Header Ads
Breaking News

ಎಸ್.ಡಿ.ಎಂ ಪಿಜಿ ಸೆಂಟರ್ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ

ಉಜಿರೆ, ಡಿ.16: ಹೊಸ ಕಾಲದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸುವ ದೃಢಸಂಕಲ್ಪಕ್ಕನುಗುಣವಾಗಿ ವಿದ್ಯಾರ್ಥಿಗಳು ಶ್ರೇಷ್ಠ ಶೈಕ್ಷಣಿಕ ಸಾಮಥ್ರ್ಯ ರೂಢಿಸಿಕೊಳ್ಳಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅಭಿಪ್ರಾಯಪಟ್ಟರು.ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ 2020-21ರ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವ ವೆಬಿನಾರ್ ಕಾರ್ಯಕ್ರಮದಲ್ಲಿ ಪ್ರಧಾನ ಆಶಯ ನುಡಿಗಳನ್ನು ಪ್ರಸ್ತುತಪಡಿಸಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಎರಡು ಬಗೆ. ನಿರ್ದಿಷ್ಟ ಪ್ರಮಾಣಿತ ಪದವಿ ಪಡೆದವರು ಮತ್ತು ಶ್ರೇಷ್ಠ ಶೈಕ್ಷಣಿಕ ಸಾಮಥ್ರ್ಯದೊಂದಿಗೆ ಗುರುತಿಸಿಕೊಂಡು ಮುನ್ನಡೆ ಸಾಧಿಸುವವರು. ಪದವಿಯ ಪ್ರಮಾಣ ಪತ್ರಗಳು ವಿಭಿನ್ನ ಯಶಸ್ಸು ಸಾಧಿಸುವುದಕ್ಕೆ ಬೇಕಾಗುವ ಪ್ರಾಥಮಿಕ ಅಗತ್ಯಗಳು. ಆದರೆ, ಇವುಗಳೊಂದಿಗೆ ವಿದ್ಯಾರ್ಥಿಗಳಲ್ಲಿ ಶ್ರೇಷ್ಠ ಶೈಕ್ಷಣಿಕ ಸಾಮಥ್ರ್ಯವೂ ಇರಬೇಕು. ಪ್ರಮಾಣ ಪತ್ರದಲ್ಲಿ ದೃಢೀಕೃತವಾದ ಪದವಿಯ ಮೌಲ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಜ್ಞಾನ ಗಳಿಸಿಕೊಂಡು ಅದನ್ನು ವೃತ್ತಿಪರ ಘನತೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುವ ಜಾಣ್ಮೆ ಇರಬೇಕು ಎಂದರು.

