Header Ads
Header Ads
Header Ads
Breaking News

ಒಂದು ಚೆಂಡು ಮಲ್ಲಿಗೆ ದಂಡೆ… ಬದುಕಿಗೆ ಆಸರೆಯಾದ ಕಾಯಕ

ಪುತ್ತೂರು; ಒಂದು ಚೆಂಡು ಮಲ್ಲಿಗೆ ದಂಡೆ ಬದುಕನ್ನೇ ಬದಲಿಸಬಲ್ಲದು. ಅದೊಂದು ಪುಟ್ಟ ಸಂಸಾರ. ಹೇಳಿಕೊಳ್ಳುವಂತಹ ಯಾವುದೇ ಆಸ್ತಿಯಿಲ್ಲ. ಕೃಷಿ ಮಾಡುವ ದೊಡ್ಡ ಅನುಕೂಲವೂ ಇವರಿಗಿಲ್ಲ. ಆಗ ಇವರ ಬದುಕಿನ ದಾರಿಗೆ ನೆರವು ನೀಡಿದ್ದು ’ಮಲ್ಲಿಗೆ’ ಕೃಷಿ. ಇದರ ಘಮ ಘಮ ಪರಿಮಳ ಈ ಪುಟ್ಟ ಸಂಸಾರದಲ್ಲೂ ಸವಿ ತಂದಿದೆ.

ಇವರು ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಂಚಾಯತ್ ನ ಕೌಡಿಚ್ಚಾರ್ ಎಂಬಲ್ಲಿನ ಆಚಾರಿಮೂಲೆ ಮನೆಯ ಗೃಹಿಣಿ ವಸಂತಿ. ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ಬದುಕುತ್ತಿರುವ ಇವರಿಗೆ ಆರ್ಥಿಕ ಸಬಲೀಕರಣಕ್ಕೆ ದಾರಿಯೊಂದು ಬೇಕಾಗಿತ್ತು. ಮಕ್ಕಳ ಬದುಕಿಗೆ ಚೈತನ್ಯ ನೀಡುವ ಕಾಯಕ ಅಗತ್ಯವಿತ್ತು. 150 ಅಡಿಕೆ ಗಿಡಗಳಿಂದ ಇವರ ಬದುಕು ಕಟ್ಟಿಕೊಳ್ಳಲು ಸಾಧ್ಯವಿರಲಿಲ್ಲ. ಅದಕ್ಕಾಗಿಯೇ ಇವರು ಕಂಡುಕೊಂಡದ್ದು ಮಲ್ಲಿಗೆ ಕೃಷಿ. ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಲಹೆ ಹಾಗೂ ಪ್ರೋತ್ಸಾಹ ಕಾರಣವಾಯಿತು.

