Header Ads
Header Ads
Breaking News

ಕರಾವಳಿಯಲ್ಲಿ ಭತ್ತದ ಕೃಷಿಕನ ಉತ್ಸಾಹ ಇಮ್ಮಡಿ

ಪುತ್ತೂರು; ಗದ್ದೆಗಳು ಹದವಾಗಿವೆ. ಚಾಪೆ ನೇಜಿಯೂ ಸಿದ್ಧವಾಗಿದೆ. ಇನ್ನು ತಡ ಇಲ್ಲ. ನೇಜಿ ನಾಟಿ ಮಾಡಲು ಬನ್ನಿ…ಹಳ್ಳಿಯ ಭತ್ತ ಬೆಳೆಯುವ ಕೃಷಿಕರ ಬಾಯಲ್ಲಿ ಪ್ರಸ್ತುತ ಕೇಳಿ ಬರುವ ಮಾತು. ಮುಂಗಾರು ಮಳೆ ಈ ಬಾರಿ ಪ್ರಾರಂಭದಿಂದಲೇ ಅಬ್ಬರ ಸೃಷ್ಟಿಸಿರುವುದರಿಂದ ಭತ್ತದ ಕೃಷಿಕನ ಉತ್ಸಾಹ ಇಮ್ಮಡಿಯಾಗಿದೆ. ನೇಜಿ ನಾಟಿ ಮಾಡುವುದಷ್ಟೇ ಅವನ ಮುಂದಿರುವ ಉದ್ದೇಶ. ಈಗ ಎಲ್ಲವೂ ಯಾಂತ್ರೀಕೃತ ಬೇಸಾಯವಾಗಿರುವ ಹಿನ್ನಲೆಯಲ್ಲಿ ಕೆಲಸವೂ ಚುರುಕು. ಹಾಗಾಗಿ ನೇಜಿ ನಾಟಿಗೆ ಕೃಷಿಕರು ಸಿದ್ಧವಾಗಿ ನಿಂತಿದ್ದಾರೆ.ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ಹಾಗೇ ಗದ್ದೆಯಲ್ಲಿ ’ನೇಜಿ’ ತಯಾರು ಮಾಡದ ರೈತ ವರ್ಗ ಒಂದೆರಡು ಮಳೆ ಬಿದ್ದಾಗಲೇ ಮನೆಯ ಅಂಗಳದಲ್ಲಿ ಚಾಪೆ ನೇಜಿ ಹಾಕುತ್ತಾರೆ. ಮಣ್ಣು ಗೊಬ್ಬರ ಹೊಗೆ ಸೇರಿಸಿ ತಯಾರಿಸಿದ ’ಸೂಂಟಾನ್’ ನ್ನು ಚಾಪೆ ಅಳತೆಯ ಮಾದರಿಯಲ್ಲಿ ಹಾಕಿ ಅದರ ಮೇಲೆ ಮೊಳಕೆಯೊಡೆದ ಭತ್ತದ ಬೀಜಗಳನ್ನು ಹಾಕಿ ಅದರ ಮೇಲೆ ತೆಳುವಾಗಿ ಸೂಂಟಾನ್ ಚೆಲ್ಲಿ ಬಿಟ್ಟರೆ ಸಾಕು ಚಾಪೆ ನೇಜಿ ರೆಡಿ. ಇದಕ್ಕಾಗಿ ಭತ್ತವನ್ನು ಮೊಳಕೆ ಬರಿಸಲು ಹಳೆ ಸಂಪ್ರದಾಯವನ್ನೇ ಕೃಷಿಕರು