Breaking News

ಕನ್ಯಾನದ ಮುಗುಳಿಯಲ್ಲಿ ಹಸು ಹೆಸರಿನಲ್ಲಿ ಗೂಂಡಾಗಿರಿ, ದನಕ್ಕೆ ಬಡಿದಂತೆ ಹೊಡೆದಾಡಿದ ಇತ್ತಂಡಗಳು

ಕರ್ನಾಟಕ ಕೇರಳ ಗಡಿ ಭಾಗವಾದ ಮುಗುಳಿ ಎಂಬಲ್ಲಿ ಯುವಕನೊಬ್ಬನ ಮೇಲೆ ತಂಡಯೊಂದು ಹಲ್ಲೆ ನಡೆಸಿದ ವಿಚಾರದಲ್ಲಿ ಕನ್ಯಾನದಲ್ಲಿ ಅಂಗಡಿಗಳ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕನ್ಯಾನ ಗ್ರಾಮದ ನೆಕ್ಲಾಜೆ ನಿವಾಸಿ ಮಹಮ್ಮದ್ ಹನೀಫ್ ಹಲ್ಲೆಗೊಳಗಾದ ಯುವಕನಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹನೀಫ್ ಅವರು ವಿಟ್ಲ ಪೇಟೆಯಿಂದ ಖಾಸಗಿ ಬಸ್ಸಿನಲ್ಲಿ ತನ್ನ ಮನೆಗೆಂದು ತೆರಳುವ ಹಿನ್ನೆಲೆಯಲ್ಲಿ ಕೇರಳ ಗಡಿ ಭಾಗವಾದ ಮುಗುಳಿ ಎಂಬಲ್ಲಿ ಇಳಿದಿದ್ದೆನ್ನಲಾಗಿದೆ. ಹನೀಫ್ ಮುಗುಳಿ ಬಸ್ ನಿಲ್ದಾಣದಲ್ಲಿ ಕುಳಿತು ಗೋವುಗಳ ವ್ಯಾಪಾರ ಕುದುರಿಸುತ್ತಿದ್ದಾನೆ ಎಂಬ ಆರೋಪದ ಮೇರೆಗೆ ಕನ್ಯಾನ ಗ್ರಾಮದ ಮರ್ತನಾಡಿ ನಿವಾಸಿ ದಿನೇಶ್ ಹಾಗೂ ತಂಡ ಅಲ್ಲಿ ಆಗಮಿಸಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಹನೀಫ್ ಸ್ಥಳದಿಂದ ಓಡಿಹೋಗಿ ಮುಗುಳಿ ಎಂಬಲ್ಲಿರುವ ಮನೆಯೊಂದನ್ನು ಸೇರಿದ್ದಾನೆ. ದಾಳಿ ನಡೆಸಿದ ದಿನೇಶ್ ಸ್ಥಳದಿಂದ ತೆರಳಿದ್ದು, ಜತೆಗಿದ್ದ ತಂಡದವರು ಅಲ್ಲೇ ಉಳಿದಿದ್ದರೆನ್ನಲಾಗಿದೆ. ಹಲ್ಲೆ ನಡೆಸಿದ ವಿಚಾರ ತಿಳಿದ ತಂಡವೊಂದರ ಹತ್ತಕ್ಕೂ ಅಧಿಕ ಮಂದಿ ಬಂದು ಬೈಕ್‌ನಲ್ಲಿ ಕುಳಿತಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಹಲವರಿಗೆ ಗಾಯವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಗಂಭೀರ ಗಾಯಗೊಂಡ ಹನೀಫ್ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ವಿಷಯ ಕನ್ಯಾನದಾದ್ಯಂತ ಹರಡಿದ್ದು, ಕೆಲವು ಉದ್ರಿಕ್ತರ ಗುಂಪು ಕನ್ಯಾನ ಪೇಟೆಯ ಕೆಲವು ಅಂಗಡಿ, ಆಟೋರಿಕ್ಷಾ, ಕಾರು ಹಾಗೂ ಬಸ್‌ಗಳ ಮೇಲೆ ಸೋಡ ಬಾಟಲಿ ಹಾಗೂ ಕಲ್ಲು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲ್ಲು ಎಸೆಯುವ ದೃಶ್ಯ ಯಾರಿಗೂ ಕಾಣಬಾರದೆಂಬ ದುರುದ್ದೇಶದಿಂದ ಕನ್ಯಾನ ಜಂಕ್ಷನ್‌ನಲ್ಲಿರುವ ಹೈಮಾಸ್ಕ್ ದೀಪವನ್ನು ದುಷ್ಕರ್ಮಿಗಳ ತಂಡ ಹಾನಿ ಮಾಡಿ ಕಿತ್ತು ಹಾಕಿದ್ದರೆನ್ನಲಾಗಿದೆ. ಸುಮಾರು ೧೫೦ಕ್ಕಿಂತಲೂ ಅಧಿಕ ಸೋಡ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇನ್ನೂ ಕೆಲವು ಮಂದಿ ಕನ್ಯಾನ ಪೇಟೆಯಲ್ಲಿ ತಲವಾರ್ ಝಳಪಿಸುತ್ತಾ ಓಡಾಡುತ್ತಿದ್ದರು ಎಂದು ಪ್ರತ್ಯಕ್ಷಿದರ್ಶಿಗಳು ತಿಳಿಸಿದ್ದಾರೆ.
ಘಟನೆ ತಾರಕಕ್ಕೆ ಏರುತ್ತಿದ್ದಂತೆ ಪೇಟೆಯ ಎಲ್ಲಾ ಅಂಗಡಿಗಳ ಬಾಗಿಲು ಹಾಕಿ ಬಂದ್ ಮಾಡಲಾಗಿದೆ. ಇನ್ನೂ ಕೆಲವು ಮಂದಿ ರಸ್ತೆಯಲ್ಲಿ ರಾಡ್ ಹಾಗೂ ತಲವಾರ್ ಹಿಡಿದುಕೊಂಡು ಹಲ್ಲೆಕೋರರಿಗೆ ಹುಡುಕಾಟ ನಡೆಸಿದ್ದರು ಎಂದು ಪ್ರತ್ಯಕ್ಷಿದರ್ಶಿಗಳು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ವಿಟ್ಲ ಎಸೈ ನಾಗರಾಜ್ ಮತ್ತು ಅವರ ತಂಡ ಧಾವಿಸಿ ಯಾವುದೇ ಅಹಿಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿದ್ದಾರೆ. ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿಆರ್ ನೇತೃತ್ವದಲ್ಲಿ ಹೆಚ್ಚುವರಿ ಭದ್ರತೆಯನ್ನು ಕೈಗೊಂಡಿದ್ದು, ಮುಗುಳಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳಿಂದ ಪೊಲೀಸರು ಮಾಹಿತಿ ಕಲೆ ಹಾಕಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

Related posts

Leave a Reply