Header Ads
Header Ads
Breaking News

ಕರಾವಳಿಯಲ್ಲಿ ಮತ್ಸ್ಯೋದ್ಯಮಕ್ಕೆ ಭಾರೀ ಹೊಡೆತ : ಮೀನುಗಾರರಿಗೆ ಹಿಂದೆಂದೂ ಕಾಣದ ಬರದ ಪರಿಸ್ಥಿತಿ

ಕರಾವಳಿಯಲ್ಲಿ ಮತ್ಸ್ಯೋದ್ಯಮ ಅಷ್ಟೊಂದು ಲಾಭದಾಯಕವಾಗಿಲ್ಲ. ಮೀನುಗಾರಿಕೆಗೆ ಹೊಡೆತ ಬಿದ್ದರೆ ಫಿಶ್‌ಮಿಲ್‌ಗಳು ನಷ್ಟದ ಹಾದಿ ಹಿಡಿಯುತ್ತವೆ. ಹವಾಮಾನ ವೈಪರಿತ್ಯದಿಂದ ಮೀನುಗಾರಿಕೆ ಒಂದೂವರೆ ತಿಂಗಳು ತಡವಾಗಿ ಆರಂಭವಾಗಿತ್ತು. ತಡವಾದರೂ ಬಲೆಗೆ ಬರಪೂರ ಮೀನುಗಳು ಸಿಗಬಹುದು ಎಂಬ ಕಡಲ ಮಕ್ಕಳ ನಿರೀಕ್ಷೆ ಹುಸಿಯಾಗಿದೆ. ಸಮುದ್ರದಲ್ಲಿ ಮೀನಿನ ಕ್ಷಾಮ ಎದುರಾಗಿದ್ದು, ಬರಸಿಡಿಲು ಬಡಿದಂತಾಗಿದೆ.

ತಮ್ಮ ಜೀವದ ಹಂಗನ್ನು ತೊರೆದು ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯುವ ಮೀನುಗಾರರಿಗೆ ಈ ವರ್ಷ ಹವಾಮಾನ ವೈಪರೀತ್ಯದಿಂದಾಗಿ ಕೇವಲ ಎರಡು ದಿನದ ಮೀನುಗಾರಿಕೆ ನಡೆಸಲು ಮಾತ್ರ ಸಾಧ್ಯವಾಯಿತು. ಇತ್ತೀಚೆಗೆ ಸಮುದ್ರಕ್ಕೆ ಇಳಿದಿದ್ದ ಪರ್ಸೀನ್ ಬೋಟುಗಳು ಮತ್ಸ್ಯಕ್ಷಾಮ ಎದುರಿಸಿ ವಾಪಾಸು ಬಂದಿದ್ದು ಮರಳಿ ಸಮುದ್ರಕ್ಕೆ ಇಳಿಯದೆ ಲಂಗರು ಹಾಕಿವೆ. ಸಾಂಪ್ರದಾಯಿಕ ಸೇರಿದಂತೆ ಯಾಂತ್ರೀಕೃತ ಮೀನುಗಾರಿಕೆಯನ್ನೇ ಅವಲಂಬಿತರಾಗಿದ್ದ ಮೀನುಗಾರರಿಗೆ ಯಾವುದೇ ಆದಾಯವಿಲ್ಲದಿದ್ದು ಹಿಂದೆಂದೂ ಕಾಣದ ಬರ ಪರಿಸ್ಥಿತಿ ಎದುರಾಗಿದೆ.

ಕಡಲಿನಲ್ಲಿ ನಿರೀಕ್ಷಿತ ಪ್ರಮಾಣದ ಮೀನುಗಳು ಸಿಗುತ್ತಿಲ್ಲ. ಆದರೆ ಪ್ರಸಕ್ತ ವರ್ಷ ಮೀನುಗಾರಿಕೆಗೆ ಆರಂಭದಲ್ಲೇ ವಿಘ್ನ ಕಾಡಿತ್ತು. ಹವಾಮಾನ ವೈಪರೀತ್ಯದಿಂದ ನಿಷೇಧದ ಅವಧಿ ಮುಗಿದ ಬಳಿಕವೂ ಹಲವಾರು ದಿನ ಬೋಟುಗಳು ಮೀನುಗಾರಿಕೆಗೆ ಇಳಿಯದಂತಾಯಿತು. ಬಳಿಕ ಕೆಲವೇ ದಿನ ಮೀನುಗಾರಿಕೆ ನಡೆಯಿತು. ಆದರೆ ಒಂದು ತಿಂಗಳಿಂದ ಸಮುದ್ರದಲ್ಲಿ ಮೀನಿಗೆ ಬರ ಕಂಡು ಬಂದಿದ್ದು, ಬೋಟುಗಳು ಬರಿಗೈಲಿ ಮರಳುತ್ತಿವೆ.ಡಿಸೇಲ್ ವೆಚ್ಚ, ಕಾರ್ಮಿಕರ ಸಂಬಳ ಸಾರಿಗೆ ವೆಚ್ಚ ಭರಿಸಲಾಗದ ಕಾರಣ ನೂರಾರು ಬೋಟುಗಳು ಕಡಲಿಗಿಳಿಯುತ್ತಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಸುಮಾರು 7 ತಿಂಗಳಿಂದ ಉಡುಪಿ ಜಿಲ್ಲೆಯ ಮೀನುಗಾರರು ಮೀನುಗಾರಿಕೆಯಿಲ್ಲದೆ ಕಂಗಾಲಾಗಿದ್ದು ಈ ವರ್ಷ ಎದುರಾದ ಮತ್ಸ್ಯಕ್ಷಾಮದಿಂದಾಗಿ ಮೀನುಗಾರರ ಬದುಕು ಚಿಂತಾಜನಕವಾಗಿದೆ. ಈ ಬಗ್ಗೆ ಸರಕಾರ ತುರ್ತು ಸಮೀಕ್ಷೆ ನಡೆಸಿ ಎಲ್ಲಾ ಮೀನುಗಾರರಿಗೆ ತುರ್ತು ಪರಿಹಾರ ನೀಡಬೇಕೆಂಬ ಆಗ್ರಹ ಮೀನುಗಾರರಿಂದ ಕೇಳಿಬಂದಿದೆ. ಒಟ್ಟಿನಲ್ಲಿ ಮೀನುಗಾರಿಕೆಯನ್ನೇ ನಂಬಿ ಬದುಕುವ ಸಾವಿರಾರು ಕುಟುಂಬಗಳು ಆತಂಕದಲ್ಲಿವೆ. ಮತ್ಸ್ಯಕ್ಷಾಮದಿಂದ ಕಂಗಾಲಾಗಿದ್ದ ಮೀನುಗಾರರಿಗೆ ಇಂಧನ ದರ ಏರಿಕೆಯೂ ಶಾಕ್ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮೀನುಗಾರರಿಗೆ ಸೂಕ್ತ ಪರಿಹಾರವನ್ನು ನೀಡಬೇಕಿದೆ.

Related posts

Leave a Reply

Your email address will not be published. Required fields are marked *