Header Ads
Breaking News

ಐತಿಹಾಸಿಕ ಹಿನ್ನಲೆಯುಳ್ಳ ಸರಕಾರಿ ಶಾಲೆಯನ್ನು ಹೊಸಕಿ ಹಾಕುವ ಪ್ರಯತ್ನದಲ್ಲಿ ಶಿಕ್ಷಣ ಇಲಾಖೆ

ಖಾಸಗಿ ಶಾಲೆಗೆ ಸರಿಸಾಟಿಯಾದ, ಐತಿಹಾಸಿಕ ಹಿನ್ನಲೆಯುಳ್ಳ ಸರಕಾರಿ ಶಾಲೆಯೊಂದನ್ನು ಶಿಕ್ಷಣ ಇಲಾಖೆಯೇ ಹೊಸಕಿ ಹಾಕುವ ಪ್ರಯತ್ನದಲ್ಲಿದೆ. ಹೌದು ಪುತ್ತೂರಿನ ಬೋರ್ಡ್ ಹೈಸ್ಕೂಲ್ ಎಂದೇ ಪ್ರಸಿದ್ಧಿಯಾಗಿರುವ, ಬ್ರಿಟಿಷ್ ಕಾಲದಿಂದಲೂ ಕಾರ್ಯಾಚರಿಸುತ್ತಿರುವ ಈ ಶಾಲೆಯಿಂದ 6 ಶಿಕ್ಷಕರನ್ನು ಒಂದೇ ದಿನ ವರ್ಗಾವಣೆ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಜ್ಯದಲ್ಲೇ ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯೆಂದು ಗುರುತಿಸಿಕೊಂಡಿರುವ ಈ ಶಾಲೆಯಲ್ಲಾದ ಈ ಬದಲಾವಣೆ ಶಾಲೆಯ ಗತಕಾಲದ ವೈಭವಕ್ಕೆ ಹೊಡೆತವನ್ನೂ ನೀಡಿದಂತಾಗಿದೆ. 

ಇದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬ್ರಿಟಿಷರು ಪ್ರಾರಂಭಿಸಿದ ಶಾಲೆಗಳಲ್ಲಿ ಒಂದಾಗಿರುವ ಪುತ್ತೂರಿನ ಬೋರ್ಡ್ ಹೈಸ್ಕೂಲ್ ಎಂದೇ ಪ್ರಸಿದ್ಧಿಯಾಗಿರುವ ಕೊಂಬೆಟ್ಟು ಸರಕಾರಿ ಪ್ರೌಢಶಾಲೆ. ಈ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ನಡೆದ ಬೆಳವಣಿಗೆ ಶಾಲೆಯ ಗತ ವೈಭವಕ್ಕೇ ಪೆಟ್ಟು ನೀಡುವಂತೆ ಮಾಡಿದೆ. ಹೌದು ರಾಜ್ಯದಲ್ಲೇ ಅತ್ಯಂತ ಹೆಚ್ಚು ವಿದ್ಯಾರ್ಥಿಗಳಿರುವ ಸರಕಾರಿ ಶಾಲೆಗಳ ಪೈಕಿ ಇದೂ ಒಂದೂ.8 ರಿಂದ 10 ನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಈಗಾಗಲೇ 658 ಮಕ್ಕಳು ಸೇರ್ಪಡೆಗೊಂಡಿದ್ದು, ಇನ್ನಷ್ಟು ಮಕ್ಕಳೂ ಸೇರ್ಪಡೆಗೊಳ್ಳುವ ಹಂತದಲ್ಲಿದ್ದಾರೆ. ಶಾಲೆಯ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿಯೇ ಇಲ್ಲಿಗೆ ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ 6 ಶಿಕ್ಷಕರನ್ನು ನಿಯೋಜಿಸಿತ್ತು. ಆದರೆ ಇದೀಗ ಶಿಕ್ಷಣ ಇಲಾಖೆ ತನ್ನ ಶಿಕ್ಷಕ ವರ್ಗಾವಣೆ ನೀತಿಯ ಅನ್ವಯ ಇಲ್ಲಿದ್ದ 6 ಜನ ಹೆಚ್ಚುವರಿ ಶಿಕ್ಷಕರನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರ ವಿದ್ಯಾರ್ಥಿಗಳನ್ನೂ, ಪೋಷಕರನ್ನೂ ಕಂಗೆಡಿಸಿದ್ದು, ಇಲಾಖೆಯು ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎನ್ನುವ ಒತ್ತಾಯವನ್ನೂ ಮಾಡಲಾರಂಭಿಸಿದ್ದಾರೆ. ಶಿಕ್ಷಣ ಇಲಾಖೆಯ ನಿಯಮದಂತೆ ಈ ಶಾಲೆಯಲ್ಲಿ ಹನ್ನೆರಡರಿಂದ ಹೆಚ್ಚು ತರಗತಿಗಳು ನಡೆಯುತ್ತಿದ್ದರೆ, ಪ್ರತಿ ತರಗತಿಗೆ ಒಂದೂವರೆ ಶಿಕ್ಷಕರನ್ನು ನೇಮಿಸಬೇಕಿದೆ. ಈ ಪ್ರಕಾರ ಶಾಲೆಗೆ 20 ಶಿಕ್ಷಕರ ಅಗತ್ಯವಿದ್ದು, ಪ್ರಸ್ತುತ ಈ ಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರನ್ನು ಸೇರಿಸಿ ಇಲ್ಲಿ 19 ಶಿಕ್ಷಕರಿದ್ದಾರೆ.6 ಶಿಕ್ಷಕರು ವರ್ಗಾವಣೆಗೊಂಡ ಪರಿಣಾಮ ಈ ಸಂಖ್ಯೆ ಇದೀಗ 13 ಕ್ಕೆ ಇಳಿದಿದ್ದು, ಇದು ಮಕ್ಕಳ ಪೋಷಕರ ಆಕ್ರೋಶಕ್ಕೂ ಕಾರಣವಾಗಿದೆ.

