Header Ads
Header Ads
Breaking News

ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ 100 ಶೇಕಡಾ ಫಲಿತಾಂಶ ಪಡೆಯಲು ಎಲ್ಲ ರೀತಿಯ ಪ್ರಯತ್ನ : ಸಂಜೀವ ಮಠಂದೂರು ಹೇಳಿಕೆ

ಪುತ್ತೂರು: ಕಳೆದ ಕೆಲವು ವರ್ಷಗಳಿಂದ ಪುತ್ತೂರು ತಾಲೂಕು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ದಾಖಲಿಸುತ್ತಾ ಬಂದಿದೆ. ಕಳೆದ ವರ್ಷ ಜಿಲ್ಲೆ ದಾಖಲಿಸಿದ ಫಲಿತಾಂಶಕ್ಕಿಂತ ಹೆಚ್ಚಿನ ಸಾಧನೆಯನ್ನು ತಾಲೂಕು ಮಾಡಿತ್ತು. ಈ ಬಾರಿ 100 ಶೇಕಡಾ ಫಲಿತಾಂಶ ಪಡೆಯಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಮೂಲಕ ನಡೆಸಲಾದ ಅಭಿಯಾನಗಳನ್ನು ವಿವರಿಸಿದರು.
ಮಾರ್ಚ್ 21ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ತಾಲೂಕಿನಲ್ಲಿ 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 23 ಸರಕಾರಿ, 22 ಅನುದಾನಿತ ಮತ್ತು 32 ಅನುದಾನರಹಿತ ಮತ್ತು ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಂದ ಒಟ್ಟು 5318 ಪರೀಕ್ಷಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುವ ಅರ್ಹತೆ ಪಡೆದುಕೊಂಡಿದ್ದಾರೆ. 4519 ಮಕ್ಕಳು ರೆಗ್ಯುಲರ್ ಪರೀಕ್ಷಾರ್ಥಿಗಳಾಗಿದ್ದು, 174 ಮಂದಿ ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ. 246 ಮಂದಿ ಪುನರಾವರ್ತಿತ ಪರೀಕ್ಷಾರ್ಥಿಗಳಾಗಿದ್ದು, 79 ಮಂದಿ ಖಾಸಗಿ ಪುನರಾವರ್ತಿತ ಪರೀಕ್ಷಾರ್ಥಿಗಳಾಗಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಆದರ್ಶಪ್ರಾಯವಾಗಬೇಕೆಂಬುದು ನಮ್ಮ ಗುರಿ. ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಎಸ್‍ಡಿಎಂಸಿ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದು ಶಾಸಕರು ನುಡಿದರು.

ಹೆತ್ತವರು ಮಕ್ಕಳ ಮೇಲೆ ನಿಗಾ ಇರಿಸಿಕೊಂಡು ಪ್ರೋತ್ಸಾಹ ನೀಡಬೇಕು. ಯಾವುದೇ ಕಾರಣಕ್ಕೂ ಮಕ್ಕಳಲ್ಲಿ ಭಯ ಹುಟ್ಟಿಸಬಾರದು. ಪರೀಕ್ಷೆಯನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸುವಂತೆ ಪ್ರೇರಣೆ ನೀಡಬೇಕು. ಮಕ್ಕಳು ಲವಲವಿಕೆಯಿಂದ ಪರೀಕ್ಷೆ ಬರೆಯಬೇಕು. ಇದನ್ನು ಪ್ರತೀ ಶಾಲೆಗಳ ಭೇಟಿ ಸಂದರ್ಭ ಮನವರಿಕೆ ಮಾಡಿದ್ದೇವೆ ಎಂದು ಅನಿತಾ ಹೇಮನಾಥ ಶೆಟ್ಟಿ ಹೇಳಿದರು.
ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವಾ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್. ಮತ್ತು ಶಿಕ್ಷಣ ಸಂಯೋಜಕಿ ವಸಂತಿ ಎಲ್. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *