Breaking News

ಕಳಪೆ ಕಾಮಗಾರಿಯ ವಿಟ್ಲದ ಕಂಬಳಬೆಟ್ಟು ನೆಲ್ಲಿಗುಡ್ಡೆ ರಸ್ತೆ,  ಮೂರೇ ತಿಂಗಳಲ್ಲಿ ಮಳೆ ನೀರಿಗೆ ಕೊಚ್ಚಿ ಹೋದ ರಸ್ತೆ

ಸಾರ್ವಜನಿಕರ ೪೦ ವರ್ಷಗಳ ಬೇಡಿಕೆಯಾಗಿದ್ದ ವಿಟ್ಲದ ಕಂಬಳಬೆಟ್ಟು ನೆಲ್ಲಿಗುಡ್ಡೆ ರಸ್ತೆ ಹಾಗೂ ಸೇತುವೆ ಅಭಿವೃದ್ಧಿಗೊಂಡು ಮೂರೇ ತಿಂಗಳಿನಲ್ಲಿ ಮಳೆ ನೀರಿಗೆ ಕೊಚ್ಚಿ ಹೋಗಿದ್ದರಿಂದ ಕೋಟ್ಯಾಂತರ ರೂ. ಅನುದಾನ ನೀರಿನಲ್ಲಿ ಹೋಮ ಬಿಟ್ಟಾಂತಾಗಿದೆ. ಅವೈಜ್ಞಾನಿಕ ಕಾಮಗಾರಿ ನಡೆಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಶಾಸಕಿಯವರ ವಿಶೇಷ ಮುತುವರ್ಜಿಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲ ಕಸಬಾ ಗ್ರಾಮದ ಕಂಬಳಬೆಟ್ಟುನಿಂದ ನೆಲ್ಲಿಗುಡ್ಡೆ ವರೆಗೆ ಸಾರ್ವಜನಿಕರ ಸುಮಾರು ೪೦ ವರ್ಷಗಳ ಬೇಡಿಕೆಯಾದ ರಸ್ತೆ ಹಾಗೂ ಸೇತುವೆ ನಿರ್ಮಿಸಲು ೩.೨೭ ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರವೇ ಕಾಮಗಾರಿ ನಡೆದು ಸುಸಜ್ಜಿತ ರಸ್ತೆ ಹಾಗೂ ಸೇತುವೆ ನಿರ್ಮಾಣಗೊಂಡಿತ್ತು. ಆದರೆ ರಸ್ತೆ ಕಾಮಗಾರಿ ಮುಗಿದು ಮೂರು ತಿಂಗಳಿನಲ್ಲಿ ರಸ್ತೆಯ ಸ್ವರೂಪ ಕಳೆದುಕೊಂಡಿದೆ. ಅವೈಜ್ಞಾನಿಕ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಕಾಮಗಾರಿಯಿಂದ ಈ ರೀತಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತೀಚೆಗೆ ಸುರಿದ ಮೊದಲ ಮಳೆಗೆ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ಮೋರಿಗಳು ನೆಲೆಕಚ್ಚಿದೆ. ಸೇತುವೆ ಸಮೀಪ ತಡೆಗೋಡೆ ನಿರ್ಮಿಸದೇ ಮಣ್ಣುಗಳನ್ನು ಹಾಕಲಾಗಿದೆ. ಇದೀಗ ಮಣ್ಣುಗಳು ನೀರಿನಲ್ಲಿ ಕೊಚ್ಚಿ ಹೋಗಿ ಪ್ರಪಾತ ನಿರ್ಮಾಣಗೊಂಡಿದೆ. ಈ ರಸ್ತೆಯಲ್ಲಿ ವಾಹನಗಳು ಪರಸ್ಪರ ದಾರಿ ಬಿಡುವ ವೇಳೆ ಪ್ರಪಾತಕ್ಕೆ ಉರುಳುವುದರಲ್ಲಿ ಯಾವುದೇ ಸಂಶಯವಿಲ್ಲ. ಅದಲ್ಲದೇ ಎರಡು ಕಿಮೀವರೆಗೆ ರಸ್ತೆಗೆ ಡಾಮರೀಕರಣ ಹಾಕಲಾಗಿದ್ದರೂ ಸುಸಜ್ಜಿತ ಚರಂಡಿ ನಿರ್ಮಿಸಿಲ್ಲ. ಚರಂಡಿಯಲ್ಲಿ ಹರಿಯಬೇಕಾಗಿದ್ದ ನೀರು ರಸ್ತೆಯಲ್ಲಿ ಹರಿಯುವ ಪರಿಣಾಮ ರಸ್ತೆಯಲ್ಲಿ ಹೊಂಡ ನಿರ್ಮಾಣಗೊಂಡಿದೆ. ರಸ್ತೆ ಬದಿಯ ಮಣ್ಣುಗಳು ಚರಂಡಿ ಸೇರುತ್ತಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಕಾಮಗಾರಿ ನಡೆಸಿದ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಮಾಹಿತಿ ನೀಡಿದ್ದರೂ ಅವರು ಇತ್ತ ಕಡೆ ತಲೆ ಹಾಕುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Related posts

Leave a Reply