Header Ads
Breaking News

ಎಸ್.ಡಿ.ಎಂ ಝೇಂಕಾರ – ಶೈಕ್ಷಣಿಕ, ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

ಉಜಿರೆ, ಫೆ.12: ತಂತ್ರಜ್ಞಾನದ ಗೀಳಿನ ಕಾರಣಕ್ಕಾಗಿಯೇ ವ್ಯಕ್ತಿಗತ ಬೆಳವಣಿಗೆಯ ಸಕಾರಾತ್ಮಕ ಹಾದಿಯಿಂದ ವಿಮುಖರಾಗಿರುವ ಯುವಕರನ್ನು ದೇಶದ ಸಮಗ್ರ ಅಭ್ಯುದಯದ ಸಂಪನ್ಮೂಲ ವ್ಯಕ್ತಿಗಳನ್ನಾಗಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎ.ಎಂ.ಖಾನ್ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ ‘ಝೇಂಕಾರ 2020’ನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಮತ್ತು ಮನರಂಜನಾ ಮಾಧ್ಯಮಗಳ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಯುವವಿದ್ಯಾರ್ಥಿಗಳ ಯೋಚಿಸುವ ಸಾಮಥ್ರ್ಯ ಮೊಟಕುಗೊಂಡಿದೆ. ತರಗತಿಗಳನ್ನು ಏಕಾಗ್ರತೆಯೊಂದಿಗೆ ಆಲಿಸುವ ಸಂಯಮ ಇಲ್ಲವಾಗಿದೆ. ಒಂದು ತರಗತಿಯ ನಂತರ ಮತ್ತೊಂದು ತರಗತಿ ಆರಂಭವಾಗುವ ಮುಂಚಿನ ಹತ್ತು ನಿಮಿಷಗಳ ಬಿಡುವಿನ ಅವಧಿ ರಚನಾತ್ಮಕ ಚರ್ಚೆಗಳಿಗೆ ಬಳಕೆಯಾಗುವ ಬದಲು ಮೊಬೈಲ್‍ಗಳ ಭ್ರಮಾ ಜಗತ್ತಿನಲ್ಲಿ ಮುಳುಗಿಹೋಗುವ ಗೀಳು ವಿಜೃಂಭಿಸುತ್ತಿದೆ ಎಂದರು.

ಈ ಬಗೆಯ ತಂತ್ರಜ್ಞಾನದ ಅತಿಯಾದ ಅವಲಂಬನೆಯು ಯುವಸಮೂಹದ ವ್ಯಕ್ತಿತ್ವದ ಬೆಳವಣಿಗೆಯ ಹಾದಿಯಲ್ಲಿ ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ. ವೃತ್ತಿಪರ ಅವಕಾಶಗಳನ್ನು ಪಡೆಯುವ ಸಾಮಥ್ರ್ಯ ರೂಢಿಸಿಕೊಳ್ಳುವ ಶ್ರದ್ಧೆ ಇಲ್ಲವಾಗುತ್ತಿದೆ. ಅಧ್ಯಯನಶೀಲತೆಯಿಂದ ವಿಮುಖರಾಗಿದ್ದಷ್ಟೇ ಅಲ್ಲದೇ, ಆರೋಗ್ಯಕರ ಚರ್ಚೆ, ಸಂವಾದಗಳಲ್ಲಿ ತೊಡಗಿಕೊಳ್ಳುವ ಕುತೂಹಲದ ಕೊರತೆ ಎದುರಾಗಿದೆ ಎಂದು ಹೇಳಿದರು.

ವ್ಯಕ್ತಿಗತ ಸಾಮಥ್ರ್ಯದೊಂದಿಗೆ ಉದ್ಯೋಗಾವಕಾಶಗಳನ್ನು ಕಂಡುಕೊಂಡು ದೇಶದ ಅಭ್ಯುದಯಕ್ಕೆ ಕೊಡುಗೆ ನೀಡುವ ಉನ್ನತ ಚಿಂತನೆಗಳೊಂದಿಗೆ ಯುವವಿದ್ಯಾರ್ಥಿಗಳು ಗುರುತಿಸಿಕೊಳ್ಳಬೇಕು. ಝೇಂಕಾರದಂಥ ಶೈಕ್ಷಣಿಕ, ಸಾಂಸ್ಕøತಿಕ ಉತ್ಸವಗಳು ಅಂಥ ಪ್ರಜ್ಞೆ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ನುಡಿದರು.

ಝೇಂಕಾರದ ಸಮಗ್ರ ಪ್ರಶಸ್ತಿಯ ಟ್ರೋಫಿಯನ್ನು ಅನಾವರಣಗೊಳಿಸಿ ಇನ್ನೋವೇಟಿವ್ ಲರ್ನಿಂಗ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಚಿಕಿತ್ಸಕ ದೃಷ್ಟಿಕೋನಗಳ ಮೂಲಕ ವಿದ್ಯಾರ್ಥಿಗಳು ಯಶಸ್ಸಿನ ಹಾದಿ ಕ್ರಮಿಸಬೇಕು ಎಂದು ಸಲಹೆ ನೀಡಿದರು.
ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ಸತೀಶ್‍ಚಂದ್ರ ಸ್ವಾಗತಿಸಿದರು. ಝೇಂಕಾರ ಕಾರ್ಯಕ್ರಮದ ಸಂಯೋಜನಾಧಿಕಾರಿ ಸುವೀರ್ ಜೈನ್ ಉಪಸ್ಥಿತರಿದ್ದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಬಿ ಗಣಪಯ್ಯ ವಂದಿಸಿದರು.

ವರದಿ: ಪ್ರೀತಿ ಶೆಟ್ಟಿಗಾರ್
ದ್ವೀತಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಕಾಲೇಜು ಉಜಿರೆ

Related posts

Leave a Reply

Your email address will not be published. Required fields are marked *