
ಉಳ್ಳಾಲ : ಮಂಗಳೂರು ಕ್ಷೇತ್ರದ 19 ಗ್ರಾ.ಪಂ ಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ನಗರದಲ್ಲಿರುವ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟಕ್ಕೂ ತಲುಪಿಸಿದ್ದೇವೆ. ರಸ್ತೆ ವ್ಯವಸ್ಥೆ, ಕುಡಿಯುವ ನೀರು, ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭ, ಸಾರಿಗೆ ವ್ಯವಸ್ಥೆ, ನಗರ ಮಟ್ಟದ ಸವಲತ್ತುಗಳು ಎಲ್ಲವನ್ನೂ ಉಳ್ಳಾಲ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಪ್ರತಿ ಮತದಾರ ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾನೆ ಎಂದು ಮಂಗಳೂರು ಕ್ಷೇತ್ರ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.
ತೊಕ್ಕೊಟ್ಟು ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ದಿ ಗೋಷ್ಠಿಯ ಲ್ಲಿ ಮಾಹಿತಿ ನೀಡಿದ ಅವರು ಉಳ್ಳಾಲವನ್ನು ತಾಲೂಕಾಗಿ ಮಾರ್ಪಾಡು ಮಾಡಲಾಗಿದೆ. ಪ್ರತಿ ಗ್ರಾಮದಲ್ಲಿ ಸಹೋದರತೆ, ಪ್ರೀತಿ ವಿಶ್ವಾಸ ವಾತಾವರಣ ಸೃಷ್ಟಿಸುವುದು ಕಾಂಗ್ರೆಸ್ ಉದ್ದೇಶ. ಇದನ್ನು ಕಾಂಗ್ರೆಸ್ ನಿರ್ಮಿಸಿದೆ. ಬಿಜೆಪಿ ಆಡಳಿತದಲ್ಲಿ ಗ್ರಾಮೀಣ ಮಟ್ಟದಲ್ಲಿ ಜನ ಜೀವಿಸಲು ಯಾವುದೇ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿಲ್ಲ. ರೇಷನ್, ಪೆನ್ಶನ್, ಸಂಧ್ಯಾ ಸುರಕ್ಷೆ ಎಲ್ಲಾ ಸವಲತ್ತುಗಳನ್ನು ನಿಲ್ಲಿಸಿದ್ದಾರೆ. ಪೆಟ್ರೋಲ್ ರೂ.100 ಕ್ಕೆ ಮುಟ್ಟುವ ಹಂತಕ್ಕೆ ತಲುಪಿದೆ. ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿದ್ದಾರೆ. ಈ ಬಾರಿಯ ಪ್ರತಿ ಮತದಾರ ನೀಡುವ ಮತ ರಾಜ್ಯ ಸರಕಾರದ ಜನವಿರೋಧಿ ನೀತಿಗೆ ಕೊಡುವ ಎಚ್ಚರಿಕೆಯ ಗಂಟೆಯಾಗಿದೆ. ರೈತರು ಮತ್ತು ಕಾರ್ಮಿಕರನ್ನು ನಿರ್ಲಕ್ಷ್ಯವಾಗಿ ಕಂಡ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಜನ ಬುದ್ಧಿ ಕಲಿಸಲಿದ್ದಾರೆ. ಕಾಂಗ್ರೆಸ್ ಆಡಳಿತ ಇಲ್ಲದ ಪಂ.ನಲ್ಲಿ ಹಿಂದಿನ ಆಡಳಿತ ನಡೆಸಿದ ದುರಾಡಳಿತದಿಂದ ಕಾಂಗ್ರೆಸ್ ಅನ್ನು ಅನುಷ್ಠಾನಕ್ಕೆ ತರುವ ವಿಶ್ವಾಸವಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾರ ಬೆಂಬಲಿಸಲಿದ್ದಾರೆ.
