Header Ads
Breaking News

ಎಸ್.ಡಿ.ಎಂ ಪಿಜಿ ಸೆಂಟರ್‍ನಲ್ಲಿ ಕ್ಯಾಂಪಸ್ ಸಂದರ್ಶನ : ‘ಚಿಕಿತ್ಸಕ ದೃಷ್ಟಿಕೋನದಿಂದ ಮನರಂಜನಾರಂಗದಲ್ಲಿ ಯಶಸ್ಸು’

ಉಜಿರೆ. ಫೆ.25: ನಿರಂತರ ಓದು, ಅವಲೋಕನ ಮತ್ತು ಚಿಕಿತ್ಸಕ ದೃಷ್ಟಿಕೋನದೊಂದಿಗೆ ಇದ್ದರೆ ಮನರಂಜನಾ ಮಾಧ್ಯಮ ವಲಯದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳಬಹುದು ಎಂದು ಎಂದು ಝೀ ಕನ್ನಡ ವಾಹಿನಿಯ ಮಾನವ ಸಂಪನ್ಮೂಲ ಅಧಿಕಾರಿ ಅನಂತ್ ನುಡಿದರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದೊಂದಿಗೆ ಝೀ ಟಿವಿ ವಾಹಿನಿ ಏರ್ಪಡಿಸಿದ್ದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮನರಂಜನೆ ಎನ್ನುವುದು ಬಹು ಆಯಾಮದ ಪ್ರಕ್ರಿಯೆ. ಮನಸ್ಸಿಗೆ ಅರ್ಥವಾಗುವುದು ಭಾವನೆ. ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದಂತಹ ಕಾರ್ಯಕ್ರಮಗಳನ್ನು ಈ ವಾಹಿನಿಗಳು ನೀಡುತ್ತವೆ. ಆದ್ದರಿಂದಲೇ ಮನರಂಜನಾ ವಾಹಿನಿ ಎಂದು ಕರೆಯುವುದು. ಯಾವಾಗಲೂ ಒಳ್ಳೆಯ ವಿಷಯಗಳನ್ನು ವೀಕ್ಷಕರಿಗೆ ತಲುಪಿಸಬೇಕು. ಯಾವ ವಾಹಿನಿ ಅಥವಾ ಕಾರ್ಯಕ್ರಮ ಒಳ್ಳೆಯ ವಿಷಯಗಳನ್ನು ಕೊಡುತ್ತದೆಯೋ ಅದು ಯಾವಾಗಲೂ ಜನರ ಮನಸ್ಸಿನಲ್ಲಿ ಉಳಿಯುತ್ತದೆ ಎಂದರು.

ಮನರಂಜನಾ ವಾಹಿನಿಗೆ ಆಕಾಶವೇ ಮಿತಿ. ಈ ಮನರಂಜನಾ ಕ್ಷೇತ್ರದಲ್ಲಿ ಸಾಕಷ್ಟು ಸಾಧಕರಿದ್ದಾರೆ. ಸಾಧನೆ ಬಿಟ್ಟು ಆಚೆ ಹೋದವರೂ ಇದ್ದಾರೆ. ಆಗುತ್ತಿರುವ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಹೆಚ್ಚಿನ ಸಾಧನೆ ಸಾಧ್ಯ. ಈಗಿನ ದಿನಗಳಲ್ಲಿ ಬದಲಾವಣೆ ಅಳವಡಿಸಿಕೊಳ್ಳಲು ತುಂಬಾ ಅವಕಾಶಗಳಿವೆ. ಇಲ್ಲಿ ನಮ್ಮ ಪರಿಶ್ರಮ ಮತ್ತು ತಾಳ್ಮೆ ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ನಿದ್ದೆಗೆಟ್ಟು, ವೈಯಕ್ತಿಕ ಜೀವನವನ್ನು ಬಿಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

ಆಯ್ಕೆಗಳು ಬೇರೆ ಇದ್ದರೂ ಝೀ ವಾಹಿನಿಯನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಝೀ ಮರಾಠಿ ವಾಹಿನಿಯನ್ನು ಮಹಾರಾಷ್ಟ್ರದಲ್ಲಿ ತಂದರು. ಈಗಲೂ ನೂರರಲ್ಲಿ ಅರವತ್ತು ಜನ ಈ ವಾಹಿನಿಯನ್ನೇ ವೀಕ್ಷಿಸುತ್ತಿದ್ದಾರೆ. ಹಾಗೆಯೇ ಝೀ ತಮಿಳು, ತೆಲಗು, ಮಲಯಾಳಂ ಹೀಗೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಪ್ರಾರಂಭವಾದ ಝೀ ವಾಹಿನಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಝೀ ವಾಹಿನಿಯ ಕಥಾವಿಭಾಗದ ಮುಖ್ಯಸ್ಥ ಸುಧೀರ್ ಭಾರಧ್ವಾಜ್ ಮಾತನಾಡಿದರು. ನಾನಾ ತರಹದ ಕಥೆಗಳು ಹಾಗೂ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕಥೆಯ ವಸ್ತು ಹೊಳೆಸಿಕೊಳ್ಳುವುದಷ್ಟೇ ಅಲ್ಲ, ಅದನ್ನು ನಿರೂಪಿಸುವ ಬಗೆಯೂ ಮುಖ್ಯ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು ಎಂದರು. ಓವಿ ವಾಹಿನಿಗಾಗಿ ಕಾರ್ಯಕ್ರಮ ರೂಪಿಸುವಾಗ ಸಂಶೋಧನೆ ಮುಖ್ಯವಾಗುತ್ತದೆ. ಜನರ ಅಭಿಪ್ರಾಯಗಳನ್ನು ಪರಿಗಣಿಸುವ ಸಂಯಮವಿರಬೇಕು. ಬರಹಗಾರ, ನಿರ್ದೇಶಕ, ಸಂಪಾದಕ, ಛಾಯಾಗ್ರಾಹಕ ಹಾಗೂ ವೀಕ್ಷಕ ಹೀಗೆ ಈ ಐದು ಆಯಾಮಗಳಲ್ಲಿ ಯೋಚಿಸಬೇಕು ಎಂದರು.
ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವರದಿ: ಸುವರ್ಣಾ ಹೆಗಡೆ
ಚಿತ್ರಗಳು: ಸುಮುಖ ಹೆಗಡೆ

Related posts

Leave a Reply

Your email address will not be published. Required fields are marked *