Header Ads
Header Ads
Breaking News

ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ‘ಪರಾಮರ್ಶ್’ ತರಬೇತಿ

ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ಅಧ್ಯಾಪಕ ಮತ್ತು ಅಧ್ಯಾಪಕೇತರ ವಲಯ ಸಾಮೂಹಿಕ ಹೊಣೆಗಾರಿಕೆಯ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ನ್ಯಾಕ್ ಸಂಸ್ಥೆಯ ಬೆಂಗಳೂರು ಡೆಪ್ಯುಟಿ ಅಡ್ವೈಸರ್ ಡಾ.ಗಣೇಶ್ ಹೆಗಡೆ ಹೇಳಿದರು.

ಯು.ಜಿ.ಸಿ.ಯ ಪರಾಮರ್ಶ್ ಯೋಜನೆಯಡಿ ಉಜಿರೆಯ ಎಸ್.ಡಿ.ಎಂ ಕಾಲೇಜು ನ್ಯಾಕ್ ಮೌಲ್ಯಮಾಪನ ಕುರಿತಂತೆ ಆಸುಪಾಸಿನ ಕಾಲೇಜುಗಳ ಪ್ರತಿನಿಧಿಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯೋನ್ಮುಖವಾಗಿರುವ ಅಧ್ಯಾಪಕರು ಮತ್ತು ಅಧ್ಯಾಪಕೇತರ ನೌಕರರು ಉನ್ನತ ಶಿಕ್ಷಣಕ್ಕೆ ಹೊಸ ಆಯಾಮ ನೀಡುವುದರ ಕಡೆಗೆ ಹೆಚ್ಚು ಗಮನಹರಿಸಬೇಕು. ಯೋಜಿತ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿ ಶೈಕ್ಷಣಿಕ ಸಾಧನೆಯ ವಿವರಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಬೋಧಕರ ವ್ಯಕ್ತಿಗತ ಮತ್ತು ಸಂಸ್ಥೆಯ ಸಾಂಸ್ಥಿಕ ವೃತ್ತಿಪರತೆಯನ್ನು ದೃಢೀಕರಿಸಿ ನ್ಯಾಕ್ ಮನ್ನಣೆ ಪಡೆಯಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಕಾಲೇಜುಗಳಿಂದ ಶೈಕ್ಷಣಿಕ ವೃತ್ತಿಪರತೆಗೆ ಸಂಬಂಧಿಸಿದ ಸಮರ್ಪಕ ಮಾಹಿತಿ ಲಭ್ಯವಾಗುವುದಿಲ್ಲ. ವಿದ್ಯಾರ್ಥಿ ಮತ್ತು ಪೋಷಕರ ಶೈಕ್ಷಣಿಕ ನಿರೀಕ್ಷೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಕೊಡುಗೆ ನೀಡಬೇಕು. ಆ ಮುಖಾಂತರ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದರು.ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನ್ಯಾಕ್ ಮನ್ನಣೆ ಪಡೆಯುವ ಕಾಲೇಜುಗಳ ಸಂಖ್ಯೆ ಕಡಿಮೆ ಇದೆ. ಒಟ್ಟು 4100 ಕಾಲೇಜುಗಳಲ್ಲಿ 670 ಕಾಲೇಜುಗಳು ಮಾತ್ರ ನ್ಯಾಕ್ ಮನ್ನಣೆ ಪಡೆದಿವೆ. ಈ ಮನ್ನಣೆಗೆ ಪಾತ್ರವಾಗುವ ಕಾಲೇಜುಗಳ ಸಂಖ್ಯಾವಾರು ಪ್ರಮಾಣ ಹೆಚ್ಚಾಗಬೇಕಿದೆ ಎಂದು ಹೇಳಿದರು. ಸತತ ಮೂರು ಸಾರಿ ನ್ಯಾಕ್‍ನಿಂದ ‘ಎ’ಗ್ರೇಡ್ ಮನ್ನಣೆಗೆ ಪಾತ್ರವಾಗಿರುವ ಉಜಿರೆ ಎಸ್.ಡಿ.ಎಂ ಕಾಲೇಜು ಉಳಿದ ಸಂಸ್ಥೆಗಳ ಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡುವ ಮೆಂಟರ್ ಸ್ಥಾನಮಾನ ಗಳಿಸಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸತೀಶ್ಚಂದ್ರ ಎಸ್ ನ್ಯಾಕ್ ಮನ್ನಣೆಗಿರುವ ಮಹತ್ವವನ್ನು ವಿಶ್ಲೇಷಿಸಿದರು. ಪ್ರೊ.ಶಂಕರನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧನಾ ಪ್ರಾರ್ಥಿಸಿದರು. ಚಿತ್ರಾ ಬಿ.ಸಿ. ಕಾರ್ಯಕ್ರಮ ನಿರೂಪಿಸಿದರು. ನಮ್ರತಾ ಜೈನ್ ವಂದಿಸಿದರು.

Related posts

Leave a Reply

Your email address will not be published. Required fields are marked *