Breaking News

ಕನ್ನಡ ಚಿತ್ರರಂಗದ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಅಮ್ಮ ಎಂದೆ ಗುರುತಿಸಲ್ಪಡುತ್ತಿದ್ದ ದಿವಂಗತ ಡಾ. ರಾಜ್‌ಕುಮಾರ್‌ರವರ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಇಂದು ಮುಂಜಾನೆ ೪:೩೦ರ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ. ಇವರಿಗೆ ೭೭ ವರ್ಷ ವಯಸ್ಸಾಗಿತ್ತು. ಇವರು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕಳೆದ ೧೬ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ೧೬ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದಾಗಲೇ ಅವರ ಸ್ಥಿತಿ ಅದೆಷ್ಟು ಗಂಭೀರವಾಗಿದೆ ಎಂಬ ಬಗ್ಗೆ ಖುದ್ದು ರಾಘವೇಂದ್ರ ರಾಜ್‌ಕುಮಾರ್ ಪ್ರಕಟನೆಯ ಮೂಲಕ ರಾಜ್ಯದ ಜನತೆಗೆ ತಿಳಿಸಿದ್ದರು. ಇದರ ಬಳಿಕ ಆಸ್ಪತ್ರೆಯ ತಜ್ಞ ವೈದ್ಯರ ತಂಡ ನಿರಂತರ ಚಿಕಿತ್ಸೆ ನೀಡುತ್ತ ಬಂದಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಪಾರ್ವತಮ್ಮ ರಾಜ್‌ಕುಮಾರ್ ಕೊನೆಯುಸಿರೆಳದಿದ್ದಾರೆ.
ಕಳೆದ ೧೬ ದಿನಗಳಿಂದ ಅವರ ಮೂವರು ಮಕ್ಕಳಾದ ರಾಘವೇಂದ್ರ, ಶಿವರಾಜ್ ಮತ್ತು ಪುನೀತ್ ರಾಜ್‌ಕುಮಾರ್ ಸೇರಿದಂತೆ ಅವರ ಮನೆಯವರೆಲ್ಲ ಆಸ್ಪತ್ರೆಯಲ್ಲಿಯೇ ಬೀಡು ಬಿಟ್ಟಿದ್ದರು. ಮೃತದೇಹವನ್ನು ಬೆಳಗಿನ ಆರು ಗಂಟೆಯ ಸುಮಾರಿಗೆ ಸದಾಶಿವ ನಗರದ ಅವರ ಸ್ವಂತ ನಿವಾಸಕ್ಕೆ ಸಾಗಿಸಲಾಗಿದೆ. ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪೂರ್ಣಪ್ರಜ್ಞಾ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ ಎಂದು ಹೇಳಲಾಗಿದೆ.
ತಮ್ಮ ೧೩ನೆ ವಯಸ್ಸಿನಲ್ಲಿ ೧೯೫೩ರಲ್ಲಿ ರಾಜ್‌ಕುಮಾರ್‌ರನ್ನು ಮದುವೆಯಾಗಿದ್ದರು. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಕ್ತ ಸಂಬಂಧಿಗಳಾಗಿದ್ದು, ಅವರ ವಿವಾಹವನ್ನು ಬಾಲ್ಯದಲ್ಲಿಯೇ ನಿರ್ಧರಿಸಲಾಗಿತ್ತು. ಪಾರ್ವತಮ್ಮ ರಾಜ್‌ಕುಮಾರ್ ಪೂರ್ಣಿಮಾ ಎಂಟರ್‌ಪ್ರೈಸಸ್ ಎಂಬ ಸಂಸ್ಥೆ ಹುಟ್ಟು ಹಾಕಿ ೮೦ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿರುವ ಪಾರ್ವತಮ್ಮ ಸಾಕಷ್ಟು ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ. ಸುಧಾರಾಣಿ, ರಮ್ಯ, ಮಾಲಾಶ್ರೀ, ರಕ್ಷಿತಾ ಸಹಿತ ಹಲವರು ಇವರ ಗರಡಿಯಿಂದಲೇ ಹೊರ ಬಂದಿದ್ದರು.
ಕನ್ನಡ ಚಿತ್ರ ರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ ಅದನ್ನು ಪರಿಹರಿಸುವ ನಿಟ್ಟನಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಕಳೆದ ಒಂದು ತಿಂಗಳಿಂದಲೇ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಪಾರ್ವತಮ್ಮರಿಗೆ ಮೂವರು ಸಹೋದರರು. ಓರ್ವ ಸಹೋದರನಿಗೆ ತಮ್ಮ ಮಗಳನ್ನೇ ಕೊಟ್ಟು ಮದುವೆ ಮಾಡಿಸಿದ್ದಾರೆ.
ರಾಮ್‌ಕುಮಾರ್ ಇವರ ಇನ್ನೋರ್ವ ಅಳಿಯನಾಗಿದ್ದಾನೆ.

Related posts

Leave a Reply