Header Ads
Breaking News

ಎಸ್.ಡಿ.ಎಂ. ಪಿ.ಜಿ. ಸೆಂಟರ್‍ನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಭಾರತೀಯ ಶಿಕ್ಷಣವು ವಿದ್ಯಾರ್ಥಿಗಳನ್ನು ವಿವಿಧ ಕ್ಷೇತ್ರಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾಗುವ ಪರಿಣಿತರನ್ನಾಗಿ ಪರಿವರ್ತಿಸುವಂಥ ಶ್ರೇಷ್ಠ ಜಾಗತಿಕ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ನಿಟ್ಟೆ ಡೀಮ್ಡ್ ಯುನಿವರ್ಸಿಟಿಯ ಪ್ರೊ ವೈಸ್ ಚಾನ್ಸಲರ್ ಡಾ.ಎಂ.ಮೂಡಿತ್ತಾಯ ಅವರು ಅಭಿಪ್ರಾಯಪಟ್ಟರು.

ಅವರು ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಶಾಸ್ತ್ರ ವಿಭಾಗವು ಮಂಗಳವಾರ ‘ವಾಣಿಜ್ಯ ಮತ್ತು ನಿರ್ವಹಣಾ ಕ್ಷೇತ್ರದ ಪ್ರಚಲಿತ ಸ್ಥಿತಿಗತಿ’ ಕುರಿತು ಆಯೋಜಿಸಿದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಪ್ರಧಾನ ಆಶಯಗಳನ್ನು ಪ್ರಸ್ತುತಪಡಿಸಿ ಮಾತನಾಡಿದರು.

ಮೆಕಾಲೆ ಶಿಕ್ಷಣ ಪದ್ದತಿಯ ಸಾಂಪ್ರದಾಯಿಕ ಚೌಕಟ್ಟುಗಳಿಂದ ಹೊರಬಂದು ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಬೇಕಾಗಿದೆ. ತರಗತಿಗಳ ಪಠ್ಯಗಳನ್ನು ಹೊರಗಿನ ಪ್ರಪಂಚದ ಆಗು-ಹೋಗುಗಳೊಂದಿಗೆ ವಿಶ್ಲೇಷಿಸಿ ವಿದ್ಯಾರ್ಥಿಗಳನ್ನು ಪರಿಣತರನ್ನಾಗಿ ಪರಿವರ್ತಿಸಬೇಕು. ವಿದ್ಯಾರ್ಥಿಗಳನ್ನು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕಲಾತ್ಮಕ ಮತ್ತು ಸಾಮಾಜಿಕ ವಲಯಗಳಲ್ಲಿ ಭಿನ್ನ ಸಾಧನೆಗೈಯ್ಯುವ ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸುವುದಕ್ಕೆ ಜಗತ್ತಿನ ವಿವಿಧೆಡೆ ಲಭ್ಯವಿರುವ ಶ್ರೇಷ್ಠ ಶೈಕ್ಷಣಿಕ ಮಾದರಿಗಳನ್ನು ಅನುಸರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದ ಅವಶ್ಯಕತೆಗಳಿಗೆ ತಕ್ಕಂತೆ ಸಜ್ಜುಗೊಳಿಸುವ ಅಗತ್ಯವಿದೆ. ಆರ್ಥಿಕ ಕೈಗಾರಿಕೆಗಳಿಗಿಂತ ಜ್ಞಾನ ಕೈಗಾರಿಕೆಗಳ ಕಡೆಗೆ ಗಮನಹರಿಸಬೇಕಿದೆ. ವೃತ್ತಿಪರ ಕೋರ್ಸುಗಳಿಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದ ಮಾದರಿಗಳನ್ನು ಅನುಸರಿಸಬೇಕು. ಶೈಕ್ಷಣಿಕ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಭಾರತವು 17ನೇ ಶತಮಾನದಷ್ಟು ಹಿಂದುಳಿದಿದೆ. ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 19ನೇ ಶತಮಾನದ ಮಾದರಿಗಳಲ್ಲಿಯೇ ಸಿಲುಕಿಕೊಂಡಿದೆ. ಅಧ್ಯಾಪಕರು 20ನೇ ಶತಮಾನದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಆದರೆ, ವಿದ್ಯಾರ್ಥಿಗಳು ಮಾತ್ರ 21ನೇ ಶತಮಾನದ ಸ್ಪರ್ಧಾತ್ಮಕ ಸ್ವರೂಪಕ್ಕೆ ತಕ್ಕಂತೆ ತಿಳಿದುಕೊಳ್ಳುವ ಹಂಬಲದೊಂದಿಗಿದ್ದಾರೆ. ಇದನ್ನು ಪರಿಗಣಿಸಿ ಮಹತ್ವದ ಬದಲಾವಣೆಗಳಾಗಬೇಕು ಎಂದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ಸತೀಶ್ಚಂದ್ರ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಗಣಪಯ್ಯ ಬಿ, ಸಹಾಯಕ ಪ್ರಾಧ್ಯಾಪಕ ಚಿದಾನಂದ ಎಚ್.ಆರ್. ಉಪಸ್ಥಿತರಿದ್ದರು.ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ಮುಖ್ಯಸ್ಥರಾದ ಡಾ.ಪಿ.ಎನ್.ಉದಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಮನ್ವಿತ, ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ಡಾ.ಪ್ರಿಯಕುಮಾರಿ ವಂದಿಸಿದರು.

Related posts

Leave a Reply

Your email address will not be published. Required fields are marked *