ್ಷವಿಡೀ ಬದುಕಲ್ಲಿ ಸಂತೋಷದ ಹೊಳೆಯೇ ಹರಿಯಲಿ ಎಂದು ಹಾರೈಸುವ ರಂಗುರಂಗಿನ ಹಬ್ಬ ಇದು. ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಸಾಮಾನ್ಯವಾದ ಹೋಳಿ ಹಬ್ಬವನ್ನು ಕುಂದಾಪುರದಲ್ಲೂ ಹಲವು ವರ್ಷಗಳಿಂದ ಅತ್ಯಂತ ವೈಭವದಿಂದ ಖಾರ್ವಿ ಸಮುದಾಯ ಆಚರಿಸುತ್ತಿದೆ. ಕುಂದಾಪುರದಲ್ಲಿ ನಡೆದ ಖಾರ್ವಿ ಸಮಾಜದ ಹೋಳಿ ಹಬ್ಬದ ಒಂದು ಝಲಕ್ ಇಲ್ಲಿದೆ ನೋಡಿ.

ನಾಡಿನೆಲ್ಲೆಡೆ ಈಗ ಹೋಳಿಹಬ್ಬದ ಗೌಜು. ಅಂತೆಯೇ ಕುಂದಾಪುರ ತಾಲೂಕಿನಲ್ಲಿ ಖಾರ್ವಿ ಸಮಾಜದವರು ಹೋಳಿ ಹಬ್ಬವನ್ನು ವಾರಗಳ ಕಾಲ ವೈಶಿಷ್ಟ್ಯ ಪೂರ್ವಕವಾಗಿ ಆಚರಿಸುತ್ತಾರೆ. ಇವರು ಆಚರಿಸುವ ಹೋಳಿಯಲ್ಲಿ ಧಾರ್ಮಿಕತೆ, ಸಂಸ್ಕೃತಿಯ ಜೊತೆಗೆ ಮನೋರಂಜನೆಯೂ ಇದೆ. ಹೌದು..ಕುಂದಾಪುರ ಪೇಟೆಯಲ್ಲಿ ವಾರಗಳಿಂದಲೂ ಹೋಳಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಕುಂದಾಪುರದ ಖಾರ್ವಿ ಸಮಾಜದವರು ಆಚರಿಸುವ ಹೋಳಿಹಬ್ಬವು ಮಾರ್ಚ್ 17ರಿಂದ ಆರಂಭಗೊಂಡು ಆರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆದವು.

ಹೋಳಿ ಹಬ್ಬದ ಕೊನೆಯ ದಿನವಾದ ಏಳನೇ ದಿನ ಓಕುಳಿ ಹಾಗೂ ಪುರ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕುಂದಾಪುರದ ಶ್ರೀ ಮಹಾಕಾಳಿ ದೇವಸ್ಥಾನದಿಂದ ಸಾಗಿಬಂದ ಮೆರವಣಿಗೆ ಪೇಟೆಯಲ್ಲಿ ಸಂಚರಿಸಿ ಬಳಿಕ ಪುನಃ ದೇವಸ್ಥಾನದ ಬಳಿ ತೆರಳಿ ಸಮಾಪನಗೊಂಡಿತು. ಈ ಬೃಹತ್ ಮೆರವಣಿಗೆಯಲ್ಲಿ ಬಣ್ಣಗಳ ಎರಚಾಟ, ಕುಣಿತ, ಗಾನಬಜಾನ ಕುಂದಾಪುರ ಪೇಟೆಯಲ್ಲಿ ಕಂಡು ಬಂದಿತು. ಯುವಕ-ಯುವತಿಯರು, ಹಿರಿಯರು ಮಕ್ಕಳು ಎಂಬ ಭೇದ ಭಾವಗಳಿಲ್ಲದೇ ಪರಸ್ಪರ ಬಣ್ಣ ಹಚ್ಚಿಕೊಂಡು ಡಿಜೇ ಮ್ಯೂಸಿಕ್‌ಗೆ ಸ್ಟೆಪ್ ಹಾಕಿ ಸಂಭ್ರಮಿಸಿದರು. ಸಂಪೂರ್ಣ ಹೋಳಿ ಮೆರವಣಿಗೆಯಲ್ಲಿ ಒಂದಷ್ಟು ಮಂದಿ ವಿದೇಶಿಗರು ಪಾಲ್ಗೊಂಡು ಸಂಭ್ರಮಿಸಿದರು. ಯುವ ಜನಾಂಗವನ್ನು ಆಕರ್ಷಿಸುವ ನಿಟ್ಟಿನಲ್ಲಿ ಡ್ರೆಸ್ ಕೋಡ್ ಸ್ಪರ್ಧೆ ಆಯೋಜಿಸಲಾಗಿದ್ದು, ಗುಂಪುಗಳನ್ನು ಮಾಡಿಕೊಂಡ ಯುವಕ ಯುವತಿಯರು ತಮ್ಮದೇ ಆದ ಡಿಫರೆಂಟ್ ಡ್ರೆಸ್ ಮೂಲಕ ಮೆರವಣಿಗೆಯಲ್ಲಿ ಸಾಗಿಬಂದ್ರು.

