Header Ads
Header Ads
Breaking News

“ಐಸಿಯು”ನಲ್ಲಿರುವ ಸರಕಾರದಿಂದ ಕೃಷಿಕರು “ಅನಾಥ”-ಮಠಂದೂರು

ಪುತ್ತೂರು; ಜನತೆಯ ತೆರಿಗೆಯ ಹಣದಿಂದ ರೈತರ ಸಾಲಮನ್ನಾ ಮಾಡಬೇಕು ಎಂಬುವುದು ನಮ್ಮ ಬೇಡಿಕೆ. ಆದರೆ ಸರಕಾರ ಸಾಲಮನ್ನಾ ಮಾಡುವ ಯಾವುದೇ ಲಕ್ಷಣಗಳೂ ಕಂಡು ಬರುತ್ತಿಲ್ಲ. ಕಳೆದ 4 ತಿಂಗಳಿನಿಂದ ಸರಕಾರ ವೇ ’ಐಸಿಯು’ನಲ್ಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಸಹಕಾರ ಭಾರತಿ ತೇತೃತ್ವದಲ್ಲಿ ಸೋಮವಾರ ಪುತ್ತೂರು ಸಹಾಯಕ ಕಮಿಷನರ್ ಕಚೇರಿ ಮುಂಭಾಗದಲ್ಲಿ ನಡೆದ ರೈತರ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಪ್ರಕೃತಿ ವಿಕೋಪದಿಂದ ಜರ್ಜರಿತಗೊಂಡಿರುವ ಜಿಲ್ಲೆಯ ಕೃಷಿಕ ವರ್ಗದಲ್ಲಿ ಸರಕಾರ ನೀಡಿದ ಭರವಸೆಯಿಂದ ಆಶಾಭಾವನೆ ಮೂಡಿತ್ತು. ಆದರೆ ಈಗ ಸಾಲಮನ್ನಾದ ಬಗ್ಗೆ ಗೊಂದಲ ಉಂಟಾಗಿದ್ದು, ರೈತರು ’ಅನಾಥ’ ಸ್ಥಿತಿ ಅನುಭವಿಸುತ್ತಿದ್ದಾರೆ. ಜಿಲ್ಲೆಯ ರೈತರು ನೇಣಿಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದವರು ಹೇಳಿದರು.ಸಾಲಮನ್ನಾದ ಘೋಷಣೆ ಮಾಡಿ ಇದೀಗ ಷರತ್ತುಗಳನ್ನು ವಿಧಿಸಿ ರೈತರ ಕಣ್ಣೊರೆಸುವ ನಾಟಕ ಸರಕಾರದಿಂದ ನಡೆಯುತ್ತಿದೆ. ರೈತಪರವಾದ ಯಾವುದೇ ಯೋಜನೆಗಳನ್ನು ರಾಜ್ಯ ಸರಕಾರ ಅನುಷ್ಟಾನಕ್ಕೆ ತಂದಿಲ್ಲ. ರೈತರು ತಮ್ಮ ಬ್ಯಾಂಕ್ ಖಾತೆಯಲ್ಲಿಟ್ಟ ’ಆಪದ್ಧನ’ದ ಬಗ್ಗೆ ಸರಕಾರ ’ಡೆಪೋಸಿಟ್’ ಎಂದು ಕೆಂಗಣ್ಣು ಬೀರುತ್ತಿದೆ. ಇದೆಲ್ಲಾ ಬಿಟ್ಟು ರೈತರ ಸಂಪೂರ್ಣ ಸಾಲಮನ್ನಾ ಮಾಡಿ. ಸಾಲಮನ್ನಾದ ಷರತ್ತುಗಳನ್ನು ರದ್ದು ಮಾಡಿ ರೈತರ ನೆರವಿಗೆ ಬನ್ನಿ ಎಂದು ಶಾಸಕರು ಸರಕಾರವನ್ನು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಹಕಾರ ಭಾರತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಆಚಾರ್ಯ ಮಾತನಾಡಿ, ರೈತರನ್ನು ಋಣಮುಕ್ತರಾಗಿಸಲು ಹೊರಟ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಸಾಲಮನ್ನಾದ ಜೊತೆಗೆ ಷರತ್ತು ವಿಧಿಸುವ ಮೂಲಕ ರೈತರನ್ನು ಬೀದಿಗೆ ತಂದಿದ್ದಾರೆ. ೧೦ ದಿನಗಳ ಒಳಗಾಗಿ ಸರಕಾರ ಸಾಲಮನ್ನಾದ ಬಗ್ಗೆ ಸ್ಪಷ್ಟ ನೀತಿಯನ್ನು ತಳೆಯದಿದ್ದರೆ ವಿಧಾನಸಭೆಗೆ ಮುತ್ತಿಗೆ ಹಾಕುವ ಕೆಲಸಕ್ಕೆ ಸಹಕಾರ ಭಾರತಿ ಮುಂದಾಗಲಿದೆ ಎಂದರು. ಸಹಕಾರ ಭಾರತಿಯ ರಾಜ್ಯ ಕಾರ್ಯದರ್ಶಿ ನವೀನ್ ಮಾತನಾಡಿ, ಸಾಲಮನ್ನಾ ಕೇಳುವುದು ರೈತರ ಹಕ್ಕು. ಕಳೆದ ೪ ತಿಂಗಳುಗಳಿಂದ ನಡೆಸುತ್ತಿರುವ ನಾಟಕದ ಆಟ ಬದಿಗಿಟ್ಟು ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರೈತರ ಪಾಲಿಗೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರಕಾರ ’ಸ್ಲೋ ಪಾಯಿಸನ್’ ನಂತಾಗಿದೆ ಎಂದರು.ಪ್ರತಿಭಟನೆಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿಶ್ವೇಶ್ವರ ಭಟ್ ಬಂಗಾರಡ್ಕ ಮೊದಲಾದವರು ಮಾತನಾಡಿದರು. ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು ಮನವಿ ವಾಚಿಸಿದರು. ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್ ರೈ ಬಾಲ್ಯೊಟ್ಟು, ನಗರಸಭಾ ಸದಸ್ಯೆ ಗೌರಿ ಬನ್ನೂರು, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಉಷಾ ನಾರಾಯಣ, ಸಹಕಾರ ಭಾರತಿಯ ಮಾಜಿ ಅಧ್ಯಕ್ಷ ಉದಯಕುಮಾರ್ ರೈ ಮಾದೋಡಿ, ಬಿಜೆಪಿ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಪ್ರೇಮಲತಾ ರಾವ್ ಮೊದಲಾದವರು ಭಾಗವಹಿಸಿದ್ದರು. ಚಂದ್ರಶೇಖರ್ ರಾವ್ ಬಪ್ಪಳಿಗೆ ನಿರೂಪಿಸಿದರು.

Related posts

Leave a Reply