Header Ads
Breaking News

ಕಾಂಗ್ರೆಸ್ ಹೈಕಮಾಂಡ್ ಪಾಳಯದಲ್ಲಿ ಅಚ್ಚರಿಯ ಬೆಳವಣಿಗೆ!?: ಕಾಂಗ್ರೆಸ್ ಅಧ್ಯಕ್ಷ ಗಾದಿಯನ್ನು ಅಲಂಕರಿಸಲಿದ್ದಾರೆ ಶರದ್ ಪವಾರ್?

 ಲೋಕಸಭಾ ಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿರುವ ನಡುವೆ ಎಐಸಿಸಿ ಅಧ್ಯಕ್ಷ ಗಾದಿಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆಯಿಂದ ಲೋಕಸಭೆಯ ಪ್ರತಿಪಕ್ಷ, ಅದರ ನಾಯಕರು ಯಾರಾಗ್ತಾರೆ ಎನ್ನುವ ಪ್ರಶ್ನೆಗಳೂ ಕೇಳಿಬರುತ್ತಿವೆ. ಪ್ರತಿಪಕ್ಷ, ಎಐಸಿಸಿ ಅಧ್ಯಕ್ಷ ಹುದ್ದೆಗಳ ಗೊಂದಲವನ್ನು ನಿಭಾಯಿಸೋದಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಮಾಸ್ಟರ್ ಪ್ಲ್ಯಾನೊಂದು ತಯಾರಾಗಿದೆ. ಅದು ಏನು ಅಂತಾ ಕೇಳೋದಾದ್ರೆ ಈ ರಿಪೋರ್ಟ್ ನೋಡಿ.

 ಹೌದು, ಈಗ ಎಲ್ಲೆಲ್ಲೂ ನಡೆಯುತ್ತಿರುವುದು ಕೇಂದ್ರ ರಾಜಕೀಯದ ಬಗೆಗಿನ ಚರ್ಚೆಗಳು. ಬಿಜೆಪಿ ಭರ್ಜರಿ ಬಹುಮತ ಪಡೆದು ಕೇಂದ್ರದಲ್ಲಿ ಎರಡನೇ ಅವಧಿಯ ಮೋದಿ ಸರ್ಕಾರ ಆಡಳಿತ ಆರಂಭಿಸಿರುವ ಬೆನ್ನಲ್ಲೇ ಸಂಸತ್‌ನಲ್ಲಿ ಕಾರ್ಯನಿರ್ವಹಿಸಲಿರುವ ಪ್ರತಿಪಕ್ಷ ಯಾವುದು? ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರ್‍ಯಾರು ಎನ್ನುವ ಚರ್ಚೆಗಳು ಶುರುವಾಗಿದೆ. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ ಪಾಳಯದಲ್ಲಿ ಮಾಸ್ಟರ್‌ಪ್ಲ್ಯಾನೊಂದು ಸಜ್ಜಾಗಿದೆ ಎನ್ನಲಾಗಿದೆ.

 ಹೌದು, ಕಾರಣಾಂತರಗಳಿಂದ 1999ರಲ್ಲಿ ಕಾಂಗ್ರೆಸ್‌ನಿಂದ ದೂರವಾಗಿದ್ದ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರು ಮತ್ತೆ ಕಾಂಗ್ರೆಸ್‌ಗೆ ಆಗಮಿಸುತ್ತಾರೆ, ಅಷ್ಟೇ ಅಲ್ಲ, ಶರದ್ ಪವಾರ್ ಅವರ ಎನ್‌ಸಿಪಿ ಕೂಡ ಕಾಂಗ್ರೆಸ್ ಜೊತೆಗೆ ವಿಲೀನವಾಗಲಿದೆ. ಎನ್ನಲಾಗಿದೆ. ಮರಳಿ ಕಾಂಗ್ರೆಸ್ ಗೂಡು ಸೇರಲಿರುವ ಶರದ್ ಪವಾರ್ ಅವರಿಗೆ ಎಐಸಿಸಿ ಅಧ್ಯಕ್ಷ ಗಾದಿಯನ್ನು ನಿಡಲು ರಾಹುಲ್ ಗಾಂಧಿ ನಿರ್ಧರಿಸಿದ್ದು, ಮುಂದಕ್ಕೆ ಕಾಂಗ್ರೆಸ್‌ನ್ನು ರಾಜಕೀಯ ಮೇಧಾವಿ ಶರದ್ ಪವಾರ್ ಅವರು ಮುನ್ನಡೆಸಲಿದ್ದಾರೆ. ಈಗಾಗಲೇ ರಾಹುಲ್‌ಗೆ ತೆರೆಮರೆಯಲ್ಲಿ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುವ ಶರದ್ ಪವಾರ್ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

 ಇನ್ನು ಲೋಕಸಭಾ ಪ್ರತಿಪಕ್ಷ ನಾಯಕನ ಸ್ಥಾನವನ್ನು ರಾಹುಲ್ ಗಾಂಧಿಯವರು ಅಲಂಕರಿಸುತ್ತಾರೆ ಎನ್ನಲಾಗಿದೆ. ಲೋಕಭಾ ಪ್ರತಿಪಕ್ಷದ ಮಾನ್ಯತೆ ಪಡೆಯಲು ಸಂಖ್ಯಾಬಲದ ಕೊರತೆಯನ್ನು ಎದುರಿಸುತ್ತಿರುವ 52 ಸಂಖ್ಯಾಬಲದ ಕಾಂಗ್ರೆಸ್, ಎನ್‌ಸಿಪಿಯನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳುವ ಮೂಲಕ ಎನ್‌ಸಿಪಿಯ 5 ಸ್ಥಾನಗಳನ್ನು ಸೇರಿಸಿಕೊಂಡು ಪ್ರತಿಪಕ್ಷ ಸ್ಥಾನವನ್ನು ಪಡೆಯಲಿದೆ. ಈ ಮೂಲಕ ಸಂಸತ್ತಿನ ಪ್ರತಿಪಕ್ಷ ನಾಯಕನ ಸ್ಥಾನವನ್ನು ರಾಹುಲ್ ಗಾಂಧಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

 ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರು ಪ್ರಧಾನಿ ಹುದ್ದೆಯನ್ನು ಅಲಂಕರಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿರುವ ವೇಳೆ, ವಿದೇಶೀ ಮಹಿಳೆ ಪ್ರಧಾನಿ ಹುದ್ದೆಗೇರುವುದು ಸರಿಯಲ್ಲ ಎಂದು ಮುನಿಸಿಕೊಂಡು ಕಾಂಗ್ರೆಸ್ ತೊರೆದಿದ್ದ ಶರದ್ ಪವಾರ್ ಎನ್‌ಸಿಪಿ ಸ್ಥಾಪಿಸಿದ್ದರು. ಇದೀಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೋದಿಯವರ ಪ್ರಾಬಲ್ಯಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮತ್ತೆ ಕಾಂಗ್ರೆಸ್‌ಗೆ ವಾಪಸಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಮುಂದೇನಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

Related posts

Leave a Reply

Your email address will not be published. Required fields are marked *