 ಅಂದ ಹಾಗೇ ಕುಂದಾಪುರದಲ್ಲಿ ಕೊಂಕಣ ಖಾರ್ವಿ ಸಮಾಜದವರು ಆಚರಿಸುವ ಹೋಳಿ ಹಬ್ಬಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಹೋಳಿ ಹಬ್ಬವನ್ನು ಈಶ್ವರನ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಖಾರ್ವಿ ಸಮಾಜದವರು ಆಚರಿಸುವ ಅತೀ ದೊಡ್ಡ ಹಾಗೂ ಪವಿತ್ರವಾದ ಹಬ್ಬ ಹೋಳಿಹಬ್ಬವಾಗಿದೆ. ಪ್ರಥಮ ದಿನದಂದು ಹೋಳಿ ಮನೆಯೆಂಬ ಆಚರಣೆಯೊಂದಿಗೆ ನಾಲ್ಕು ದಿನಗಳ ಕಾಲ ಗಡ್ಡೆ ಕಾರ್ಯಕ್ರಮ ನಡೆಯುತ್ತೆ. ಐದನೇ ದಿನ ಹೋಳಿ ಕಾಮದಹನ ನಡೆದರೆ ಕೊನೆಯ ದಿನ ಓಕುಳಿ ಹಾಗೂ ಪುರಮೆರವಣಿಗೆ ಸಾಂಪ್ರದಾಯಬದ್ಧವಾಗಿ ನಡೆಯುತ್ತೆ. ವರ್ಷದ ಎಲ್ಲಾ ದೋಷಗಳು ಈ ಹೋಳಿ ಹಬ್ಬದ ಮೂಲಕ ನಿವಾರಣೆಯಾಗುತ್ತೆ, ಸಮಾಜವು ಇದರಿಂದ ಅಭಿವೃದ್ಧಿಯಾಗುತ್ತೆ ಎಂಬ ನಂಬಿಕೆ ಖಾರ್ವಿ ಸಮಾಜದವರದ್ದು. ಪ್ರೀತಿ, ವಿಶ್ವಾಸ ಹಾಗೂ ವಿಶ್ವಶಾಂತಿಗಾಗಿ ಈ ಹಬ್ಬವನ್ನು ಆಚರಿಸುತ್ತಿದ್ದು ಸಮಾಜಬಾಂಧವರು ಮಾತ್ರವಲ್ಲದೇ ಇತರೇ ಸಮಾಜದ ಜನರು ಭಾಗವಹಿಸುವುದು ಇಲ್ಲಿನ ವಿಶೇಷ.

 ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಲ್ಲಿನ ಖಾರ್ವಿ ಸಮಾಜದವರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದ ಹೋಳಿ ಆಚರಣೆಗೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿತ್ತು. ಅನುಮತಿ ನಿರಾಕರಿಸಿದ ಬಗ್ಗೆ ಖಾರ್ವಿ ಸಮುದಾಯ ಹೋರಾಟಕ್ಕಿಳಿದಿದ್ದರಿಂದಾಗಿ ಚುನಾವಣಾ ಆಯೋಗ ಮತ್ತು ಕುಂದಾಪುರ ಪೊಲೀಸ್ ಇಲಾಖೆ ಕೆಲವು ನಿಬಂಧನೆಗಳನ್ನು ಹೇರಿ ಡಿಜೆ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟಿತ್ತು. ಮೆರವಣಿಗೆಯಲ್ಲಿ ಒಂದಷ್ಟು ಯುವಕರು ಮತದಾನ ಜಾಗೃತಿ ಮೂಡಿಸುವ ಬರಹಗಳುಳ್ಳ ಸಮವಸ್ತೃ ಧರಿಸಿ ಮೆರವಣಿಗೆಗೆ ಬಂದಿರುವುದು ವಿಶೇಷವಾಗಿತ್ತು. ಹೋಳಿ ಆಚರಣೆಯ ಸಂಭ್ರಮದಲ್ಲೂ ಮತದಾನದ ಬಗ್ಗೆ ಅರಿವು ಮೂಡಿಸುವ ಯುವಕರ ತಂಡದ ಈ ವಿನೂತನ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೊಂಕಣ ಖಾರ್ವಿ ಸಮಾಜದವರು ಹೋಳಿ ಹಬ್ಬವನ್ನು ವರ್ಷಂಪ್ರತಿ ಅದ್ಧೂರಿಯಾಗಿ ಆಚರಿಸುತ್ತಿದ್ದು ಧಾರ್ಮಿಕತೆ ಜೊತೆ ಮನೋರಂಜನೆಗೂ ಒತ್ತು ನೀಡಿರುವುದು ವಿಶೇಶವಾಗಿದೆ.

Related posts

Leave a Reply

Your email address will not be published. Required fields are marked *