ಕಲಿಕೆಯು ನಿರಂತರವಾದುದು. ನಿರ್ದಿಷ್ಟ ಅವಧಿಯ ಕಲಿಕೆಯ ನಂತರ ವೃತ್ತಿರಂಗ ಪ್ರವೇಶಿಸಿದಾಗಲೂ ತಿಳಿದುಕೊಳ್ಳುವ ಮತ್ತು ತಿಳಿದುಕೊಂಡದ್ದನ್ನು ಅನ್ವಯಿಸಿಕೊಂಡು ಹೊಸ ಬಗೆಯ ಯಶಸ್ಸನ್ನು ಕಂಡುಕೊಳ್ಳುವ ಉತ್ಸಾಹ ಇರಬೇಕು. ಪ್ರಾಥಮಿಕ ಶಾಲಾ ಹಂತದಿಂದ ಉನ್ನತ ಶಿಕ್ಷಣದ ಅವಧಿಯವರೆಗೆ ಬೇರೆ ಬೇರೆ ಕಲಿಕೆಯ ಮಾದರಿಗಳು ಲಭ್ಯವಾಗಿರುತ್ತವೆ. ಉನ್ನತ ಶಿಕ್ಷಣ ಹಂತದ ತರಗತಿಗಳು ಸ್ವತಂತ್ರ ಆಲೋಚನಾ ಕ್ರಮವನ್ನು ರೂಢಿಸುತ್ತವೆ. ವಿಶಿಷ್ಠ ಗ್ರಹಿಕೆಯ ಶಕ್ತಿಯನ್ನು ದಾಟಿಸುತ್ತವೆ. ಈ ಹಂತದಲ್ಲಿಯೇ ಗುರಿಸಾಧನೆಯ ಸ್ಪಷ್ಟ ಹೆಜ್ಜೆಗಳು ಗೋಚರಿಸುತ್ತವೆ ಎಂದು ಹೇಳಿದರು.
ಯಾವುದೇ ಕೋರ್ಸ್ ಅಧ್ಯಯನದ ಸಂದರ್ಭದಲ್ಲಿ ಜ್ಞಾನದ ವೈವಿಧ್ಯಮಯ ಅಂಶಗಳನ್ನು ತಿಳಿದುಕೊಳ್ಳುವ ಅಪೂರ್ವ ಅವಕಾಶ ಲಭ್ಯವಾಗುತ್ತದೆ. ತಿಳಿದುಕೊಂಡಿದ್ದನ್ನು ಪ್ರಭಾವೀಯಾಗಿ ಅಭಿವ್ಯಕ್ತಿಸುವ ಕೌಶಲ್ಯವಿರಬೇಕು. ಆ ಮೂಲಕ ವೃತ್ತಿಪರ ನೈಪುಣ್ಯತೆ ಸಾಧ್ಯವಾಗಿಸಿಕೊಂಡಾಗಲೇ ಉನ್ನತ ಶಿಕ್ಷಣ ಹಂತದ ಅರ್ಥಪೂರ್ಣ ಪ್ರಯೋಜನ ದಕ್ಕುತ್ತದೆ ಎಂದು ವ್ಯಾಖ್ಯಾನಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸತೀಶ್ಚಂದ್ರ ಎಸ್ ಅವರು ಎಸ್.ಡಿ.ಎಂ ಸಂಸ್ಥೆಯ ಶೈಕ್ಷಣಿಕ ಮತ್ತು ಸಮಾಜಮುಖಿ ವೈಶಿಷ್ಟ್ಯತೆಯನ್ನು ಪರಿಚಯಿಸಿದರು. ಅಧ್ಯಯನನಿರತ ವಿದ್ಯಾರ್ಥಿಗಳಲ್ಲಿ ವೃತ್ತಿಪರ ರಂಗ ನಿರೀಕ್ಷಿಸುವ ಸಾಮಥ್ರ್ಯವನ್ನು ರೂಢಿಸುವುದರ ಜೊತೆಗೆ ಅವರಲ್ಲಿ ಸಾಮಾಜಿಕ ಹೊಣೆಗಾರಿಕೆ ಮತ್ತು ಮೌಲ್ಯಗಳ ಪರವಾದ ನಿಲುವುಗಳನ್ನು ನೆಲೆಗೊಳಿಸುವ ಎಸ್.ಡಿ.ಎಂ.ನ ಪ್ರಯೋಗಶೀಲತೆಯ ವಿವಿಧ ಹೆಜ್ಜೆಗಳ ಕುರಿತು ಮಾಹಿತಿ ನೀಡಿದರು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ ಅವರು ವಿವಿಧ ವಿಭಾಗಗಳ ಶೈಕ್ಷಣಿಕ ಪಠ್ಯ ತರಗತಿಗಳ ನಿರ್ವಹಣಾ ಮಾದರಿ ಮತ್ತು ಔದ್ಯಮಿಕ ವಲಯದ ನಿರೀಕ್ಷೆಗೆ ತಕ್ಕಂತೆ ನಡೆಯುವ ಪ್ರಾಯೋಗಿಕ ತರಬೇತಿಯ ಸಮಗ್ರ ವಿವರಗಳನ್ನು ಪ್ರಸ್ತುತಪಡಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಫೀಸತ್ ಅವರು ಕಾರ್ಯಕ್ರಮ ನಿರೂಪಿಸಿದರು. ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವಂದನಾ ಜೈನ್ ಸ್ವಾಗತಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾದ ಸುವೀರ್ ಜೈನ್ ವಂದಿಸಿದರು.

Related posts

Leave a Reply

Your email address will not be published. Required fields are marked *