Breaking News

ಕಂಬದಕೋಣೆ ಅಕ್ಕ ಪಕ್ಕದ ಮನೆಯಲ್ಲಿ ಕೋಳಿ ಹೊಕ್ಕ ಜಗಳ, ಪ್ರಕರಣ ದಾಖಲಿಸದ ಪೊಲೀಸರ ವಿರುದ್ಧ ದೂರು


ಪಕ್ಕದ ಮನೆಯಂಗಳಕ್ಕೆ ಕೋಳಿಯೊಂದು ಹೋಯಿತು ಎನ್ನುವ ನೆಪದಲ್ಲಿ ಮನೆಯವರೆಲ್ಲ ಸೇರಿ ಕೋಳಿ ಮಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದರೂ ವಾರವಿಡೀ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬುದಾಗಿ ಹಲ್ಲೆಗೊಳಗಾದ ಮಹಿಳೆ ಆರೋಪಿಸಿದ್ದಾರೆ.
ಕುಂದಾಪುರ ತಾಲೂಕಿನ ಕಂಬದಕೋಣೆಯ ಬ್ಯಾಟರಹಕ್ಲು ಕಲ್ಯಾಣಿ ಮನೆ ನಿವಾಸಿ ಅನಿತಾ ಗಂಭೀರವಾಗಿ ಥಳಿತಕ್ಕೊಳಗಾದ ಮಹಿಳೆ. ಆಕೆಯ ಗಂಡ ಜಗನ್ನಾಥ ಗಾರೆ ಕೆಲಸ ಮಾಡುತ್ತಿದ್ದು, ಮಂಗಳವಾರ ಅರೆಹೊಳೆಗೆ ಕೆಲಸಕ್ಕೆ ಹೋಗಿದ್ದರು. ಸುಮಾರು ಒಂದು ಗಂಟೆಗೆ ಅನಿತಾ ಮನೆಯ ಕೋಳಿಯೊಂದು ಆಕೆಯ ಅಕ್ಕನ ಸುಬ್ಬು ಎಂಬುವರ ಮನೆ ಸಮೀಪ ಹೋಗಿದೆ ಎಂದು ಆರೋಪಿಸಿ ಸುಬ್ಬು, ಆಕೆಯ ಮಕ್ಕಳಾದ ಗಣೇಶ್, ಗಿರಿಜಾ ಹಾಗೂ ಗೌರಿ ಎಂಬುವರು ಆಕೆಯನ್ನು ಎಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅನಂತರ ಗಾಯಗೊಂಡ ಆಕೆ ಬೈಂದೂರು ಸರ್ಕಾರೀ ಆಸ್ಪತ್ರೆಗೆ ಹೋದಾಗ ಅಲ್ಲಿಯ ವೈದ್ಯರು ಚಿಕಿತ್ಸೆಗೆ ನಿರಾಕರಿಸಿದ್ದು, ಕಿರಿಮಂಜೆಶ್ವರಕ್ಕೆ ಹೋಗಿ ಎನ್ನುವ ಸಲಹೆ ನೀಡಿದ್ದರು ಎಂದೂ ಆರೋಪಿಸಲಾಗಿದೆ. ಹಲ್ಲೆಗೊಳಗಾದ ಅನಿತಾ ಮತ್ತು ಆಕೆಯ ಪತಿ ಜಗನ್ನಾಥ ಬಯಿಂದೂರು ಠಾಣೆಗೆ ಹೋಗಿದ್ದು, ಅಲ್ಲಿ ಪೊಲಿಸರು ಅವಾಚ್ಯವಾಗಿ ಬೈದು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಆಮೇಲೆ ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ಬಂದಾಗಲೂ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಳ್ಳಲು ವೈದ್ಯರು ಒಪ್ಪಿರಲಿಲ್ಲ ಎನ್ನಲಾಗಿದೆ. ಆದರೆ ಶನಿವಾರ ನೋವು ಹೆಚ್ಚಾಗಿದ್ದು, ಮತ್ತೆ ಕುಂದಾಪುರ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರಿಗೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ.

Related posts

Leave a Reply