Header Ads
Header Ads
Breaking News

ಕಟಪಾಡಿ ಅಚ್ಚಡದಲ್ಲಿ ಅಪರಿಚಿತ ವ್ಯಕ್ತಿಯ ಕಡಿದು ಕೊಲೆ

ಕಟಪಾಡಿಯ ಅಚ್ಚಡ ಎಂಬಲ್ಲಿನ ಖಾಸಗಿ ಸ್ಥಳವೊಂದರಲ್ಲಿ ಅಪರಿಚಿತ ವ್ಯಕ್ತಿಯೋರ್ವರನ್ನು ಹಾರೆಯಿಂದ ಕಡಿದು ಕೊಲೆ ಮಾಡಲಾಗಿದ್ದು, ಈ ಕೃತ್ಯ ಕಳೆದ ರಾತ್ರಿಯೇ ನಡೆದಿರ ಬಹುದೆಂಬ ಶಂಕೆ ಪೊಲೀಸರು ವ್ಯಕ್ತ ಪಡಿಸಿದ್ದಾರೆ.


ಕಟಪಾಡಿಯ ನಯನ ಸಂಸ್ಥೆಯ ಪ್ರಕಾಶ್ ಎಂಬವರಿಗೆ ಸೇರಿದ ಸ್ಥಳ ಅಚ್ಚಡ ಎಂಬಲ್ಲಿ ಈ ಕೃತ್ಯ ನಡೆದಿತ್ತು. ಸುತ್ತಲೂ ಮನೆಯಿರುವ ಈ ಸ್ಥಳಕ್ಕೆ ಆವರಣ ಗೋಡೆಯ ರಕ್ಷೆ ಇದೆ. ಈ ಜಾಗದಲ್ಲಿ ಬಾಯಿಯೊಂದಿದ್ದು ಅದಕ್ಕೆ ಕಟ್ಟೆ ನಿರ್ಮಾಣ ಕಾರ್ಯ ಕೆಲವು ದಿನಗಳಿಂದ ನಡೆಯುತ್ತಿತ್ತು. ನಿನ್ನೆ ಕೂಡಾ ಈ ಕಟ್ಟೆಯ ಕಾರ್ಯ ನಡೆಸಿದ ಮೇಸ್ತ್ರಿ ಸಲಕರಣೆಗಳನ್ನು ತೊಳೆದು ಪಕ್ಕದಲ್ಲೇ ಇರಿಸಿ ಮರಳಿದ್ದರು. ಇಂದು ಬೆಳಿಗ್ಗೆ ಸಿಮೆಂಟು ಗಾರೆಗೆ ನೀರು ಚುಮ್ಮಿಸಲು ಬಂದ ವ್ಯಕ್ತಿಗೆ ಮರಳು ರಾಶಿಯ ಮೇಲೆ ಕೊಲೆಯಾಗಿ ಬಿದ್ದ ವ್ಯಕ್ತಿಯ ಕಳೆಬರ ಕಂಡಿದೆ. ತಕ್ಷಣ ಸ್ಥಳೀಯರ ಮೂಲಕ ಪೊಲೀಸರಿಗೆ ಸುದ್ಧಿ ಮುಟ್ಟಿಸಲಾಗಿದ್ದು ಸ್ಥಳಕ್ಕೆ ಬಂದ ಕಾಪು ಪೊಲೀಸರು ಪರೀಶೀಲನೆ ನಡೆಸಿದ ಬಳಿಕ, ಶ್ವಾನದಳವನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ.
ಕೊಲೆ ನಡೆಸಿದ ಫಾತಕಿಗಳಲ್ಲಿ ಯಾವುದೇ ವಾಹನವಿಲ್ಲದ ಕಾರಣ ನಡೆದೆ ಬಸ್ ತಂಗುದಾಣ ಸೇರಿ ಬಂದ ವಾಹನದಲ್ಲಿ ಪರಾರಿಯಾಗಿರ ಬಹುದೆಂಬ ಸಂಶಯ ವ್ಯಕ್ತವಾಗಿದೆ. ಸ್ಥಳೀಯರು ಈ ಶವವನ್ನು ಗುರುತು ಹಿಡಿಯಲು ವಿಫಲವಾಗಿದ್ದರಾದರೂ, ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೋರ್ವರು ಈ ವ್ಯಕ್ತಿ ಕಟಪಾಡಿ ಸರ್ಕಾರಿ ಗುಡ್ಡೆಯ ನಿವಾಸಿಯಾಗಿರ ಬಹುದೆಂಬ ಶಂಕೆ ವ್ಯಕ್ತ ಪಡಿಸಿದ್ದರಾದರೂ ದೃಢಪಟ್ಟಿಲ್ಲ. ಕೊಲೆಯಾದ ಸ್ಥಳದಲ್ಲಿ ಹತ್ಯೆಗೆ ಬಳಸಲಾದ ಹಾರೆ ಹಾಗೂ ಮೊಸರಿನ ಪ್ಯಾಕೇಟ್ ಪತ್ತೆಯಾಗಿದೆ. ಮೊಸರಿನ ಪ್ಯಾಕೇಟ್ ಗಮನಿಸಿದರೆ ಈ ಕೊಲೆ ನಿನ್ನೆ ರಾತ್ರಿಯೇ ನಡೆದಿರ ಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಪೊಲೀಸರು ಸಾಗಿಸಲಾಗಿದ್ದು ಸ್ಥಳಕ್ಕೆ ಕಾರ್ಕಳ ಎಎಸ್ಪಿ ಹೃಷಿಕೇಶ್, ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಹಾಲಮೂರ್ತಿ ರಾವ್, ಕಾಪು ಎಸೈ ನಿತ್ಯಾನಂದ ಗೌಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವರದಿ-ಸುರೇಶ್ ಎರ್ಮಾಳ್

Related posts

Leave a Reply