
ಮೂಡುಬಿದಿರೆ ಕಡಲಕೆರೆಯ ನಿಸರ್ಗಧಾಮದಲ್ಲಿ ಫೆ.21ರಂದು ನಡೆಯಲಿರುವ ಕೋಟಿ-ಚೆನ್ನಯ ಜೋಡುಕರೆ ಕಂಬಳವನ್ನು ಒಂದೇ ದಿನ ನಡೆಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸಹಿತ ಜನಪ್ರತಿನಿಧಿಗಳು ಸೇರಿ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸುವುದಾಗಿ ಮೂಡುಬಿದಿರೆ ಕಂಬಳ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಒಂಟಿಕಟ್ಟೆಯ ಸೃಷ್ಠಿ ಗಾರ್ಡನ್ನಲ್ಲಿ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತೀರ್ಮಾನವನ್ನು ಕೈಗೊಳ್ಳಲಾಯಿತು. ನಂತರ ಮಾತನಾಡಿದ ಕೋಟ್ಯಾನ್ ಅವರು ಈಗಾಗಲೇ ಇರುವಂತೆ ಕಂಬಳಗಳಲ್ಲಿ ಎಲ್ಲಾ ಕೋಣಗಳಿಗೂ ಅವಕಾಶವನ್ನು ಕಲ್ಪಿಸೋಣ. ಕಂಬಳದ ರೂಪುರೇಷೆ, ಸಿದ್ಧತೆಗಳ ಕುರಿತು ಅಂತಿಮ ನಿರ್ಧಾರವನ್ನು ಜಿಲ್ಲಾಧಿಕಾರಿಯವರ ಬಳಿ ಚರ್ಚಿಸಿದ ಬಳಿಕ ಪ್ರಕಟಿಸಲಾಗುವುದೆಂದು ತಿಳಿಸಿದರು. ಈ ವೇಳೆ ಮೂಡುಬಿದಿರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಕಂಬಳ ಕೋಣಗಳ ಹಿರಿಯ ಯಜಮಾನ ಭಾಸ್ಕರ್ ಎಸ್.ಕೋಟ್ಯಾನ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯ ನಾಗರಾಜ ಪೂಜಾರಿ, ಜಿ.ಪಂ ಸದಸ್ಯ ಸುಚರಿತ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.