ಧ್ವನಿಯಿಲ್ಲದ ಶೋಷಿತವರ್ಗದ ಮೇಲೆ ದಬ್ಬಾಳಿಕೆ ನಡೆಸಿ ಅವಿರೋಧ ಆಯ್ಕೆಯನ್ನು ಬಿಜೆಪಿಯವರು ಮಾಡಿಕೊಂಡಿದ್ದಾರೆ. ಈ ಕುರಿತು ಮತದಾನದಲ್ಲಿ ಮತದಾರರೇ ಉತ್ತರಿಸಲಿದ್ದಾರೆ. ತುಂಬೆಯಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿ ಮೀಸಲಾತಿಯಿದ್ದರೂ, ಪರಿಶಿಷ್ಟ ಜಾತಿ ಯವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಬೆಂಬಲಿತ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಅವಕಾಶವನ್ನು ಕಲ್ಪಿಸಲಿಲ್ಲ. ಬೆಳ್ಮ , ಪಾವೂರು ಭಾಗದಲ್ಲಿ ಮೀಸಲಾತಿಗೆ ಅನುಸಾರವಾಗಿ ಅಭ್ಯರ್ಥಿಗಳೇ ಇರದ ಕಾರಣ ಅವಿರೋಧ ಆಯ್ಕೆ ನಡೆದಿದೆ. ತಲಪಾಡಿಯ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೇ ಆಮಿಷವೊಡ್ಡಿ ಬಿಜೆಪಿಯತ್ತ ಒಲವು ಬರುವಂತೆ ಮಾಡಿ ಅವಿರೋಧ ಆಯ್ಕೆ ನಡೆದಿದೆ. ಒಟ್ಟಾಗಿ ಏಳು ಅಭ್ಯರ್ಥಿಗಳ ಮೇಲೆ ಅಧಿಕಾರ ದುರುಪಯೋಗಪಡಿಸಿಕೊಂಡ ಬಿಜೆಪಿ ಅವರ ಕುಟುಂಬಸ್ಥರಿಗೆ ಆಮಿಷವೊಡ್ಡಿ ತಮ್ಮತ್ತ ಸೆಳೆದಿದೆ ಎಂದರು.
ಅಬ್ಬಕ್ಕ ಭವನಕ್ಕೆ ಎಂಟು ಕೋಟಿ ಅನುದಾನ ಮಂಜೂರಾಗಿದೆ. ಹೌಸಿಂಗ್ ಬೋಡ್9ಗೆ ಕಾಮಗಾರಿ ಜವಾಬ್ದಾರಿ ಸಿಕ್ಕಿದೆ. ಅನುದಾನ ಮಂಜೂರಾಗಲು ಹೌಸಿಂಗ್ ಬೋಡ್9 , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಎಂಒಯು ಸೈನ್ ಮಾಡಬೇಕಿದೆ.ಚುನಾವಣೆ ಮುಗಿದ ತಕ್ಷಣ ಸಂಸ್ಕೃತಿ ಇಲಾಖೆ ನಿರ್ದೆಶಕರ ಜತೆಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ. ಶೀಘ್ರದಲ್ಲೇ ಅಬ್ಬಕ್ಕ ಭವನದ ಕಾಮಗಾರಿ ಆರಂಭಿಸಲಾಗುವುದು ಎಂದರು.
ತಾಲೂಕು ಕಚೇರಿಯನ್ನು ತಾತ್ಕಾಲಿಕವಾಗಿ ನಾಟೆಕಲ್ ಅಥವಾ ತೊಕ್ಕೊಟ್ಟು ನಿರ್ಮಾಣಗೊಂಡಿರುವ ಮೂರಂತಸ್ತಿನ ಶಾಸಕರ ಕಚೇರಿಯಲ್ಲಿ ಆರಂಭಿಸುವ ಚಿಂತನೆ ಇದೆ. ಅದಕ್ಕೂ ಮುನ್ನ ಸಿಬ್ಬಂದಿ ನೇಮಕ ಹಾಗೂ ಇಲಾಖೆಗಳ ಕಚೇರಿಗಳ ಅನುಷ್ಠಾನಕ್ಕೆ ರೂಪುರೇಷೆ ತಯಾರಿಸಲಾಗುವುದು. ಬಳಿಕ ಮಂಗಳೂರು ವಿ.ವಿ ಕ್ಯಾಂಪಸ್ಸಿನಲ್ಲಿ ಸರಕಾರಿ ಜಾಗ ಇದ್ದು, ಅಲ್ಲಿಯೇ ಶಾಶ್ಬತ ತಾಲೂಕು ಕಚೇರಿ ನಿರ್ಮಿಸುವ ಚಿಂತನೆಯಿದೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಅಬ್ದುಲ್ ರಹಿಮಾನ್ ಕೋಡಿಜಾಲ್ , ತಾ.ಪಂ ಅದ್ಯಕ್ಷ ಮಹಮ್ಮದ್ ಮೋನು, ಮನ್ಸೂರ್ ಮಂಚಿಲ, ಲತೀಫ್ ಕಂದುಕ, ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.