30 ಮಲ್ಲಿಗೆ ಗಿಡಗಳನ್ನು ನೆಟ್ಟು ಮಲ್ಲಿಗೆ ಕೃಷಿ ಆರಂಭವೇನೋ ಮಾಡಿಯಾಯಿತು. ಆದರೆ ಇದನ್ನು ಪುತ್ತೂರಿಗೆ ಕೊಂಡು ಹೋಗುವುದೂ ಸಮಸ್ಯೆಯಾಯಿತು. ಇದರೊಂದಿಗೆ ಪುತ್ತೂರಿನ ಅಂಗಡಿಗಳ ಮಲ್ಲಿಗೆ ವ್ಯಾಪಾರಿಗಳು ಮಲ್ಲಿಗೆ ಬೇಡ ಎನ್ನಲಾರಂಭಿಸಿದರು. ವಸಂತಿಯವರಿಗೆ ದಾರಿ ಕಾಣದಾಯಿತು. ಮಲ್ಲಿಗೆ ಕೃಷಿ ಆರಂಭಿಸಿದರೂ ಮಾರಾಟದ ತೊಡಕು ಕಾಡತೊಡಗಿತು. ಮುಂದೇನು….!
ಆಗ ಹುಟ್ಟಿಕೊಂಡ ಯೋಚನೆಯೇ ರಸ್ತೆಯ ಬದಿಯಲ್ಲಿ ನಿಂತು ಮಾರಾಟ ಮಾಡುವುದು. ಮಾಣಿ ಮೈಸೂರು ರಸ್ತೆಯ ಬದಿಯಲ್ಲಿ ನಿಂತು ಮಾರಾಟ ಮಾಡುವುದು. ಸ್ವಲ್ಪ ದಿನ ಈ ಯೋಚನೆಯ ಹಿನ್ನಲೆಯಲ್ಲಿಯೇ ರಸ್ತೆ ಬದಿಯಲ್ಲಿ ನಿಂತು ಮಲ್ಲಿಗೆ ಮಾರಾಟ ನಡೆಸಿದರು. ಈ ರಸ್ತೆಯಲ್ಲಿ ಕಾರಿನಲ್ಲಿ ಓಡಾಡುವ ಮಂದಿ ನಿಧಾನಕ್ಕೆ ಮಲ್ಲಿಗೆ ಖರೀದಿಸಲಾರಂಭಿಸಿದರು. ಮಲ್ಲಿಗೆ ಕಟ್ಟಿ ಪುತ್ತೂರಿಗೆ ಒಯ್ದುಕೊಡುವ ಬದಲು ಇದೇ ಪ್ರಯೋಜನ ಎಂಬುವುದನ್ನು ಅರ್ಥ ಮಾಡಿಕೊಂಡ ವಸಂತಿಯವರು ತನ್ನ ಪತಿ ಕರುಣಾಕರ ಗೌಡರ ನೆರವಿನಿಂದ ರಸ್ತೆಯ ಬದಿಯಲ್ಲಿ ಪುಟ್ಟದೊಂದು ’ಟರ್ಪಾಲು’ ತಾಣ ಮಾಡಿಕೊಂಡು ಅಲ್ಲಿ ಮಲ್ಲಿಗೆ ಮಾರಾಟ ನಡೆಸಲಾರಂಭಿಸಿದರು.

ತಾನೇ ಬೆಳೆಸಿದ ಮಲ್ಲಿಗೆಯನ್ನು ಚೆಂಡು ಕಟ್ಟಿ ತಾನೇ ವ್ಯಾಪಾರ ಮಾಡುವ ಮೂಲಕ ತನ್ನ ಕುಟುಂಬವನ್ನು ರಕ್ಷಿಸಿಸಲು ಮುಂದಾದ ವಸಂತಿಯವರು ಈ ಸಾಹಸದಲ್ಲಿ ಯಶಸ್ವಿಯಾದರು. ಸೀಸನ್ ಸಂದರ್ಭಗಳಲ್ಲಿ ದಿನವೊಂದಕ್ಕೆ ರು, 3 ಸಾವಿರ ವ್ಯಾಪಾರ ನಡೆಸುವ ಇವರು ತಿಂಗಳಿಗೆ ಕಡಿಮೆ ಎಂದರೂ ೮ರಿಂದ 10 ಸಾವಿರ ಸಂಪಾದನೆ ಮಾಡುತ್ತಾರೆ. ಮಲ್ಲಿಗೆ ವ್ಯಾಪಾರವೇ ಅವರ ಕುಟುಂಬದ ಪ್ರಧಾನ ಆದಾಯ ಮಾತ್ರವಲ್ಲ ಕುಟುಂಬದ ಬಹುತೇಕ ಖರ್ಚುಗಳಿಗೆ ಈ ಮಲ್ಲಿಗೆ ವ್ಯಾಪಾರವೇ ಮೂಲ.

