Header Ads
Header Ads
Breaking News

ಕನ್ನಡ ಗಣಿತಕ್ಕೆ ಮಲಯಾಳ ಶಿಕ್ಷಕನ ನೇಮಕ,ಕನ್ನಡ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ.

ಮಂಜೇಶ್ವರ: ಮಂಗಲ್ಪಾಡಿ ಸರಕಾರಿ ಹೈಸ್ಕೂಲು(ಕುಕ್ಕಾರು) ಕನ್ನಡ ಗಣಿತ ಶಿಕ್ಷಕರ ಹುದ್ದೆಗೆ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿ ಮಲೆಯಾಳ ಶಿಕ್ಷಕರನ್ನು ನೇಮಿಸಿರುವುದನ್ನು ವಿರೋಧಿಸಿ ಸೋಮವಾರ ಶಾಲೆಯಲ್ಲಿ ಕನ್ನಡ ವಿದ್ಯಾರ್ಥಿಗಳು ತರಗತಿ ಬಹಿಷ್ಕಾರ ನಡೆಸಿ ಪ್ರತಿಭಟನೆ ನಡೆಸಿದರು.ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನ ಗಣಿತ ಶಿಕ್ಷಕರಾಗಿ ಕಳೆದ ಸೋಮವಾರ ಮಲೆಯಾಳಿ ಶಿಕ್ಷಕನೊಬ್ಬನನ್ನು ಇಲಾಖೆ ನೇಮಿಸಿತ್ತು.  

ಆದರೆ ಭಾಷಾ ಅಲ್ಪಸಂಖ್ಯಾತ ಗಡಿನಾಡ ಕನ್ನಡಿಗರ ಸಾಂವಿಧಾನಿಕ ಹಕ್ಕುಗಳಲ್ಲೊಂದಾದ ಕನ್ನಡ ಶಾಲೆಗಳ ಯಾವುದೇ ಪಠ್ಯ ಬೋಧನೆಗೆ(ಭಾಷೆ ಹೊರತುಪಡಿಸಿ) ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಿಸಬೇಕೆಂಬ ಆದೇಶವನ್ನು ಸಂಪೂರ್ಣ ಗಾಳಿಗೆ ತೂರಿ ಈ ನೇಮಕಾತಿ ಮಾಡಲಾಗಿತ್ತು. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಕನ್ನಡಿಗರ ಹಕ್ಕನ್ನು ಕಸಿಯಲಾಗಿದೆ ಎಂಬ ಕಾರಣಗಳಿಂದ ಶಾಲಾ ರಕ್ಷಕ ಶಿಕ್ಷಕ ಸಮಿತಿಯು ಕನ್ನಡ ಹೋರಾಟ ಸಮಿತಿಯ ಸಹಕಾರದೊಂದಿಗೆ ಸೋಮವಾರ ತರಗತಿ ಬಹಿಷ್ಕಾರ ಚಳವಳಿ ನಡೆಸಿತು.ತರಗತಿ ಬಹಿಷ್ಕಾರ ಮತ್ತು ಪ್ರತಿಭಟನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಅಂಬಾರು ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಯಾವ ಕಾರಣಕ್ಕೂ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಗೆ ಅವಕಾಶ ನೀಡಲಾಗದು. ಆ ಮೂಲಕ ಮಲೆಯಾಳ ಹೇರಿಕೆಯ ಯತ್ನ ಖಂಡನಾರ್ಹವಾಗಿದೆ ಎಂದು ತಿಳಿಸಿದರು. ಗಣಿತದಂತಹ ಸವಾಲಿನ ಪಠ್ಯಗಳನ್ನು ಮಾತೃಭಾಷೆಯಲ್ಲೇ ಕಲಿಸುವುದು ಸೂಕ್ತವಾಗಿದ್ದು, ಅರ್ಥವಾಗದ ಭಾಷಾ ಶಿಕ್ಷಕನನ್ನು ನೇಮಕಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದರು.ಬಳಿಕ ರಕ್ಷಕ ಶಿಕ್ಷಕ ಸಮಿತಿ ಸಮಾಲೋಚನೆ ನಡೆಸಿ ಮಂಗಳವಾರ ಸಂಜೆಯ ಮೊದಲು ನೇಮಕಾತಿ ನೀಡಲಾದ ಮಲೆಯಾಳ ಶಿಕ್ಷಕನ ಬದಲಿಗೆ ಕನ್ನಡ ಶಿಕ್ಷಕರ ನೇಮಕಾತಿಗಾಗಿ ತರಗತಿ ಬಹಿಷ್ಕಾರದಿಂದ ಹಿಂದೆ ಸರಿದಿರುವುದಾಗಿ ಪ್ರಕಟಿಸಿದರು. ಬುಧವಾರ ಬೆಳಿಗ್ಗೆ ಕನ್ನಡ ಶಿಕ್ಷಕರನ್ನು ನೇಮಿಸದಿದ್ದಲ್ಲಿ ಬೇಡಿಕೆ ಈಡೇರುವವ ವರೆಗೆ ನಿರಂತರ ಬಹಿಷ್ಕಾರ ನಡೆಸಲು ಈ ಸಂದರ್ಭ ತೀರ್ಮಾನಿಸಿರುವುದಾಗಿ ಪ್ರಕಟಿಸಿದರು.

Related posts

Leave a Reply