Header Ads
Breaking News

ಕಂಬಳದ ಗದ್ದೆಯಲ್ಲಿ ಮಕ್ಕಳ ಕಲರವ ರೈತಾಪಿ ಮಹಿಳೆಯರ ಓ ಬೇಲೆ ಹಾಡು…

ಬಂಟ್ವಾಳ: ವಿಶಾಲವಾದ ಕಂಬಳ ಗದ್ದೆ… ಗದ್ದೆಯ ತುಂಬೆಲ್ಲಾ ವಿದ್ಯಾರ್ಥಿಗಳ ಕಲರವ… ರೈತಾಪಿ ಮಹಿಳೆಯರ ಓ ಬೇಲೆ ಹಾಡಿನ ಹಿನ್ನಲೆಗೆ ನಾಲ್ಕು ಗಂಟೆಯಲ್ಲಿ ನಾಲ್ಕು ಎಕರೆ ಗದ್ದೆಯಲ್ಲಿ ಸಂಪೂರ್ಣ ನೇಜಿ ನಾಟಿ….ಇದರ ಸಂಪೂರ್ಣ ವರದಿ ಇಲ್ಲಿದೆ.ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕುಪ್ಪೆಪದವು ಸಮೀಪದ ಕೆಲೆಂಜಾರು ನಡಿಕಂಬಳ ಗುತ್ತಿನ ಮನೆಯ ಕಂಬಳ ಗದ್ದೆಯಲ್ಲಿ ನಡೆದ ವಿದ್ಯಾರ್ಥಿ ಕೃಷಿ ಜಾತ್ರೆ ವಿದ್ಯಾರ್ಥಿಗಳಿಗೆ ಮನೋಲ್ಲಾಸ ನೀಡಿತು. ಮೂಡಬಿದಿರೆ ಆಳ್ವಾಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಗಳು ಗದ್ದೆಯಲ್ಲಿ ಕಳೆ ಕೀಳಿ, ಮಣ್ಣು ಹದ ಮಾಡಿ, ನೇಜಿ ಕಿತ್ತು, ನಾಟಿ ಮಾಡಿ ಕೆಸರಲ್ಲಿ ಎದ್ದು ಬಿದ್ದು ಸಂಭ್ರಮಿಸಿದರು. ರೋಟರಿ ಕ್ಲಬ್ ಟೆಂಪಲ್ ಟೌನ್ ಹಾಗೂ ಲಯನ್ಸ್ ಹಾಗೂ ಲಿಯೋ ಕ್ಲಬ್ ಮಂಗಳೂರು ನೇತ್ರಾವತಿ ವಿದ್ಯಾರ್ಥಿ ಗಳ ಕೃಷಿಕಾರ್ಯಕ್ಕೆ ಸಹಕಾರ ನೀಡಿ ಬೆನ್ನು ತಟ್ಟಿದರು. ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿಯನ್ನು ಮೂಡಿಸಬೇಕು, ಭವಿಷ್ಯದ ಕೃಷಿಕರನ್ನು ಕಾಲೇಜು ಹಂತದಲ್ಲೇ ತಯಾರು ಮಾಡಬೇಕು, ಅವಸಾನದ ಅಂಚಿನತ್ತ ಸಾಗುತ್ತಿರುವ ತುಳುನಾಡಿನ ಭತ್ತದ ಕೃಷಿಯನ್ನು ಮತ್ತೆ ಉಳಿಸಿ ಬೆಳೆಸಬೇಕು ಎನ್ನುವ ದೂರದೃಷ್ಟಿ ಇಟ್ಟುಕೊಂಡು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿಯವರು ತನ್ನ ಮನೆಯ ಕಂಬಳ ಗದ್ದೆಯನ್ನು ಕೃಷಿ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ ಪಾಠವನ್ನು ಭೋದಿಸುವ ಪರಂಪರೆಯನ್ನು ಕಳೆದ ವರ್ಷದಿಂದ ಆರಂಭಿಸಿದ್ದರು. ಕಳೆದ ವರ್ಷವೂ ಇದೇ ಕಂಬಳ ಗದ್ದೆಯಲ್ಲಿ ಮೂಡಬಿದಿರೆಯ ಕಾಲೇಜೊಂದರ ವಿದ್ಯಾರ್ಥಿಗಳು ನೇಜಿ ನಾಟಿ ಮಾಡಿದ್ದರು. ಈ ಬಾರಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸರದಿ. ಬೇರೆ ಬೇರೆ ಕಡೆಗಳಲ್ಲಿ ಕೃಷಿ ಕಾರ್ಯ ಮಾಡಿ ಅನುಭವ ಪಡೆದಿದ್ದ ಇಲ್ಲಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಬೆವರು ಹರಿಸಿ ದುಡಿದು ಅನ್ನದಾತನ ಕಾಯಕಕ್ಕೆ ನೆರವಾದರು. ಕೆಲ ವಿದ್ಯಾರ್ಥಿಗಳು ನೇಜಿ ಕಿತ್ತರೆ, ಇನ್ನು ಕೆಲವರು ಒಂದು ಗದ್ದೆಯಿಂದ ಮತ್ತೊಂದು ಗದ್ದೆಗೆ ಸಾಗಿಸಿದರು. ಹುಡುಗರು ಗದ್ದೆಯ ಕಳೆಯನ್ನು ಸ್ವಚ್ಛಗೊಳಿಸಿದರು, ಹುಡುಗಿಯರು ನೇಜಿ ನಾಟಿ ಮಾಡಿದರು. ಕಾಲೇಜಿನ ನಾಲ್ಕು ಗೋಡೆಯ ಮಧ್ಯೆ ನಿತ್ಯ ಪಾಠ ಕೇಳುತ್ತಿದ್ದ ವಿದ್ಯಾರ್ಥಿಳಿಗೆ ನಡಿಕಂಬಳ ಗುತ್ತುವಿನ ಕಂಬಳ ಗದ್ದೆ ಕೃಷಿ ಕಲಿಕೆಗೆ ತರಗತಿ ಕೋಣೆಯಾಯಿತು. ಒಂದೇ ಸರತಿಯಲ್ಲಿ ನೇಜಿ ನಾಟಿ ಮಾಡುತ್ತ ನಾವೆಲ್ಲರೂ ಜತೆಯಾಗಿ ಸಾಗಬೇಕು, ಹಿಂದೆ ಉಳಿದವನನ್ನು ಜೊತೆಗೆ ಕರೆದೊಯ್ಯಬೇಕು ಎನ್ನುವ ಸಂಘ ಜೀವನದ ಕುರಿತು ರೈತ ಸಂಘದ ಧನಕೀರ್ತಿ ಬಲಿಪ ಪಾಠ ಮಾಡಿದರು. ಪದಾಧಿಕಾರಿಗಳಾದ ಮನೋಹರ ಶೆಟ್ಟಿ, ಎನ್.ಕೆ ಇದಿನಬ್ಬ, ಸುಬ್ರಹ್ಮಣ್ಯ ಭಟ್, ಸುದೇಶ ಮಯ್ಯ, ದಯಾನಂದ ಶೆಟ್ಟಿ, ದಯಾನಂದ ರೈ, ರೋನಾಲ್ಡ್ ಅಮ್ಮುಂಜೆ, ಶೇಕ್ ಅಬ್ದುಲ್ಲಾ, ಕೆವಿಕೆ ವಿಜ್ಞಾನಿ ಹರೀಶ್ ಶೆಣೈ ಗದ್ದೆಯಲ್ಲಿ ನಿಂತು ನೇಜಿ ನಾಟಿ ಮಾಡುವ ವಿಧಾನದ ಬಗ್ಗೆ ಮಾರ್ಗದರ್ಶನ ಮಾಡಿದರು. ಸ್ಥಳೀಯ ರೈತಾಪಿ ಮಹಿಳೆಯರು ವಿದ್ಯಾರ್ಥಿಗಳನ್ನು ಕೃಷಿಕಾರ್ಯದಲ್ಲಿ ತರಬೇತುಗೊಳಿಸಿದರು.ರೈತ ಮಹಿಳೆಯರು ಸಾಂಪ್ರದಾಯಿಕ ಓ ಬೇಲೆ ಹಾಡು ಹಾಡಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಉತ್ಸಾಹ ತುಂಬಿದರು. ೮೦ ವರ್ಷದ ಹಿರಿಯ ಮಹಿಳೆ ಗಿರಿಜಾ ಶೆಟ್ಟಿ ರಾವು… ರಾವು ಕೊರುಂಗು ಎಂದು ಸಂಧಿ ಹಾಡುತ್ತಿದ್ದರೆ ವಿದ್ಯಾರ್ಥಿಗಳೆಲ್ಲಾ ಧನಿಗೂಡಿಸಿದರು. ಒರ ಬಲೇ ಸ್ವಾಮೀ ಮಲ್ಲಿಗೆ ಮಿತ್ತ್ ವರ ಬಲೆ ಎನ್ನುವ ಜಾನಪದ ಹಾಡು ಕಂಬಳ ಗದ್ದೆಯಲ್ಲಿ ಅನುರಣಿಸಿ ನೇಜಿ ಕೀಳುತ್ತಿದ್ದ ವಿದ್ಯಾರ್ಥಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತು.

Related posts

Leave a Reply