ಇದರೊಂದಿಗೆ ಮನೆಯಲ್ಲಿ ಬೆಳೆಯುವ ಬಸಳೆ, ತೊಂಡೆಕಾಯಿ, ಬೆಂಡೆಕಾಯಿ, ಅಲಸಂಡೆ ಹೀಗೆ ಎಲ್ಲವನ್ನೂ ಮಾರಾಟ ಮಾಡುವುದಕ್ಕೂ ಪ್ರಾರಂಭ ಮಾಡಿದರು. ಅದರಿಂದಲೂ ಒಂದಷ್ಟು ಆದಾಯ ಮನೆ ಸೇರತೊಡಗಿತು. ಮನೆಯ ಬಡತನವೂ ಸ್ವಲ್ಪ ಮಟ್ಟಿಗೆ ದೂರವಾಯಿತು. ಕಾಯಕವೇ ಕೈಲಾಸ ಎಂದರಿತ ಈ ಕುಟುಂಬ ಇದೀಗ ತನ್ನ ಕಾಲ ಮೇಲೆ ನಿಂತು ಇತರರಿಗೂ ಮಾದರಿಯಾಗಿದೆ.

ವಸಂತಿಯವರ ಮನೆಯಲ್ಲಿ ಇದೀಗ ನಗು ತುಂಬಿದೆ, ಮಕ್ಕಳ ಶಾಲಾ ಫೀಸು ಕಟ್ಟಲೂ ಪರದಾಡುತ್ತಿದ್ದ ಕಷ್ಟದ ದಿನಗಳು ಈಗಿಲ್ಲ. ಮಗಳು ಪೂಜಾಶ್ರೀ ಪಾಪೆಮಜಲು ಸರಕಾರಿ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದು, ಉತ್ತಮ ಕ್ರೀಡಾಪಟುವಾಗಿದ್ದಾಳೆ. ರಾಜ್ಯ ಮಟ್ಟದಲ್ಲಿ 600 ಮೀ ಓಟದಲ್ಲಿ ದ್ವಿತೀಯ ಬಹುಮಾನ ಪಡೆದು ಅವಕಾಶ ಹಾಗೂ ಉತ್ತಮ ತರಬೇತಿ ದೊರೆತರೆ ತಾನೊಬ್ಬ ಉತ್ತಮ ಓಟಗಾರ್ತಿಯಾಗುವ ಭರವಸೆಯನ್ನು ಮೂಡಿಸಿದ್ದಾಳೆ. ಮಗ ಮನೀಶ್ ಅದೇ ಶಾಲೆಯಲ್ಲಿ ೬ನೇ ತರಗತಿಯಲ್ಲಿ ಓದುತ್ತಿದ್ದಾನೆ. ಎಂಕ್ಲೆಗ್ ಇತ್ತೆ ಕುಷಿ ಉಂಡು..

ಮಲ್ಲಿಗೆ ಕೃಷಿ ಆರಂಭ ಮಾಡಿದಾಗ ಮಾರಾಟವೇ ಕಷ್ಟದಾಯಕವಾಯಿತು. ಅದಕ್ಕಾಗಿ ಧೈರ್ಯ ಮಾಡಿ ನಾನೇ ಮಾರಾಟ ಮಾಡುವ ಯೋಚನೆ ಮಾಡಿದೆ. ಈಗ ಅದು ಸಂತೋಷದ ಕೆಲಸವಾಗುತ್ತಿದೆ. ನಮ್ಮ ಕಷ್ಟ ಪರಿಹರಿಸಲು ಒಂದು ಮಾರ್ಗವಾಗಿದೆ. ’ಎಂಕ್ಲೆಗ್ ಇತ್ತೆ ಕುಷಿ ಉಂಡು’ ಎನ್ನುತ್ತಾರೆ ಮಲ್ಲಿಗೆ ಕೃಷಿಗಾರ್ತಿ ಹಾಗೂ ಮಾರಾಟಗಾರ್ತಿ ವಸಂತಿ ಆಚಾರಿಮೂಲೆ. ಹಟ ಮತ್ತು ಛಲ ವಸಂತಿ ಕುಟುಂಬಕ್ಕೆ ಈಗ ನೆಮ್ಮದಿಯ ಬದುಕು ಕೊಟ್ಟಿದೆ. ಮಲ್ಲಿಗೆ ಮಾಲೆ ಅವರ ಕೈಹಿಡಿದಿದೆ.

ವರದಿ ; ಅನೀಶ್ ಕುಮಾರ್ ಪುತ್ತೂರು.

Related posts

Leave a Reply