
ಕುರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಕಟ್ಟೆಮಾರು ಕಿನ್ನಾಜೆ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮ ನಡೆಯಿತು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದದ ರಸ್ತೆಗೆ ಕಾಂಕ್ರಿಟಿಕರಣ ಮಾಡಬೇಕೆಂದು ದೂರು ಮನವಿಗಳನ್ನು ಸ್ಥಳೀಯರು ಸಲ್ಲಿಸುತ್ತಾ ಬಂದಿದ್ದರು. ಇದೀಗ ರಸ್ತೆಗೆ ಕಾಂಕ್ರಿಟಿಕರಣ ಮಾಡಲು ಶಿಲಾನ್ಯಾಸ ನೆರವೇರಿಸಲಾಯಿತು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಅವರು ಹಲವು ವರ್ಷಗಳಿಂದ ಕಟ್ಟೆಮಾರು ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಥಳೀಯರ ಬೆಂಬಲದಿಂದ ರಸ್ತೆ ಕಾಮಗಾರಿ ಸಾಧ್ಯವಾಗಿದೆ. ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾದಲ್ಲಿ ತನ್ನ ವೈಯಕ್ತಿಕ ಜಾಗವನ್ನು ಬಿಟ್ಟುಕೊಡುವುದಾಗಿ ತಿಳಿಸಿದರು.ಬಿಜೆಪಿ ಕುರ್ನಾಡು ಶಕ್ತಿಕೇಂದ್ರದ ಅಧ್ಯಕ್ಷ ಟಿ.ಜಿ ರಾಜಾರಾಂ ಭಟ್ ಮಾತನಾಡಿ ಗ್ರಾ.ಪಂ ಜನರ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾದಲ್ಲಿ ಮಾತ್ರ ಗಾಂಧಿಯ ರಾಮರಾಜ್ಯದ ಕನಸು ನನಸಾಗುವುದು. ಇದಕ್ಕೆ ಕುರ್ನಾಡು ಗ್ರಾ.ಪಂ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭ ರಸ್ತೆ ಅಭಿವೃದ್ಧಿಗೆ ಶ್ರಮಿಸಿದ ಸಂತೋಷ್ ಬೋಳಿಯಾರ್ ಅವರನ್ನು ಸನ್ಮಾನಿಸಲಾಯಿತು. ಸ್ಥಳದಲ್ಲಿ ತಾ.ಪಂ ಸದಸ್ಯ ನವೀನ್ ಪಾದಲ್ಪಾಡಿ, ಕುರ್ನಾಡು ಗ್ರಾ.ಪಂ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಉಪಾಧ್ಯಕ್ಷ ನಿತಿನ್ ಗಟ್ಟಿ, ಪಂ.ಸದಸ್ಯರಾದ ಶಿವಶಂಕರ್ ಭಟ್, ಗೋಪಾಲ್ ಉಪಸ್ಥಿತರಿದ್ದರು.