Header Ads
Breaking News

ಎಸ್.ಡಿ.ಎಂ ಕಾಲೇಜು ಕ್ರೀಡಾಕೂಟ : ಆಕರ್ಷಿಸಿದ ಆಶಾವಾದಿ ಸದಾಶಯಗಳ ಪಥಸಂಚಲನ

ಅಲ್ಲೊಬ್ಬ ನೇಗಿಲು ಹಿಡಿದುಕೊಂಡಿದ್ದ ರೈತನಿದ್ದ, ಸೈಕಲ್ ಮೇಲೆ ಉಪಗ್ರಹಗಳನ್ನು ಒಯ್ಯುತ್ತಿದ್ದ ವಿಜ್ಞಾನಿಯಿದ್ದ, ಮುಖಕ್ಕೆ ಮಣ್ಣು ಹಚ್ಚಿಕೊಂಡು ಭೂತಾಯಿಯ ಮೇಲಿನ ಪ್ರೀತಿಯನ್ನು ಪ್ರತಿನಿಧಿಸುವವನಿದ್ದ, ಕಂಬಳವನ್ನೇ ಆರಾಧಿಸುತ್ತಿದ್ದ ಕುಟುಂಬವೊಂದಿತ್ತು.. ಒಟ್ಟಾರೆ ಅಲ್ಲೊಂದು ಸೃಜನಾತ್ಮಕ ಸಂತೆಯೇ ನೆರೆದಿತ್ತು. ಇದೆಲ್ಲಾ ಕಂಡುಬಂದಿದ್ದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಪಥಸಂಚಲನದಲ್ಲಿ.

ಕಾಲೇಜಿನ ಕ್ರೀಡಾಕೂಟ ಅಂದಮೇಲೆ ವಿದ್ಯಾರ್ಥಿಗಳ ದಂಡು, ವಿವಿಧ ಆಟೋಟ ಸ್ಪರ್ಧೆಗಳು, ಪಥಸಂಚಲನ ಮಾಮೂಲಿ. ಆದರೆ, ಇಲ್ಲಿ ಕಂಡುಬಂದ ಪಥಸಂಚಲನ ಮಾತ್ರ ವಿಭಿನ್ನವಾಗಿ ನಡೆಯಿತು. ಅಲ್ಲಿ ಕೇವಲ ಕೈ ಕಾಲುಗಳನ್ನು ಬೀಸಿ ಪರೇಡ್ ಮಾಡಲಿಲ್ಲ, ಜೊತೆಗೆ ಸಮಾಜದ ಸ್ವಾಸ್ಥ್ಯಕ್ಕೆ ಕೈ ಜೋಡಿಸುವ ಕಾರ್ಯವೂ ನಡೆಯಿತು.

ಮುಖದ ಒಂದು ಭಾಗಕ್ಕೆ ಸಮೃದ್ಧಿಯ ಸಂಕೇತವಾದ ಮಣ್ಣು, ಇನ್ನೊಂದು ಭಾಗಕ್ಕೆ ದುಃಖದ ಸಂಕೇತವಾದ ಕಪ್ಪು ಬಣ್ಣ.. ರೈತರ ಕಷ್ಟ- ಸುಖ, ಜೀವನಶೈಲಿ ಎಲ್ಲವನ್ನೂ ಪ್ರತಿನಿಧಿಸಿ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿದ್ದು ತೃತೀಯ ಬಿ.ಕಾಂ ‘ಎ’ ತಂಡ. ಒಂದು ಸಾಲಿನಲ್ಲಿ ತೆನೆ ಹೊತ್ತ ಮಹಿಳೆಯರು, ಇನ್ನೊಂದು ಸಾಲಿನಲ್ಲಿ ಬುಟ್ಟಿ ಹೊತ್ತು ನಡೆಯುತ್ತಿರುವವರು, ಕೊನೆಯ ಸಾಲಿನಲ್ಲಿ ನೇಗಿಲು ಹಿಡಿದವರು. ಹೀಗೇ ಸಮಸ್ತ ರೈತ ಕುಲವನ್ನು ಈ ವೃಂದ ಪ್ರತಿನಿಧಿಸಿತು.

