Header Ads
Header Ads
Breaking News

ಕಲ್ಲಮುಂಡ್ಕೂರಿನಲ್ಲಿ ಸಿದ್ಧ ಉಡುಪುಗಳ ಉದ್ಯಮ ಸ್ಥಾಪನೆ: ಐವನ್ ಡಿಸೋಜ

ಮೂಡುಬಿದಿರೆ : ಕಲ್ಲಮುಂಡ್ಕೂರು ಗ್ರಾಮ ಪಂಚಾಯತಿ ಸುಮಾರು50ಎಕ್ರೆ ಜಾಗವನ್ನು ಒದಗಿಸಿಕೊಟ್ಟಲ್ಲಿ ಕಲ್ಲಮುಂಡ್ಕೂರು ಅಥವಾ ನಿಡ್ಡೋಡಿಯಲ್ಲಿ ಸಿದ್ಧ ಉಡುಪುಗಳ ಉದ್ದಿಮೆಯನ್ನು ಆರಂಭಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ಅವರು ಶುಕ್ರವಾರ ನಿಡ್ಡೋಡಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ1 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಿ ಬಳಿಕ ಬಿಲ್ಲವ ಸಂಘದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಬೀಡಿ ಉದ್ದಿಮೆ ಅಪಾಯದಲ್ಲಿದ್ದು ಬೀಡಿ ಕಾರ್ಮಿಕರು ಕೆಲಸವಿಲ್ಲದೆ ತೊಂದರೆ ಎದುರಿಸುತ್ತಿದ್ದಾರೆ. ಬೀಡಿ ಉದ್ದಿಮೆಗೆ ಪರ್ಯಾಯವಾಗಿ ಸಿದ್ಧ ಉಡುಪುಗಳ ಉದ್ದಿಮೆ ಆರಂಭಿಸಲು ಸರಕಾರ ಅವಕಾಶ ಕಲ್ಪಿಸಿದ್ದು ಕಲ್ಲಮುಂಡ್ಕೂರು ಪಂಚಾಯತಿ ಜಾಗ ನೀಡಿದಲ್ಲಿ ಈ ಉದ್ದಿಮೆ ಸ್ಥಾಪಿಸಲಾಗುವುದು. ಸುಮಾರು ಒಂದು ಸಾವಿರ ಮಂದಿಗೆ ಉದ್ಯೋಗವಕಾಶ ಲಭಿಸಲಿದ್ದು ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಲಭಿಸಲಿದೆ ಎಂದರು.25ಎಕ್ರೆ ಜಾಗ ಸಿಕ್ಕಿದಲ್ಲಿ ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದಿಂದ ತೆಂಗು ಮತ್ತು ಅಡಿಕೆ ನಾರು ತೆಗೆಯುವ ಉದ್ದಿಮೆಯನ್ನು ಆರಂಭಿಸಲು ಅವಕಾಶವಿದೆ. ಮೂಡುಬಿದಿರೆ ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಜಾಗ ಕೊಟ್ಟಲ್ಲಿ ಈ ಉದ್ದಿಮೆಯನ್ನು ಸರಕಾರ ಆರಂಭಿಸಲಿದೆ.

ಇದರಿಂದ ಸುಮಾರು500 ಮಂದಿಗೆ ಉದ್ಯೋಗ ಲಭಿಸಲಿದೆ ಎಂದರು. ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಮಂಜೂರಾದ ಒಂದು ಕೋಟಿ ವೆಚ್ಚದ ಅನುದಾನದಲ್ಲಿ ರೂ50 ಲಕ್ಷ ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು. ಉಳಿದ ೫೦ ಲಕ್ಷದಲ್ಲಿ ಸಮುದಾಯ ಭವನ, ಗರಡಿ ಮನೆ, ಸೋಲಾರ್ ದೀಪ ಅಳವಡಿಕೆ, ಘನತ್ಯಾಜ್ಯ ವಿಲೇವಾರಿ ಘಟಕ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದರು.ಕಲ್ಲಮುಂಡ್ಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರೇಮಾ, ಪಂಚಾಯತಿ ಸದಸ್ಯರಾದ ಜೋಕಿಂ ಕೊರೆಯಾ, ಲಾಜರಸ್ ಡಿಕೋಸ್ತಾ, ಸುಖಾನಂದ ಶೆಟ್ಟಿ ತಾಲ್ಲೂಕು ಪಂಚಾಯತಿ ಸದಸ್ಯ ಸುಕುಮಾರ್ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply