Header Ads
Breaking News

ಎಸ್‍ಎಲ್‍ಆರ್‍ಎಂ ಘಟಕ ನಿರ್ವಹಣೆಯಿಂದ ಸ್ವಚ್ಛ ಗ್ರಾಮ ಕನಸು ನನಸು: ದೇಶದ ಅತ್ಯುತ್ತಮ ಗ್ರಾಮದಲ್ಲಿ ವಂಡ್ಸೆ ಗ್ರಾಮಕ್ಕೆ 29ನೇ ಸ್ಥಾನ

ಕಳೆದ ಕೆಲ ವರ್ಷಗಳ ಹಿಂದೆ ಅಲ್ಲಲ್ಲಿ ಎಸೆದಿರುವ ತ್ಯಾಜ್ಯಗಳಿಂದ ಗಬ್ಬೆದ್ದು, ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ವಂಡ್ಸೆ ಇದೀಗ ಸ್ವಚ್ಛತೆಯಲ್ಲಿ ರಾಜ್ಯದ ಗಮನ ಸೆಳೆದಿದೆ. ಮನೆಯಿಂದ ಹೊರ ಎಸೆಯುವ ತ್ಯಾಜ್ಯಗಳಿಂದ ಏನೆಲ್ಲಾ ಉಪಯೋಗಗಳಿವೆ ಎಂದು ತಿಳಿಯಬೇಕಿದ್ದರೆ ನೀವು ಒಮ್ಮೆ ವಂಡ್ಸೆಯಲ್ಲಿರುವ ಎಸ್.ಎಲ್.ಆರ್.ಎಂ ಘಟಕಕ್ಕೆ ಭೇಟಿ ನೀಡಲೇಬೇಕು. ಅಷ್ಟಕ್ಕೂ ಇದೇನು ಅಂತೀರಾ..ಈ ಸ್ಟೋರಿ ನೋಡಿ..

 ಒಂದು ಗ್ರಾಮ ಪಂಚಾಯಿತಿ ಸಕ್ರಿಯವಾಗಿದ್ದರೆ, ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷ, ಸದಸ್ಯರು ಬದ್ದತೆ ತೋರಿದರೆ, ಊರವರು ಕೈ ಜೋಡಿಸಿದರೆ ಇಡೀ ಗ್ರಾಮವೇ ಹೇಗೆ ಬದಲಾಗುತ್ತದೆ ಎನ್ನೋದಕ್ಕೆ ವಂಡ್ಸೆ ಗ್ರಾಮ ಪಂಚಾಯಿತಿ ಸಾಕ್ಷಿ. ಹೌದು ನಾವೀಗ ಹೇಳಹೊರಟಿರುವುದು ವಂಡ್ಸೆ ಗ್ರಾಮಪಂಚಾಯತ್‍ನ ಪರಿಸರ ಕಾಳಜಿಯ ಸ್ಟೋರಿಯನ್ನ. ಕೇಂದ್ರ ಸರ್ಕಾರ ಗ್ರಾಮಾಭಿವೃದ್ಧಿ ಇಲಾಖೆ ಅತ್ಯುತ್ತಮ ಗ್ರಾಪಂಗಳ ಪಟ್ಟಿ ಬಿಡುಗಡೆ ಮಾಡಿದ್ದು, ಸ್ವಚ್ಛ ಗ್ರಾಮ ಯೋಜನೆಯನ್ನು ಸಮರ್ಥವಾಗಿ ನಿಭಾಯಿಸಿ ಗಾಂಧಿ ಪುರಸ್ಕಾರ ಪಡೆದ ವಂಡ್ಸೆ ಗ್ರಾ.ಪಂ ಇದೀಗ ಮಿಶನ್ ಅಂತ್ಯೋದಯ ನಡೆಸಿದ ಸಮೀಕ್ಷೆಯಲ್ಲಿ ಮಹಿಳಾ ಸಬಲೀಕರಣ, ಮೂಲಸೌಕರ್ಯ, ಆರ್ಥಿಕ ಅಭಿವೃದ್ಧಿ, ಆರೋಗ್ಯ ಸಂಗತಿಯಲ್ಲಿ ಅತ್ಯುತ್ತಮ ನಿರ್ವಹಣೆ ನೋಡಿದ ದೇಶದ ಗ್ರಾ.ಪಂಗಳಲ್ಲಿ 29ನೇ ಸ್ಥಾನ ಪಡೆದಿದೆ. ಕುಂದಾಪುರ ತಾಲೂಕು, ವಂಡ್ಸೆ ಹೋಬಳಿಯ ವಂಡ್ಸೆ ಗ್ರಾ.ಪಂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಆರಂಭಿಸುವ ಮೂಲಕ ಆರೋಗ್ಯಪೂರ್ಣ ವಾತಾವರಣ ನಿರ್ಮಿಸಿದ್ದಲ್ಲದೇ, ಮಹಿಳಾ ಸ್ವಾವಲಂಬನಾ ಕೇಂದ್ರ ಆರಂಭಿಸಿದೆ. ಒಟ್ಟಾರೆ ವಂಡ್ಸೆ ಗ್ರಾ.ಪಂ ಗ್ರಾಮದ ಜನರ ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಅಭಿವೃದ್ಧಿ ಕೆಲಸಕ್ಕೆ ರಾಷ್ಟ್ರಮಟ್ಟದ ಮಾನ್ಯತೆ ಸಿಕ್ಕಿದೆ.

ವಂಡ್ಸೆ ಪೇಟೆಯಲ್ಲಿ ಹಿಂದೆ ಮೂಗು, ಕಣ್ಣು ಮುಚ್ಚಿ ಸಂಚಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಚಕ್ರಾ ನದಿ ಕೂಡಾ ತ್ಯಾಜ್ಯ ವಿಲೇವಾರಿಗೆ ಅಪವಿತ್ರಗೊಳ್ಳುತ್ತಿತ್ತು. ಚಕ್ರಾ ನದಿ ಸೇತುವೆ ಬದಿ ತ್ಯಾಜ್ಯದ ಕೊಂಪೆಯಾಗಿ ಎಲ್ಲೆಲ್ಲಿಂದಲೋ ಬರುವವರು ತ್ಯಾಜ್ಯ ಎಸೆದು ಅಸಹ್ಯ ಹುಟ್ಟಿಸುವಂತೆ ಮಾಡಿದ್ದರು. ಇನ್ನು ಕೋಳಿ ತ್ಯಾಜ್ಯ, ಮೀನು ನೀರು, ಪ್ಲಾಸಿಕ್, ಅಂಗಡಿ ತರಕಾರಿ ಇನ್ನಿತರ ತ್ಯಾಜ್ಯ ಚಕ್ರಾನದಿ ತೀರದಲ್ಲಿ ಸುರಿಯುವ ಮೂಲಕ ನದಿಯ ಒಡಲೇ ಕಸದ ತೊಟ್ಟಿಯಾಗಿ ಪರಿವರ್ತನೆ ಕಂಡಿತ್ತು. ವಂಡ್ಸೆ ಪೇಟೆ ಬುಡದಿಂದ ತುದಿ ತನಕವೂ ಎಲ್ಲೆಂದರಲ್ಲಿ ತ್ಯಾಜ್ಯ, ರಾಶಿ. ಆದರೆ ಎಸ್‍ಎಲ್‍ಆರ್‍ಎಂ ಘಟಕ ಆರಂಭಿಸಿದ ಬಳಿಕ ಚಿತ್ರಣವೇ ಬದಲಾಗಿದೆ. ಚಕ್ರಾ ನದಿ ತೀರ ಕೂಡಾ ಶುಚುತ್ವದಿಂದ ಕಂಗೊಳಿಸುತ್ತಿದೆ. ವಂಡ್ಸೆ ಪರಿಸರದ ಮಹಿಳೆಯರ ಸ್ವಾವಲಂಬನಾ ಬದುಕಿಗೆ ಮಹಿಳಾ ಸಬಲೀಕರಣಕ್ಕೂ ಮುನ್ನುಡಿ ಬರೆದಿದೆ. ಮಹಿಳಾ ಸಬಲೀಕರಣಕ್ಕಾಗಿ ದೇಶದ ಅತ್ಯುತ್ತಮ ಗ್ರಾಪಂಗಳಲ್ಲಿ ವಂಡ್ಸೆ ಕೂಡಾ ಒಂದು. ವಂಡ್ಸೆ ಪೇಟೆ ಮೀನುಮಾರುಕಟ್ಟೆ ಸಮೀಪ ಮಹಿಳಾ ಸಬಲೀಕರಣ ಕೇಂದ್ರ ತೆರೆಯುವ ಮೂಲಕ 47 ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡುತ್ತಿದೆ. 47ಮಂದಿ ಮಹಿಳೆಯರ ತರಬೇತಿ ಅಂತ್ಯಗೊಳ್ಳುತ್ತಿದ್ದು, ಎರಡನೇ ಬ್ಯಾಚ್‍ನಲ್ಲಿ ತರಬೇತಿ ಪಡೆಯಲು 46 ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ತರಬೇತಿ ನಂತರ ದೇವಸ್ಥಾನಗಳ ಪ್ರಸಾದ ವಿತರಣೆಗೆ ಬಟ್ಟೆ ಕೈಚೀಲ, ಅಂಗಡಿಗಳಿಗೆ ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಬ್ಯಾಗ್, ಶಾಲಾ ಮಕ್ಕಳ ಸಮವಸ್ತ್ರ ಸಿದ್ದಪಡಿಸುವ ಯೋಜನೆಗೆ ಮುಂದಾಗಿದ್ದು, ಹೊಲಿಗೆ ಕಲಿತವರಿಗೆ ಕೆಲಸವೂ ಪಕ್ಕಾ ಎಂಬ ನಂಬಿಕೆ ಹುಟ್ಟಿಸಿದೆ. ವಂಡ್ಸೆ ತ್ಯಾಜ್ಯ ಬಗ್ಗೆ ಪ್ರತೀ ಗ್ರಾಮ ಸಭೆಯಲ್ಲೂ ಚರ್ಚೆಯಾಗುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಎಸ್‍ಎಲ್‍ಆರ್‍ಎಂ ಘಟಕ ಆರಂಭಿಲಾಗಿದೆ. ಆರಂಭದಲ್ಲಿ ಒಂದಿಷ್ಟು ಅಡೆತಡೆಗಳು ಬಂದರೂ ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡ ಪಂಚಾಯತ್ ಆಡಳಿತ ಈ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಎಲ್ಲಾ ಖರ್ಚುಗಳನ್ನು ಬಿಟ್ಟು ಇದೀಗ ತ್ಯಾಜ್ಯ ನಿರ್ವಹಣಾ ಘಟಕವೂ ತಿಂಗಳಿಗೆ 15 ರಿಂದ 20 ಸಾವಿರ ವರಮಾನ ತರುತ್ತಿದೆ. ಈ ಯೋಜನೆ ಎಲ್ಲಾ ಗ್ರಾಪಂ ಜಾರಿಗೆ ತಂದರೆ ಸ್ವಚ್ಛತೆ ಜೊತೆ ಆದಾಯವನ್ನೂ ಕೂಡಾ ಗಳಿಸಬಹುದು.

-ಶ್ರೀಕಾಂತ ಹೆಮ್ಮಾಡಿ ವಿ4 ನ್ಯೂಸ್ 24/7 ಕುಂದಾಪುರ

Related posts

Leave a Reply

Your email address will not be published. Required fields are marked *