Header Ads
Breaking News

ಕಾಂಗ್ರೆಸ್‍ಗೆ ಯಾವುದೇ ಜಾತಿ ರಾಜಕೀಯವನ್ನು ಮಾಡುವ ಅಗತ್ಯವಿಲ್ಲ- ಮಂಗಳೂರಿನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿಕೆ

ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಜಾತಿ ರಾಜಕೀಯವನ್ನು ಮಾಡುವ ಅಗತ್ಯವಿಲ್ಲ. ಇದು ಜಾತಿ, ಧರ್ಮವನ್ನು ಮೀರಿ ಬೆಳೆದಿರುವಂತಹ ಪಕ್ಷ. ಆದರೆ ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ. ಇದಕ್ಕೆ ಬೇಕಾದಷ್ಟು ನಿದರ್ಶನಗಳಿವೆ ಎಂದು ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಟಿ ಚೆನ್ನಯರ ಹೆಸರಿನಲ್ಲಿ ಕಾಂಗ್ರೆಸ್ ಜಾತಿ ರಾಜಕಾರಣ ಮಾಡ್ತಿಲ್ಲ. ಮಂಗಳೂರು ಏರ್‍ಪೋರ್ಟ್‍ಗೆ ಕೋಟಿ ಚೆನ್ನಯ ಹೆಸರಿಡಲು ಅನೇಕ ವರ್ಷಗಳಿಂದ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಮಳವೂರು ಗ್ರಾ.ಪಂ.ನಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಕಳಿಸಲಾಗಿತ್ತು. ಜಿಲ್ಲಾ ಪಂಚಾಯತ್‍ನಲ್ಲೂ ನಿರ್ಣಯ ಕೈಗೊಂಡು ಸರ್ಕಾರಕ್ಕೆ ರವಾನೆ ಮಾಡಲಾಗಿತ್ತು. ಈ ಬಗ್ಗೆ ನಾನು ಪರಿಷತ್‍ನಲ್ಲಿ ಪ್ರಸ್ತಾಪಿಸಿದಾಗ ಪ್ರಸ್ತಾವನೆ ಇಲ್ಲ ಎನ್ನಲಾಗಿತ್ತು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ, ನಳಿನ್ ಕುಮಾರ್ 8 ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದಿದ್ದಾರೆ. ಹಾಗಿದ್ದರೆ 2012ರಲ್ಲಿ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಸಂಸದರು ದಾಖಲೆ ಕೊಡಬೇಕು. ಅಥವಾ 8 ವರ್ಷಗಳಲ್ಲಿ ಏನಾಗಿದೆ ಎನ್ನುವುದನ್ನು ಅವರು ತಿಳಿಸಬೇಕು. ಮಂಗಳೂರು ಏರ್‍ಪೋರ್ಟ್‍ಗೆ ಕೋಟಿ ಚೆನ್ನಯರ ಹೆಸರಿಡಲು ಏನು ಸಮಸ್ಯೆ ಎನ್ನುವದನ್ನು ತಿಳಿಸಬೇಕು ಎಂದು ಹರೀಶ್ ಕುಮಾರ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಅಬ್ದುಲ್ ರವೂಫ್, ಶಶಿಧರ್ ಹೆಗ್ಡೆ ಮತ್ತಿತರರು ಜೊತೆಗಿದ್ದರು.

Related posts

Leave a Reply

Your email address will not be published. Required fields are marked *