ಈಗಲೂ ಬಳಸುತ್ತಿದ್ದಾರೆ. ತಮಗೆ ಬೇಕಾದಷ್ಟು ಭತ್ತ ಬೀಜವನ್ನು ಗೋಣಿ ಚೀಲದಲ್ಲಿ ಹಾಕಿ ಒಂದು ದಿನ ನೀರಲ್ಲಿ ಹಾಕಿ ನೆನೆಸುತ್ತಾರೆ. ಮರುದಿನ ಅದನ್ನು ತೆಗೆದು ಅದರ ನೀರಿನ ಪಸೆ ಆರುವವರೆಗೆ ಬೆಚ್ಚನೆ ಜಾಗದಲ್ಲಿ ಇರಿಸಿ ನಂತರ ಸೆಗಣಿನೀರಿನ ಮಿಶ್ರಣದೊಂದಿಗೆ ಭತ್ತದ ಬೀಜವನ್ನು ಮತ್ತೆ ನೆನೆಸಲಾಗುತ್ತದೆ, ಹಾಗೆ ಮಾಡಿದ ನಂತರ ಭತ್ತವನ್ನು ಗೋಣಿ ಅಥವಾ ಬೆತ್ತದಿಂದ ತಯಾರಿಸಿದ ಅಗಲವಾದ ’ಬುಟ್ಟಿ’ಗಳಲ್ಲಿ ತುಂಬಿಸಿ ಅದರ ಮೇಲೆ ಒಂದೆರಡು ಗೋಣಿ ಹಾಕಿ ಮುಚ್ಚಲಾಗುತ್ತದೆ, ಇದರ ಮೇಲೆ ದಪ್ಪವಾದ ಕಲ್ಲು ಅಥವಾ ಭಾರವಾದ ವಸ್ತುಗಳನ್ನು ಇಟ್ಟು ಭತ್ತ ಸ್ವಲ್ಪ ಮಟ್ಟಿಗೆ ಬಿಸಿಗೊಳ್ಳುವಂತೆ ಮಾಡಲಾಗುತ್ತದೆ.

ಎರಡು ಮೂರುದಿನಗಳಲ್ಲಿ ಭತ್ತದ ಬೀಜ ಮೊಳಕೆಯೊಡೆಯುತ್ತವೆ. ಇದರಿಂದ ಚಾಪೆ ನೇಜಿ ತಯಾರು ಮಾಡುತ್ತಾರೆ.ನೇಜಿ ನಾಟಿಗೆ ಗದ್ದೆಯನ್ನು ಹದ ಮಾಡುವ ಮೊದಲು ಸಾಮಾನ್ಯವಾಗಿ ಹಟ್ಟಿಗೊಬ್ಬರ ವನ್ನು ಗದ್ದೆಗೆ ಹಾಕಿ ನಂತರ ಉಳುಮೆ ಮಾಡಲಾಗುತ್ತದೆ. ಹಿಂದೆ ರೈತರೇ ತಮ್ಮ ಎತ್ತುಗಳ ಮೂಲಕ ಉಳುಮೆ ಮಾಡುತ್ತಿದ್ದರು. ಆದರೆ ಕಾಲ ಬದಲಾಗಿದೆ. ಈಗ ಎತ್ತುಗಳ ಬದಲಿಗೆ ಟಿಲ್ಲರ್ ಅಥವಾ ಟ್ರ್ಯಾಕ್ಟರ್ ಮೂಲಕ ಉಳುಮೆ ನಡೆಸಿ ಗದ್ದೆಯನ್ನು ಹದ ಮಾಡುತ್ತಾರೆ. ಹೀಗೆ ಹದ ಮಾಡಿದ ಗದ್ದೆಯಲ್ಲಿ ನೇಜಿ ನಾಟಿ ಮಾಡುತ್ತಾರೆ. ಇದರಲ್ಲೂ ಆಧುನಿಕತೆಯನ್ನು ಅನುಸರಿಸುತ್ತಿರುವ ಮಂದಿ ಯಾಂತ್ರೀಕೃತ ನೇಜಿ ನಾಟಿ ನಡೆಸುತ್ತಿದ್ದಾರೆ. ಇನ್ನು ಕೆಲವರು ಸಾಲು ನಾಟಿ ಮಾಡುತ್ತಾರೆ. ಅಂದರೆ ಉದ್ದವಾದ ಒಂದು ಹಗ್ಗಕ್ಕೆ ಒಂದು ಅಡಿಗೊಂದರಂತೆ ಗುರುತು ಹಾಕಿ ಈ ಹಗ್ಗವನ್ನು ಗದ್ದೆಯಲ್ಲಿ ಹಿಡಿದು ನೇಜಿ ನಾಟಿ ಮಾಡುತ್ತಾರೆ. ಸುಮಾರು ಒಂದು ಎಕರೆ ಪ್ರದೇಶದ ಗದ್ದೆಯಲ್ಲಿ ಈ ರೀತಿಯ ಸಾಲುನಾಟಿ ಮಾಡುವುದಕ್ಕೆ ೫ರಿಂದ ೬ ಮಂದಿಗೆ ಒಂದು ದಿನ ಬೇಕಾಗುತ್ತದೆ. ಹಿಂದಿನ ಪದ್ಧತಿಯಲ್ಲಿ ಇಷ್ಟೇ ಸ್ಥಳದಲ್ಲಿ ನೇಜಿ ನಾಟಿ ಮಾಡಲು ಕನಿಷ್ಟ ಮೂರು ದಿನಗಳು ಬೇಕಾಗುತ್ತಿತ್ತು. ಸಾಮಾನ್ಯವಾಗಿ ಈಗ ರೈತರು ಜಯ,ಜ್ಯೋತಿ, ಭದ್ರಾ (ಎಮ್‌ಎ೪) ತಳಿಯ ಭತ್ತದ ಬೀಜಗಳನ್ನು ಹೆಚ್ಚಾಗಿ ಬಳಸುತ್ತಾರೆ. ನೇಜಿಗೆ 12ರಿಂದ15ದಿನಗಳ ಒಳಗಾಗಿ ನೇಜಿ ನಾಟಿ ಮಾಡಲಾಗುತ್ತದೆ. ಈ ತಳಿಗಳು ಹೆಚ್ಚು ಎತ್ತರ ಬೆಳೆಯದ ಕಾರಣ ತೆನೆ ತುಂಬಿದಾಗ ಗದ್ದೆಯಲ್ಲಿ ಬೀಳುವ ಸಾಧ್ಯತೆ ಇಲ್ಲ. ಸಾಂಪ್ರದಾಯಿಕ ರೈತರ ಜೊತೆ ಇದ್ದ ಕಾಯಮೆ, ಮಸೂರಿ,ರಾಜಕಾಯಮೆ ಗಳಂತಹ ತಳಿಗಳು ಹೆಚ್ಚು ಎತ್ತರ ಬೆಳೆದು ತೆನೆ ತುಂಬಿದಾಗ ಬೀಳುತ್ತಿದ್ದವು. ಹೀಗೆ ಬಿದ್ದರೆ ಆರ್ಥಿಕ ಸಂಕಷ್ಟ ಒಂದೆಡೆಯಾದರೆ ಯಂತ್ರಗಳಲ್ಲಿ ಕಟಾವು ಮಾಡಲು ಸಾಧ್ಯವಾಗುವುದಿಲ್ಲ ಎಂಬುವುದು ಹೊಸ ತಳಿಗಳ ಆಯ್ಕೆಗೆ ಮತ್ತೊಂದು ಕಾರಣವಾಗಿದೆ.

