Header Ads
Breaking News

ಎಸ್.ಡಿ.ಎಂ ಕಾಲೇಜಿನಲ್ಲಿ ಸಂಶೋಧನಾ ವಿಚಾರ ಸಂಕಿರಣ

ಉಜಿರೆ, ಮಾರ್ಚ್ 24: ವಿವಿಧ ಶೈಕ್ಷಣಿಕ ಜ್ಞಾನಶಿಸ್ತುಗಳ ನಡುವಿನ ಅಂತರ್‍ಸಂಬಂಧೀಯ ಸಂಶೋಧನಾತ್ಮಕ ಅಧ್ಯಯನದಿಂದ ಔದ್ಯಮಿಕ ಮತ್ತು ಸಾಮಾಜಿಕ ವಲಯಗಳ ವೃತ್ತಿಪರತೆಗೆ ಹೊಸದೊಂದು ಆಯಾಮ ಸಿಗುತ್ತದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಪ್ರೊ ವೈಸ್ ಛಾನ್ಸಲರ್ ಪ್ರೊ.ಕೆ.ಭೈರಪ್ಪ ಹೇಳಿದರು.
ಎಸ್.ಡಿ.ಎಂ ಕಾಲೇಜಿನ ಸಂಶೋಧನಾ ಸಮಿತಿ ಮತ್ತು ಐಕ್ಯೂಎಸಿ(ಪರಾಮರ್ಶ್) ಜಂಟಿಯಾಗಿ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ‘ಪರಿಣಾಮಕಾರೀ ಸಂಶೋಧನಾ ಯೋಜನೆ ಪ್ರಸ್ತಾವನಾ ಬರವಣಿಗೆ’ ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಧ್ಯಯನ ಮತ್ತು ಸಂಶೋಧನೆ ಇವೆರಡೂ ಇಂದಿನ ದಿನಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಪಡೆದಿವೆ. ನಿರ್ದಿಷ್ಟ ಜ್ಞಾನಶಿಸ್ತು ಮತ್ತೊಂದು ಜ್ಞಾನಶಿಸ್ತಿನ ವ್ಯಾಪ್ತಿಯನ್ನು ವಿಸ್ತರಿಸುವಷ್ಟು ಸಶಕ್ತವಾಗಿರುತ್ತದೆ. ಅಧ್ಯಯನಕ್ಕೆ ಸಂಶೋಧನೆಯ ಬೆಂಬಲ ಸಿಕ್ಕಾಗ ರೂಪುಗೊಳ್ಳುವ ಜ್ಞಾನವು ವಿವಿಧ ಕ್ಷೇತ್ರಗಳ ವೃತ್ತಿಪರತೆಯ ಮೌಲ್ಯವನ್ನು ಹೆಚ್ಚಿಸುತ್ತದೆ. ಈ ದೃಷ್ಟಿಯಿಂದ ಅಂತರ್‍ಶಿಸ್ತೀಯ ಸಂಶೋಧನಾತ್ಮಕ ಅಧ್ಯಯನಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.

ಅಮೆರಿಕದಂಥ ದೇಶದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ವೈದ್ಯಕೀಯ ಶಿಕ್ಷಣವನ್ನೂ ಕಲಿಕಾ ವಿಷಯವನ್ನಾಗಿ ಅಳವಡಿಸಿವೆ. ತಾಂತ್ರಿಕ ಜ್ಞಾನ ಮತ್ತು ವೈದ್ಯಕೀಯ ಜ್ಞಾನ ಇವೆರಡೂ ಮೇಳೈಸಿದಾಗ ಮೌಲಿಕ ಆವಿಷ್ಕಾರಗಳು ರೂಪುಗೊಳ್ಳಲು ಸಾಧ್ಯ. ಹಾಗಾದಾಗ ಎರಡೂ ರಂಗಗಳ ಬೆಳವಣಿಗೆಗೆ ಬೇಕಾಗುವಂಥ ಶೈಕ್ಷಣಿಕ ಟ್ರೆಂಡ್‍ನ್ನು ವಿದ್ಯಾಸಂಸ್ಥೆಗಳು ರೂಪಿಸಬಹುದು ಎಂದು ಹೇಳಿದರು.

