Header Ads
Header Ads
Breaking News

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ : ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ರಾತ್ರಿ ಹೊನಲು ಬೆಳಕಿನ ಕ್ರೀಡೋತ್ಸವ ಪ್ರೇಕ್ಷಕರನ್ನು ಮೈನವಿರೇಳಿಸಿದೆ. ವಿದ್ಯಾಕೇಂದ್ರದ ಒಟ್ಟು 3,316 ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ ನೀಡಿದ್ದು ಪೋಕ್ರಾನ್ ಅಣು ಪರೀಕ್ಷೆ, ಸಂಸತ್ತಿನಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಭಾಷಣ, ಕೇರಳ ಸರಕಾರ ಮತ್ತು ಅಯ್ಯಪ್ಪ ಭಕ್ತರ ನಡುವಿನ ಸಂಘರ್ಷ ಮತ್ತು ಸರದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಯ ಸನ್ನಿವೇಶಗಳು ಪ್ರಸ್ತುತಗೊಂಡವು.ಕಲ್ಲಡ್ಕ ಡಾ. ಪ್ರಭಾಕರ ಭಟ್ ನಿರ್ದೇಶನದಲ್ಲಿ ಸಂಚಾಲಕ ವಸಂತ ಮಾಧವ, ಅಧ್ಯಕ್ಷ ನಾರಾಯಣ ಸೋಮಯಾಜಿ, ಸಹಸಂಚಾಲಕ ರಮೇಶ್ ಮಾರ್ಗದರ್ಶನದಲ್ಲಿ ಸುಮಾರು 19ಕ್ಕೂ ಅಧಿಕ ಬಗೆಯ ನಾನಾ ಕಸರತ್ತು ಪ್ರದರ್ಶನಗಳನ್ನು ಸೇರಿದ್ದ ಸಾವಿರಕ್ಕೂ ಅಧಿಕ ಪೋಷಕರು, ಸಾರ್ವಜನಿಕರು ಮತ್ತು ಅತಿಥಿಗಳ ಮುಂದೆ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಚಪ್ಪಾಳೆಯ ಪ್ರೋತ್ಸಾಹ ಹಾಗೂ ಜೈ ಶ್ರೀರಾಮ್ ಎಂಬ ಘೋಷಣೆಯ ಬೆಂಬಲ ಕೇಳಿ ಬಂತು.

ಸಮವಸ್ತ್ರ ಧರಿಸಿದ ಕಾಲೇಜು ವಿದ್ಯಾರ್ಥಿಗಳು ಘೋಷ್ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕಿ ಆಕರ್ಷಕವಾಗಿ ಶಿಸ್ತಿನ ಸೈನಿಕರಂತೆ ವಿವಿಧ ವಾಹಿನಿಗಳಲ್ಲಿ ಪಥ ಸಂಚಲನ ನಡೆಸಿದರು. ಕೋವಿಯನ್ನು ಹಿಡಿದ ಕಾಲೇಜು ವಿದ್ಯಾರ್ಥಿಗಳು ಕೋವಿ ಸಮತಾ ಪ್ರದರ್ಶನ ನೀಡಿದರು.

ಕಾಲೇಜು ವಿದ್ಯಾರ್ಥಿಗಳಿಂದ ಕೈಯಲ್ಲಿ ಬೆಳಕಿನ ದಂಡ ಹಿಡಿದುಕೊಂಡು ಎಲ್ ಇ ಡಿ ನೀಲಿ, ಕೆಂಪು ಬೆಳಕಿನ ದಂಡಗಳೊಂದಿಗೆ ಪ್ರದರ್ಶನ, ಕನ್ನಡ, ತುಳು, ಹಿಂದಿ ಭಾಷಾ ಭಜನೆಗೆ ನೃತ್ಯ, ಮಲ್ಲಕಂಭ ಪ್ರದರ್ಶನ, ಬಾಟಲಿಗಳ ಮೇಲೆ ಜೋಡಿಸಿದ ತಿರುಗುವ ಮಲ್ಲಕಂಬಗಳಲ್ಲಿ ವಿಶೇಷ ಯೋಗಾಸನ ಪ್ರದರ್ಶನ, ಘೋಷ್ ಟಿಕ್ ಟಿಕ್ ಪ್ರದರ್ಶನ, ಕಾಲೇಜು ವಿದ್ಯಾರ್ಥಿಗಳಿಂದ ಜಾತ್ರಾ ವೈಭವ ಪ್ರದರ್ಶನ, ದ್ವಿಚಕ್ರ, ಏಕಚಕ್ರ ವಾಹನಗಳ ಕಸರತ್ತು, ಬೈಕುಗಳಲ್ಲಿ ಸಾಹಸಮಯ ಸವಾರಿ, ಬೆಂಚಿನ ಮೇಲೆ ಏಕಚಕ್ರದಲ್ಲಿ ಸವಾರಿ, ಬಾಲಕಿಯರು ಟ್ಯೂಬ್ ಲೈಟ್ ಗಳಿಗೆ ಎದೆಯೊಡ್ಡಿ ಒಡೆಯುವ ಸನ್ನಿವೇಶ ಜೀವನದಲ್ಲಿನ ಏಳುಬೀಳುಗಳನ್ನು ಎದುರಿಸುವ ಸಂದೇಶ ನೀಡಿದವು.

ಪ್ರೌಢಶಾಲೆಯ 935 ವಿದ್ಯಾರ್ಥಿಗಳು ಮೈದಾನದ ಹೊನಲು ಬೆಳಕಿನಲ್ಲಿ ಲಯಬದ್ಧವಾಗಿ ಕುಣಿದು ಕುಪ್ಪಳಿಸಿ ನಿರ್ಮಿಸುವ ರಂಗೋಲಿ ಚಿತ್ತಾರ, ಸಾಲುಸಾಲಾಗಿ ಕುಳಿತು ಮಾಡುವ ಸಾಮೂಹಿಕ ರಚನೆಗಳು ಗಮನ ಸೆಳೆದವು. ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸಹಿತ ಅನೇಕ ಗಣ್ಯರು ವಿದ್ಯಾರ್ಥಿಗಳ ಸಾಹಸ ಕಸರತ್ತು ವೀಕ್ಷಿಸಿದರು.

Related posts

Leave a Reply