ಕಾರ್ತೆಲ್ (ಜೂನ್-ಜುಲಾಯಿ) ತಿಂಗಳಲ್ಲಿ ಸಾಮಾನ್ಯವಾಗಿ ಭತ್ತದ ಕೃಷಿ ಮಾಡುವ ರೈತರು ನೇಜಿ ನಾಟಿ ಕಾರ್ಯ ಮುಗಿಸುತ್ತಾರೆ. ಇದು ೧೨೦ ದಿನಗಳ ನಂತರ ಕಟಾವಿಗೆ ಬರುತ್ತದೆ. ನೇಜಿ ನಾಟಿ ಮಾಡಿದ ನಂತರ ಮಳೆ ವಿಪರೀತವಾದಲ್ಲಿ ನೇಜಿಗೆ ಔಷಧಿ ಸಿಂಪಡಣೆ ಅನಿವಾರ್ಯವಾಗುತ್ತದೆ. ಇಲ್ಲದಿದ್ದರೆ ರೋಗಭಾದೆ ನೇಜಿಯನ್ನು ಕಾಡುತ್ತದೆ. ಹಾಗಾಗಿ ಚಾಪೆ ನೇಜಿ ತಯಾರು ಮಾಡುವುದರಿಂದ ಹಿಡಿದು ಭತ್ತದ ತೆನೆ ಗಟ್ಟಿಕಟ್ಟುವವರೆಗೆ ಈ ಕೃಷಿಕ ವರ್ಗ ಅದರೊಂದಿಗೆ ಕಳೆತು ಬದುಕುವುದು ಅತೀ ಅಗತ್ಯ. ಪ್ರಸ್ತುತ ರೈತನ ಅಂಗಳದಲ್ಲಿ ಚಾಪೆ ನೇಜಿ ರೆಡಿಯಾಗಿ ನಿಂತಿದೆ. ಹದಗೊಂಡ ಗದ್ದೆ ನಾಟಿಗೆ ಸಿದ್ಧವಾಗಿದೆ. ನೇಜಿ ಗದ್ದೆಗಳಲ್ಲಿ ಹಳೆಯ ಖುಷಿ ಇಲ್ಲದಿದ್ದರೂ ರೈತ ವರ್ಗ ತಮ್ಮ ಅನ್ನವನ್ನು ತಾವೇ ಬೆಳೆಸಿಕೊಳ್ಳುವ ಗಟ್ಟಿ ನಿರ್ಧಾರದಿಂದ ಹೊರಬಂದಿಲ್ಲ ಎನ್ನುವುದು ಮಾತ್ರ ಶ್ಲಾಘನೆಯ ವಿಚಾರ. ಪುತ್ತೂರು ತಾಲೂಕಿನಲ್ಲಿ ಪ್ರಸ್ತುತ ಮುಂಗಾರಿಗೆ2500 ಹೆಕ್ಟೇರ್ ಭತ್ತ ಬೆಳೆಯುವ ಗುರಿಯನ್ನು ಹೊಂದಲಾಗಿದೆ. ಇಲ್ಲಿ ಯಂತ್ರಗಳನ್ನು ಬಳಸಿ ನೇಜಿ ನಾಟಿ ಮಾಡಲು ಅನುಕೂಲವಾದ ವ್ಯವಸ್ಥೆಗಳು ಸಮರ್ಪಕವಿಲ್ಲ. ಗದ್ದೆಗಳಿಗೆ ರಸ್ತೆ ಸಂಪರ್ಕದ ಕೊರತೆ ಇದೆ. ಹಾಗಿದ್ದರೂ ರೈತರು ಹೆಚ್ಚು ಆಸಕ್ತಿಯಿಂದ ಭತ್ತ ಬೆಳೆಯಲು ಮುಂದಾಗುತ್ತಿದ್ದಾರೆ. ಬಾಡಿಗೆ ಆಧಾರಿತ ಯಂತ್ರಧಾರಾ ಯೋಜನೆಯ ನೆರವನ್ನು ಬಹಳಷ್ಟು ರೈತರು ಪಡೆದುಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆಯಿಂದ ಒಂದು ಹೆಕ್ಟೇರ್ ಯಾಂತ್ರೀಕೃತ ನಾಟಿಗೆ ರೂ.೯ ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ-ನಯೀಮ್ ಹುಸೇನ್. ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಪುತ್ತೂರು.

Related posts

Leave a Reply