Header Ads
Breaking News

ಎಸ್.ಡಿ.ಎಂ ಸಂಸ್ಥೆಯ ಕಾಳಜಿ : ಕೋವಿಡ್-19 ಸಂಬಂಧಿತ ರಜಾದಿನಗಳಲ್ಲಿ ತಂತ್ರಜ್ಞಾನಾಧಾರಿತ ಅಧ್ಯಯನಾವಕಾಶ

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಘೋಷಿತ ಕೋವಿಡ್-19 ಸಂಬಂಧಿತ ರಜೆಯ ಅವಧಿಯ ವೇಳೆ ಎಸ್.ಡಿ.ಎಂ ಪದವಿ ಕಾಲೇಜು ತಾಂತ್ರಿಕ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಪರೀಕ್ಷಾ ಪೂರ್ವಸಿದ್ಧತೆಗೆ ಅನುಕೂಲವಾಗುವಂತೆ ಪಠ್ಯಸಂಬಂಧಿತ ಆನ್‍ಲೈನ್ ಉಪನ್ಯಾಸ, ವಿಶ್ಲೇಷಣಾ ವಿವರ, ಪೂರಕ ಟಿಪ್ಪಣಿ ಸೇರಿದಂತೆ ಸಮಗ್ರವಾದ ಅಧ್ಯಯನ ಸಾಮಗ್ರಿ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಗೂಗಲ್ ಡ್ರೈವ್, ಗೂಗಲ್ ಕ್ಲಾಸ್‍ರೂಮ್ ಮತ್ತು ವಾಟ್ಸಾಪ್ ಸಂವಹನದ ಮೂಲಕ ತರಗತಿಯಲ್ಲಿ ಚರ್ಚಿಸಬಹುದಾಗಿದ್ದ ಪಠ್ಯಸಂಬಂಧಿತ ಮಹತ್ವದ ವಿಚಾರಗಳನ್ನು ಪ್ರಾಧ್ಯಾಪಕ ವರ್ಗ ತಲುಪಿಸುತ್ತಿದೆ. ಇದೀಗ ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಜೆ ಘೋಷಿತವಾಗಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಡ್ಡಿಯುಂಟಾಗಬಾರದು ಎಂಬ ಉದ್ದೇಶದೊಂದಿಗೆ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳ ಅಧ್ಯಾಪಕರು ಪಠ್ಯಸಂಬಂಧಿತ ವಿವರಗಳನ್ನು ವಿದ್ಯಾರ್ಥಿಗಳಿಗೆ ತಾಂತ್ರಿಕ ವೇದಿಕೆಗಳ ಮೂಲಕ ಒದಗಿಸಿಕೊಡುತ್ತಿದ್ದಾರೆ ಎಂದು ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ ಎಸ್. ತಿಳಿಸಿದ್ದಾರೆ.

ಕೊರೊನಾ ಜಾಗೃತಿ:
ಇದರೊಂದಿಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕೊರೊನಾ ವೈರಸ್ ಕುರಿತಾದ ಜಾಗೃತಿ ಮೂಡಿಸುವಲ್ಲಿ ಕಾರ್ಯನಿರತರಾಗಿದ್ದಾರೆ. ಕೊರೊನಾ ಕುರಿತು ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಿ ಸುತ್ತಮುತ್ತಲಿನ ಪರಿಸರದಲ್ಲೂ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕು ಎಂದು ಪ್ರಾಂಶುಪಾಲರು ಸಂದೇಶ ರವಾನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ತಲುಪುವ ಉದ್ದೇಶದಿಂದ ರೂಪಿತವಾದ ವಿಶೇಷ ವಿಡಿಯೋದಲ್ಲಿ ಪ್ರಾಂಶುಪಾಲರು ಮಾತನಾಡಿದ್ದು, ಪ್ರಧಾನಮಂತ್ರಿ ಕರೆ ನೀಡಿರುವ ಜನತಾ ಕಫ್ರ್ಯೂಗೆ ಸಹಕರಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.

ಸಂಸ್ಥೆಯ ಕಾಳಜಿಯುತ ನಿಲುವುಗಳನ್ನು ಪ್ರಾಂಶುಪಾಲರು ವಿಡಿಯೋ ಮೂಲಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ವಿದ್ಯಾರ್ಥಿ ಸಮುದಾಯದ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕಾಲೇಜಿನ ಸಾಮಾಜಿಕ ಹೊಣೆಗಾರಿಕಾ ಸಮಿತಿಯ ಪ್ರಕಟಣೆಯ ತಿಳಿಸಿದೆ.

“ರಜೆಯ ಅವಧಿಯಲ್ಲೂ ಶೈಕ್ಷಣಿಕ ಅಧ್ಯಯನ ನಿರಂತರವಾಗಿರುವುದಕ್ಕೆ ಖುಷಿ ಇದೆ. ಗೂಗಲ್ ಕ್ಲಾಸ್‍ರೂಮ್, ಡ್ರೈವ್, ಆನ್‍ಲೈನ್ ಮೂಲಕ ನಮ್ಮ ಪಠ್ಯಸಂಬಂಧಿತ ಹಲವು ವಿವರಗಳನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲವಾಗುತ್ತಿದೆ. ರಜೆಯ ವೇಳೆಯಲ್ಲೂ ಕಾಲೇಜಿನೊಂದಿಗೆ ನಿರಂತರವಾಗಿ ಶೈಕ್ಷಣಿಕವಾಗಿ ಬೆಸೆದುಕೊಂಡಿರುವುದರ ಬಗ್ಗೆ ಹೆಮ್ಮೆ ಇದೆ” ಎಂದು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿನಿ ವರ್ಷಾ ಪ್ರಭು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Related posts

Leave a Reply

Your email address will not be published. Required fields are marked *