Header Ads
Header Ads
Breaking News

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಮಾಧ್ಯಮ ಕಾರ್ಯಾಗಾರ:ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ

ಮಂಗಳೂರಿನಲ್ಲಿ ಮಾಧ್ಯಮ ಕಾರ್ಯಾಗಾರವನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಹಿರಿಯ ವಿದ್ವಾಂಸರು ಸಮಕಾಲೀನ ಪತ್ರಿಕೋದ್ಯಮದ ಬಗ್ಗೆ ಉಪನ್ಯಾಸ ನೀಡಿದರು. ಇದೇ ವೇಳೆ, ಉಸ್ತುವಾರಿ ಸಚಿವ ಯು.ಟಿ.ಖಾದರ್, ಪತ್ರಕರ್ತರಿಗೆ ನೆರವಾಗುವ ನಿಟ್ಟಿನಲ್ಲಿ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ ನೀಡಿದರು.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದ ಸಂಕೇತವದು. ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡ ಮಾಧ್ಯಮ ಕಾರ್ಯಾಗಾರ ವಿಭಿನ್ನವಾಗಿ ಮೂಡಿಬಂತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 18 ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಾರ್ಯಾಗಾರಕ್ಕೆ ಆಗಮಿಸಿದ್ದರು. ಇನ್ನು ಕಾರ್ಯಾಗಾರವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ಧರಾಜು ಅವರು ಉದ್ಘಾಟಿಸಿದ್ರು.ಈ ವೇಳೆ ಮಾತನಾಡಿದ ಸಂಸದ ನಳಿನ್ ಕುಮಾರ್, ಮಾಧ್ಯಮ ಮತ್ತು ನ್ಯಾಯಾಂಗ ಈ ದೇಶದ ಅತಿ ಪ್ರಾಮುಖ್ಯ ವ್ಯವಸ್ಥೆ. ಇವೆರಡು ಅಂಗಗಳು ಅಧಪತನಕ್ಕೆ ಒಳಗಾದರೆ ಅದಕ್ಕಿಂತ ದೊಡ್ಡ ಕೇಡು ಬೇರೊಂದಿಲ್ಲ ಅಂತಾ ಹೇಳಿದರು.ಕಾರ್ಯಾಗಾರದ ಅಂಗವಾಗಿ ಸಂವಿಧಾನ ರಕ್ಷಣೆಯಲ್ಲಿ ಮಾಧ್ಯಮದ ಪಾತ್ರ ಅನ್ನುವ ವಿಚಾರದ ಕುರಿತು ಉಪನ್ಯಾಸ ಮತ್ತು ಸಂವಾದ ನಡೆಯಿತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಎಚ್. ಉಪನ್ಯಾಸ ನೀಡಿದ್ರು. ದೇಶದ ಪ್ರತಿ ನಾಗರಿಕನೂ ಸಂವಿಧಾನದ ಅಂಶಗಳನ್ನು ಅರಿತುಕೊಳ್ಳಬೇಕು. ಪ್ರತಿ ಮನೆಯಲ್ಲಿ ಸಂವಿಧಾನದ ಪುಸ್ತಕ ಇಟ್ಟುಕೊಳ್ಳಬೇಕು. ಅಲ್ಲದೆ, ಪತ್ರಕರ್ತನಾದವನು ಸಂವಿಧಾನ ಅರಿತುಕೊಂಡು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಬೇಕು. ಸಂವಿಧಾನವೇ ಈ ದೇಶದ ದೊಡ್ಡ ಗ್ರಂಥ ಅಂತಾ ಹೇಳಿದರು.

ಕಾರ್ಯಕ್ರಮದ ಕೊನೆಗೆ ಆಗಮಿಸಿದ ಉಸ್ತುವಾರಿ ಸಚಿವ ಯು.ಟಿ.ಖಾದರ್, ಪತ್ರಿಕೋದ್ಯಮ ಬದಲಾಗುತ್ತಿರುವ ಸನ್ನಿವೇಶಗಳನ್ನು ಉದಾಹರಣೆ ಸಹಿತ ವಿವರಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ, ಜರ್ನಲಿಸ್ಟ್ ಯೂನಿಯನ್ ವತಿಯಿಂದ ಆರಂಭಿಸಿರುವ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ ನೀಡಿದರಲ್ಲದೆ, ನಿಧಿಗೆ ತನ್ನ ವೇತನದಿಂದ 50 ಸಾವಿರ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ರು.

ಈ ವೇಳೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೋ. ಎ.ಎಂ.ಖಾನ್, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲರಾದ ಡಾ.ಉದಯ್ ಕುಮಾರ್ ಇರ್ವತ್ತೂರು, ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ ಅತಿಥಿಯಾಗಿ ಭಾಗವಹಿಸಿದ್ರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಮಾತ್ರವಲ್ಲದೇ 300ಕ್ಕೂ ಹೆಚ್ಚು ಪತ್ರಿಕೋದ್ಯಮದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.ಒಟ್ಟಿನಲ್ಲಿ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ನಡೆದ ಮಾಧ್ಯಮ ಕಾರ್ಯಾಗಾರ ವಿಶೇಷವಾಗಿ ಮೂಡಿಬಂತು ಎನ್ನುವುದರಲ್ಲಿ ಎರಡು ಮಾತಿಲ್ಲ.

Related posts

Leave a Reply