ಸಂಶೋಧನಾ ಯೋಜನೆಯನ್ನು ಕೈಗೊಳ್ಳುವಾಗ ಹೊಸ ಕಾಲದಲ್ಲಿ ಅಧ್ಯಯನ ಮತ್ತು ಸಂಶೋಧನೆ ವಹಿಸಬಹುದಾದ ಬಹುಮುಖೀ ಪಾತ್ರವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಆ ನೆಲೆಯಲ್ಲಿ ಸಂಶೋಧನೆಯ ಪರಿಕಲ್ಪನೆಯನ್ನು ಹೊಳೆಸಿಕೊಳ್ಳಬೇಕು. ಅದರ ಆಧಾರದಲ್ಲಿ ಸಂಶೋಧನಾ ಯೋಜನೆಯ ರೂಪುರೇಷೆಯನ್ನು ನಿರ್ಧರಿಸಬೇಕು. ನಂತರ ಸಂಶೋಧನಾ ಯೋಜನೆಯ ಪ್ರಸ್ತಾವನಾ ಬರಹವನ್ನು ವ್ಯವಸ್ಥಿತವಾಗಿ ರಚಿಸಬೇಕು ಎಂದು ಸಲಹೆ ನೀಡಿದರು.
ದೇಶದ ವ್ಯಾಪ್ತಿಯಲ್ಲಿ ಅವಲೋಕನಕ್ಕೆ ಬರುವಂಥ ಹಲವಾರು ಅಂಶಗಳನ್ನು ಗ್ರಹಿಸುವ ಶಕ್ತಿ ಸಂಶೋಧನೆಗೆ ನೆರವಾಗುತ್ತದೆ. ತಂತ್ರಜ್ಞಾನ ಅಸ್ತಿತ್ವದಲ್ಲಿರದೇ ಇದ್ದಾಗ ಹಿಂದಿನ ತಲೆಮಾರು ಈ ಬಗೆಯ ಚಿಕಿತ್ಸಕ ದೃಷ್ಟಿಕೋನದೊಂದಿಗೇ ಗುರುತಿಸಿಕೊಂಡಿತ್ತು. ತಾಂತ್ರಿಕ ಸಾಧ್ಯತೆಗಳು ವ್ಯಾಪಕವಾಗಿರುವ ಸದ್ಯದ ದಿನಗಳಲ್ಲಿ ಇದೇ ದೃಷ್ಟಿಕೋನ ಇನ್ನಷ್ಟು ತೀವ್ರಗೊಳ್ಳಬೇಕು. ಈ ಎಚ್ಚರದಲ್ಲಿಯೇ ಹೊಚ್ಚಹೊಸತಾದ ಸಂಶೋಧನಾ ಬರಹಗಳು ರೂಪುಗೊಳ್ಳಬೇಕು ಎಂದು ಅಭಿಪ್ರಠಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ ಎಸ್ ಅವರು ಶೈಕ್ಷಣಿಕ ಕಲಿಕಾ ಪ್ರಕ್ರಿಯೆಯಲ್ಲಿ ಸಂಶೋಧನೆ ವಹಿಸುವ ಪಾತ್ರವು ಸಾರ್ವಕಾಲಿಕವಾದದ್ದು ಎಂದರು. ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆಯನ್ನು ರೂಢಿಸುವುದರ ಜೊತೆಗೆ ಶೈಕ್ಷಣಿಕ ಸಂಸ್ಕಾರ ಒದಗಿಸಿ ಸ್ಪರ್ಧಾತ್ಮಕ ಜಗತ್ತಿನ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಕ್ಕೆ ಕಾಲೇಜು ಆದ್ಯತೆ ನೀಡುತ್ತಿದೆ. ಸಂಶೋಧನೆಯ ಮನೋಧರ್ಮವನ್ನು ಶೈಕ್ಷಣಿಕ ಪಠ್ಯದ ಮೌಲಿಕ ಅಂಶವನ್ನಾಗಿ ಗ್ರಹಿಸಬೇಕು ಎಂದು ನುಡಿದರು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಪಿ. ವಿಶ್ವನಾಥ, ಹಿರಿಯ ಪ್ರಾಧ್ಯಾಪಕರಾದ ಪ್ರೊ.ಶಿವರಾಮ ಹೊಳ್ಳ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಕಾರ್ಯಕ್ರಮ ನಫೀಸತ್ ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply

Your email address will not be published. Required fields are marked *