Header Ads
Header Ads
Breaking News

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ನಲ್ವತ್ತು ವರುಷಗಳ ಬಳಿಕ ಕಂಡಿತು ನಿವ್ವಳ ಲಾಭ

ಹಲವು ವರ್ಷಗಳಿಂದ ನಷ್ಟದ ಸುಳಿಗೆ ಸಿಲುಕಿದ್ದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಕೆ‌ಎಫ್ಡಿಸಿ ತನ್ನ ಸಂಚಿತ ನಷ್ಟದ ಹೊರೆಯನ್ನು ಸಂಪೂರ್ಣವಾಗಿ ತೀರಿಸಿ, 2016-17ನೇ ವರ್ಷದಲ್ಲಿ ರೂ. 2.26 ಕೋಟಿ ನಿವ್ವಳ ಲಾಭ ದಾಖಲಿಸಿದೆ.
ಪಾಲು ಬಂಡವಾಳ ಒದಗಿಸಿರುವ ರಾಜ್ಯ ಸರ್ಕಾರಕ್ಕೆ ರೂ. ೧೭ ಲಕ್ಷ ಲಾಭಾಂಶ ಪಾವತಿಸಲು ನಿಗಮ ಸಿದ್ಧವಾಗಿದೆ. ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ‌ಎಫ್ಡಿಸಿ ಅಧ್ಯಕ್ಷ ರಾಜೇಂದ್ರ ನಾಯಕ್, ೨೦೦೬-೦೭ರಲ್ಲಿ ನಿಗಮದ ಸಂಚಿತ ನಷ್ಟದ ಮೊತ್ತ ರೂ. ೯.೪೫ ಕೋಟಿ ತಲುಪಿತ್ತು. ೨೦೦೭-೦೮ರಲ್ಲಿ ನಿಗಮ ರೂ. ೪೨ ಲಕ್ಷ ನಿವ್ವಳ ಲಾಭ ದಾಖಲಿಸಿತ್ತು. ಆದರೆ, ಸಂಚಿತ ನಷ್ಟದ ಕಾರಣದಿಂದ ಸಂಸ್ಥೆ ಆರ್ಥಿಕ ಸಂಕಷ್ಟದಿಂದ ಹೊರಬಂದಿರಲಿಲ್ಲ. ಕಳೆದ ವರ್ಷ ರೂ. ೪.೩೬ ಕೋಟಿ ನಿವ್ವಳ ಲಾಭ ದಾಖಲಿಸಿದೆ. ಸಂಚಿತ ನಷ್ಟದಲ್ಲಿನ ಬಾಕಿ ಮೊತ್ತ ಭರಿಸಿದ ಬಳಿಕ ರೂ. ೨.೨೬ ಕೋಟಿ ಉಳಿದಿದೆ ಎಂದರು.
೧೯೭೦ರಲ್ಲಿ ಸ್ಥಾಪನೆಯಾದ ನಿಗಮವು ೨೦೦೩-೦೪ರವರೆಗೆ ನಿರಂತರವಾಗಿ ನಷ್ಟದಲ್ಲಿತ್ತು. ೨೦೦೬-೦೭ರಲ್ಲಿ ವಿವಿಧ ಬಾಬ್ತುಗಳಿಗಾಗಿ ರೂ. ೪.೧೨ ಕೋಟಿ ಅಗತ್ಯವಿತ್ತು. ಆಗ ನಿಗಮವನ್ನು ರೋಗಗ್ರಸ್ತ ಸಂಸ್ಥೆ ಎಂದು ಘೋಷಿಸಿ ಮುಚ್ಚುವ ಪ್ರಸ್ತಾವವಿತ್ತು. ಮೀನುಗಾರರ ಬೇಡಿಕೆಯಂತೆ ಸಂಸ್ಥೆಯನ್ನು ರಕ್ಷಿಸಲು ಮುಂದಾದ ರಾಜ್ಯ ಸರ್ಕಾರ ರೂ. ೪.೧೨ ಕೋಟಿಯನ್ನು ಪಾಲು ಬಂಡವಾಳದ ರೂಪದಲ್ಲಿ ಒದಗಿಸಿತ್ತು. ೨೦೧೬-೧೭ರಲ್ಲಿ ಮೀನು, ಮಂಜುಗಡ್ಡೆ ಮತ್ತು ಡೀಸೆಲ್ ಮಾರಾಟದ ವಹಿವಾಟು ರೂ. ೨೦೦ ಕೋಟಿಯನ್ನು ದಾಟಿದೆ ಎಂದು ವಿವರ ನೀಡಿದರು. ಸಂಸ್ಥೆ ನಷ್ಟದಲ್ಲಿದ್ದ ಕಾರಣದಿಂದ ಸ್ವಯಂ ನಿವೃತ್ತಿ ಪಡೆದಿದ್ದ ನೌಕರರಿಗೆ ಕೊಡಬೇಕಿದ್ದ ರೂ. ೧.೭೫ ಕೋಟಿ ಬಾಕಿ ಪಾವತಿ, ನಿಗಮದಲ್ಲಿನ ೧೬೦ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಪಾವತಿ, ಕಾಯಂ ನೌಕರರಿಗೆ ಕಾಲಮಿತಿ ಮುಂಬಡ್ತಿ ವೇತನ ಮಂಜೂರಾತಿ, ನಿಗಮದಲ್ಲಿ ವ್ಯವಹಾರ ನಡೆಸುತ್ತಿದ್ದ ದೋಣಿ ಮಾಲೀಕರು ಮತ್ತು ವ್ಯಾಪಾರಿಗಳು ಹೊಂದಿರುವ ರೂ. ೫೦ ಲಕ್ಷ ಸಾಲದ ಮೊತ್ತವನ್ನು ಮನ್ನಾ ಮಾಡಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

Related posts

Leave a Reply