ಸರ್ಕಾರದ ಪ್ರಮುಖ ಯೋಜನೆಗಳ ಫಲಕವನ್ನು ಹೊತ್ತ ತೃತೀಯ ಬಿ.ಕಾಂ ‘ಬಿ’ ತಂಡ ಭೇಟಿ ಬಚಾವೋ ಭೇಟಿ ಪಡಾವೋ, ಪ್ರಧಾನಮಂತ್ರಿ ಜನ್ ಧನ್ ಯೋಜನಾ, ಡಿಜಿಟಲ್ ಇಂಡಿಯಾ, ಸೇತು ಭಾರತಮ್ ಮೊದಲಾದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿತು. ಈ ತಂಡ ಬಳಸಿ ಎಸೆದ ವಸ್ತುಗಳನ್ನೇ ಉಪಯೋಗಿಸಿಕೊಂಡು ಫಲಕಗಳನ್ನು, ಹೆಣ್ಣಿನ ಪ್ರತಿಕೃತಿಯನ್ನು ತಯಾರಿಸಿದ್ದರು. ಇವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

ತೃತೀಯ ಬಿ.ಕಾಂ ‘ಡಿ’ ವಿದ್ಯಾರ್ಥಿ ಗುಂಪು ತನ್ನ ಪರಿಸರ ಪ್ರೇಮವನ್ನು ವಿಶೇಷವಾಗಿ ತೋರಿಸಿತು. ಬೆನ್ನಿಗೆ ಗಿಡವನ್ನು ಕಟ್ಟಿಕೊಂಡು ಪೈಪ್ ಮೂಲಕ ಗಾಳಿ ಸೇವನೆ ಮಾಡುವ ಚಿತ್ರಣ ಕಂಡಾಗ ನಿಸರ್ಗದ ವಿನಾಶ ಕಣ್ಮುಂದೆ ಸುಳಿಯಿತು. ಕಣ್ಣಿಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಪ್ರಕೃತಿ ವಿನಾಶವನ್ನು ವಿದ್ಯಾರ್ಥಿಗಳು ವಿರೋಧಿಸಿದರು. ಈ ಗುಂಪು ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಇದರೊಂದಿಗೆ ‘ಬಿ. ವೋಕ್’ ಕೋರ್ಸ್ ವಿದ್ಯಾರ್ಥಿಗಳು ಸರಳವಾಗಿ ಕಂಬಳವನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಇವರೊಂದಿಗೇ ಹಂಚಿಕೊಂಡರು.

‘ಟ್ರಿಬ್ಯೂಟ್ ಟು ಇಸ್ರೋ’ ಎಂಬ ವಿಷಯವನ್ನಿಟ್ಟುಕೊಂಡು ತೃತೀಯ ಬಿ.ಎಸ್.ಸಿ ವಿದ್ಯಾರ್ಥಿಗಳು ಸೈಕಲ್ ಮೇಲೆ ಉಪಗ್ರಹಗಳ ಮಾದರಿಯನ್ನು ಹೊತ್ತು ತಂದಿದ್ದು ವಿಶೇಷವಾಗಿತ್ತು. ಬಳಸಿ ಎಸೆದಂತಹ ವಸ್ತುಗಳನ್ನೇ ಉಪಯೋಗಿಸಿಕೊಂಡು ಪಿ.ಎಸ್.ಎಲ್.ವಿ ರಾಕೆಟ್ ಹಾಗೂ ಸ್ಯಾಟಲೈಟ್‍ಗಳನ್ನು ತಯಾರಿಸಿದ್ದರು. 1963ರಿಂದ 2019ರವರೆಗಿನ ಇಸ್ರೋ ಸಾಧನೆಗಳಾದ ಚಂದ್ರಯಾನ-1, ಚಂದ್ರಯಾನ-2, ಮಾಮ್, ಆರ್ಯಭಟ ಹಾಗೂ ಪ್ರಮುಖ ವಿಜ್ಞಾನಿಗಳ ಹೆಸರನ್ನು ಫಲಕದ ಮೂಲಕ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳು ಮುಖಕ್ಕೆ ರಾಷ್ಟ್ರಧ್ವಜದ ಬಣ್ಣವನ್ನು ಹಚ್ಚಿಕೊಂಡು, ಕೈಗೆ ಬಿಳಿಯ ಕೈಗವಸನ್ನು ತೊಟ್ಟುಕೊಂಡಿದ್ದರು.