ಶಾಲೆಯಲ್ಲಿ ಪ್ರತೀ ಶಿಕ್ಷಕನಿಗೆ ಇಲಾಖೆಯ ನಿಯಮಕ್ಕಿಂತ ಹೆಚ್ಚುವರಿಯಾಗಿ ತರಗತಿಗಳನ್ನು ಮಾಡುವಂತಹ ಸ್ಥಿತಿ ಈ ಶಾಲೆಯಲ್ಲಿದೆ. ಆದರೆ ಮಕ್ಕಳ ಹಿತದೃಷ್ಟಿಯಿಂದ ಇರುವ ಶಿಕ್ಷಕರನ್ನೇ ಬಳಸಿಕೊಂಡು ಶಾಲೆಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಇದೀಗ ಶಿಕ್ಷಣ ಇಲಾಖೆ ದಿಢೀರನೆ 6 ಶಿಕ್ಷಕರನ್ನು ವರ್ಗಾವಣೆ ಮಾಡಿರುವುದು ಶಿಕ್ಷಕ ವರ್ಗವನ್ನೂ ಗರಬಡಿದಂತೆ ಮಾಡಿದೆ.6 ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸಿರುವುದೇ ಇಲಾಖೆಯ ಮೊದಲ ತಪ್ಪು ಎನ್ನುವ ಅಭಿಪ್ರಾಯಗಳೂ ಕೇಳಿ ಬರಲಾರಂಭಿಸಿದೆ. ಈ ಶಾಲೆ ರಾಜ್ಯದಲ್ಲೇ ಮೊದಲ ಅಟಲ್ ಟಿಂಕರಿಗ್ ಲ್ಯಾಬ್ ಪಡೆದ ಸರಕಾರಿ ಶಾಲೆಯಾಗಿಯೂ ಗುರುತಿಸಿಕೊಂಡಿದೆ. ಅಲ್ಲದೆ ಮೂರನೆಯೇ ಭಾಷೆಯಾಗಿ ಇಲ್ಲಿ ಅಟೋಮೊಬೈಲ್ ಹಾಗೂ ಐಟಿ ಶಿಕ್ಷಣವನ್ನೂ ನೀಡಲಾಗುತ್ತಿದೆ. ಪುರಾತತ್ವ ಇಲಾಖೆಯಿಂದ ಐತಿಹಾಸಿಕ ಇತಿಹಾಸವಿರುವ ಶಾಲೆ ಎಂದು ಗುರುತಿಸಲ್ಪಟ್ಟಿರುವ ಈ ಶಾಲೆಯ ವಿಶೇಷತೆಯನ್ನು ಗಮನದಲ್ಲಿಟ್ಟುಕೊಂಡಾದರೂ ಇಲ್ಲಿಗೆ ಶಿಕ್ಷಕರನ್ನು ನಿಯೋಜಿಸಬೇಕು ಎನ್ನುವ ಒತ್ತಡವೂ ಬರುತ್ತಿದೆ.

ಪೋಷಕರು ಸರಕಾರಿ ಶಾಲೆಗಳೆಂದರೆ, ದೂರ ಸರಿಯುತ್ತಿರುವ ಈ ಸಮಯದಲ್ಲಿ ಕೊಂಬೆಟ್ಟು ಸರಕಾರಿ ಶಾಲೆ ಮಾತ್ರ ಪೋಷಕರ ಫೇವರೇಟ್ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಶಿಕ್ಷಣಕ್ಕೆ ಅತ್ಯಂತ ಹೆಚ್ಚು ಉತ್ತೇಜನ ನೀಡುವ ಶಾಲೆಯೂ ಇದಾಗಿದ್ದು, ಶಿಕ್ಷಕರ ವರ್ಗಾವಣೆಯನ್ನು ಕೂಡಲೇ ನಿಲ್ಲಿಸಬೇಕೆಂಬ ಒತ್ತಡವೂ ಕೇಳಿ ಬಂದಿದೆ.

Related posts

Leave a Reply

Your email address will not be published. Required fields are marked *