Breaking News

ಕರಾವಳಿಯಲ್ಲಿ ಸುರಿದ ವಿಪರೀತ ಮಳೆ, ಬಿ. ಸಿ. ರೋಡ್‌ನ ರಾ. ಹೆ. ಅರೆಬರೆ ಕಾಮಗಾರಿಯ ಮುಗಿಯದ ತೊಂದರೆ

ಒಂದೆಡೆ ಧಾರಾಕಾರ ಮಳೆ, ಇನ್ನೊಂದೆಡೆ ಮಳೆಗಾಲದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅರೆಬರೆ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ನೀಡುತ್ತಿರುವ ಹಿಂಸೆ. ಬಿ. ಸಿ. ರೋಡಿನ ಜನತೆಯಂತೂ ಅಕ್ಷರಶಃ ಬೇಸತ್ತು ಹೋಗಿದ್ದಾರೆ.
ಬಿ. ಸಿ. ರೋಡಿನ ಸರ್ವಿಸ್ ರಸ್ತೆ ಹೊಂಡ ಬಿದ್ದು ವಾಹನ ಸಂಚಾರವೇ ದುಸ್ತರವಾಗಿರುವಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಬದಿಗೆ ಮಣ್ಣು ಸುರಿದು ಜನರು ನಡೆದಾಡದಂತೆ ಮಾಡಿಬಿಟ್ಟಿದೆ. ಸರ್ವಿಸ್ ರಸ್ತೆ ಪಕ್ಕ ಕೆಸರು ನೀರು ತುಂಬಿ ಕೊಂಡು ಕೃತಕ ಕೆರೆ ನಿರ್ಮಾಣವಾಗಿದೆ. ಇದರಿಂದಾಗಿ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಲು ಮತ್ತು ಇಳಿಸಲು ರಸ್ತೆ ಬಿಟ್ಟು ಕೆಳಗಿಳಿಯುವಂತಿಲ್ಲ, ಬಸ್ಸಿಗೆ ಕಾಯುವ ಪ್ರಯಾಣಿಕರು ರಸ್ತೆಯಲ್ಲೇ ನಿಲ್ಲಬೇಕಾಗಿದೆ.
ಬಿ. ಸಿ. ರೋಡಿನಿಂದ ಮಂಗಳೂರಿಗೆ ತೆರಳುವ ಬಸ್ಸು ನಿಲ್ದಾಣದ ಬಳಿ ಕೃತಕ ಕೆರೆ ನಿರ್ಮಾಣಗೊಂಡು ಬಸ್ಸಿಗೆ ಕಾಯುವ ಪ್ರಯಾಣಿಕರು ತೊಂದರೆ ಪಡಬೇಕಾಗಿದೆ. ಬಸ್ಸುಗಳೆಲ್ಲವೂ ರಸ್ತೆಯಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಸರ್ವಿಸ್ ರಸ್ತೆಯಲ್ಲಿ ಟ್ರಾಫಿಕ್ ಜಾಂ ಉಂಟಾಗುತ್ತಿದೆ. ಸರ್ವಿಸ್ ರಸ್ತೆಯಲ್ಲಿ ಕಳಪೆ ಕಾಮಗಾರಿ ನಿರ್ವಹಿಸಿ ಸಾರ್ವಜನಿಕರು ಹಾಗೂ ಪ್ರಯಾಣಿಕರ ಟೀಕೆಗೆ ಗುರಿಯಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಮಳೆಗಾಲದಲ್ಲಿ ಪ್ರಯಾಣಿಕರ ತಂಗುದಾಣದ ಬಳಿ ಮಣ್ಣು ಸುರಿದು ಜನ ನಿಲ್ಲದಂತೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Related posts

Leave a Reply