ಧರ್ಮಸ್ಥಳದ ಮಹಾದ್ವಾರ ಹಾಗೂ ಧರ್ಮಸ್ಥಳದ ಚತುರ್ದಾನ ಪರಂಪರೆ (ಅನ್ನದಾನ, ವಿದ್ಯಾದಾನ, ಔಷಧದಾನ, ಅಭಯದಾನ)ಯನ್ನು ಭಿನ್ನವಾಗಿ ಪ್ರಸ್ತುತಪಡಿಸಿದ್ದು ತೃತೀಯ ಬಿ.ಕಾಂ ‘ಸಿ’ ತಂಡ. ಹಸಿರು, ಹಳದಿ, ಬಿಳಿ, ನೀಲಿ ಬಣ್ಣದ ಮುಂಡಾಸು ಕಟ್ಟಿಕೊಂಡು ಚತುರ್ದಾನ ಪರಂಪರೆಯನ್ನು ಪ್ರತಿನಿಧಿಸಿದರು. ಥರ್ಮಾಕೋಲ್‍ಗಳಿಂದ ಪಲ್ಲಕ್ಕಿಯನ್ನು ತಯಾರಿಸಿ ಧರ್ಮಾಧಿಕಾರಿಗಳ
ತೃತೀಯ ಬಿ.ಬಿ.ಎ ತಂಡವು ‘ಅಮರ್ ಜವಾನ್’ ಪ್ರತಿಕೃತಿಯೊಂದಿಗೆ ಪಥಸಂಚಲನ ನಡೆಸಿತು. ಹತ್ತಿ, ಬಣ್ಣ ಹಾಗೂ ರಟ್ಟುಗಳನ್ನು ತಯಾರಿಸಿಕೊಂಡು ಭಾರತದ ನಕಾಶೆಯನ್ನು ಸುಂದರವಾಗಿ ರೂಪಿಸಿದ್ದರು. ಮಹಿಳಾ ಸಬಲೀಕರಣ, ಸೇ ನೋ ಟು ವಾಟರ್ ಪೊಲ್ಯೂಶನ್, ದೇಶಪ್ರೇಮ ರಕ್ತದಾನ ಹಾಗೂ ನೇತ್ರದಾನ ಮುಂತಾದ ಸಾಮಾಜಿಕ ಕಳಕಳಿಯುಳ್ಳ ವಿಷಯಗಳನ್ನು ಪಥಸಂಚಲನದ ಜೊತೆಜೊತೆಗೆ ನಿರೂಪಿಸಿದ್ದು ವಿದ್ಯಾರ್ಥಿಗಳ ಆಸಕ್ತಿ ಹಾಗೂ ಸೃಜನಶೀಲತೆಗೆ ಹಿಡಿದ ಕೈಗನ್ನಡಿಯಾಗಿತ್ತು. ಇದರೊಂದಿಗೆ ಎಲ್ಲಾ ತಂಡಗಳು ಸ್ಪರ್ಧಾ ಸ್ಫೂರ್ತಿಯನ್ನು ಮೆರೆದಿದ್ದು ವಿಶೇಷವಾಗಿತ್ತು.

ವರದಿ: ವರ್ಷಾ ಪ್ರಭು

Related posts

Leave a Reply

Your email address will not be published. Required fields are marked *