Breaking News

ಕಾಡುಕಳ್ಳರಿಗೆ ಅರಣ್ಯ ಇಲಾಖೆಯ ಅಭಯದ ಆರೋಪ, ಎಡಮಂಗಲ ಕೇರ್ಪಳ ದೇವರ ಕಾಡಲ್ಲಿ ಹಾಡಹಗಲೇ ಮರಗಳ್ಳತನ


ಕಾಡು ರಕ್ಷಿಸಿ ನಾಡು ಉಳಿಸಿ ಎಂಬ ಘೋಷ ವಾಕ್ಯ ಒಂದೆಡೆ ಮೊಳಗುತ್ತಿದ್ದರೆ, ಇನ್ನೊಂದೆಡೆ ಕಾಡನ್ನು ಸಂಪೂರ್ಣ ನಾಶ ಮಾಡುವ ಧಂದೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಪುತ್ತೂರು ಹಾಗೂ ಸುಳ್ಯ ತಾಲ್ಲೂಕಿನ ಬಹುಭಾಗಗಳಲ್ಲಿ ನಿರಂತರವಾಗಿ ಮರಕಳ್ಳತನ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಯಾವ ಪರಿವೆಯೂ ಇಲ್ಲದೆ ಮೌನವಾಗಿ ಕುಳಿತಿದೆ ಎಂಬ ಆರೋಪ ವ್ಯಕ್ತವಾಗುತ್ತಿದ್ದು, ಇದೀಗ ಸುಳ್ಯ ತಾಲ್ಲೂಕಿನ ಎಡಮಂಗಲ ಗ್ರಾಮದ ಮುರುಳ್ಯ ಸಮೀಪದ ಕೇರ್ಪಳ ಮಹಿಷಮರ್ಧಿನಿ ದೇವಾಲಯದ ದೇವರ ಕಾಡಿನಲ್ಲಿ ಹಾಡುಹಗಲೇ ಮರಗಳ ಮಾರಣ ಹೋಮ ನಡೆದಿದೆ.
ದೇವಾಲಯದ ವಠಾರದಲ್ಲಿರುವ ದೇವಾಲಯಕ್ಕೆ ಸೇರಿದ ದೇವರ ಕಾಡು ಎಂಬ ನಂಬಿಕೆಯ ಕಾಡಿನಿಂದ ಸುಮಾರು ೧೫ರಿಂದ ೨೦ ಲಕ್ಷ ಮೌಲ್ಯದ ಮರಗಳನ್ನು ಕಡಿದು ಸಾಗಿಸಲಾಗಿದೆ. ಆಸ್ತಿಕರ ಶ್ರದ್ಧಾ ಕೇಂದ್ರವಾದ ಈ ದೇವರ ಕಾಡಿನಿಂದ ದೇವಳದ ಬ್ರಹ್ಮಕಲಶೋತ್ಸವಕ್ಕೂ ಒಂದೇ ಒಂದು ಮರ ಕಡಿದಿರಲಿಲ್ಲವಂತೆ. ಅಂತಹ ಕಾಡು ಇದೀಗ ಸಂಪೂರ್ಣ ನಾಶವಾಗಿರುವುದು ಇಲ್ಲಿನ ಭಕ್ತ ವೃಂದದ ಆಕ್ರೋಶಕ್ಕೆ ಕಾರಣವಾಗಿದೆ. ಮರದ ಕೊಂಬೆ ಕಡಿದರೆ ಓಡಿ ಬರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಡುಹಗಲಿನಲ್ಲಿಯೇ ರಾಜಾರೋಷವಾಗಿ ಮರಗಳ್ಳರು ಇಲ್ಲಿನ ಕಾಡಿನ ಮರಗಳನ್ನು ಕಡಿದು ಸಾಗಿಸಿದ್ದರೂ ಅತ್ತ ಸುಳಿಯದಿರುವುದು ಅನುಮಾನಕ್ಕೆ ಕಾರಣವಾಗುತ್ತಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಯಾವುದೇ ಭಯವಿಲ್ಲದೆ ಹಗಲು ವೇಳೆಯೇ ಹಿಟಾಚಿ, ಜೆಸಿಬಿ, ಟಿಪ್ಪರ್ ಹಾಗೂ ಲಾರಿಗಳನ್ನು ಬಳಸಿದ ಕಾಡುಕಳ್ಳರ ತಂಡ ಈ ದೇವರ ಕಾಡಿನ ಬೆಳೆಬಾಳುವ ಮರಗಳನ್ನು ಕಡಿದು ಸಾಗಾಟ ಮಾಡಿದ್ದು, ಮರಗಳ ಅವಶೇಷಗಳು ಮಾತ್ರ ಉಳಿದುಕೊಂಡಿವೆ. ದೇವಳದ ಕಾಡಿನ ಈ ಬೆಳೆಬಾಳುವ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವುದನ್ನು ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ, ಕೇವಲ ನಾಟಕಕ್ಕೋಸ್ಕರ ಲಾರಿಗಳನ್ನು ತಡೆದು ನಿಲ್ಲಿಸಿದ ಅರಣ್ಯ ಇಲಾಖೆಯ ಅಧಿಕಾರಿ ವರ್ಗ ಬೆಲೆಬಾಳುವ ಮರಗಳನ್ನು ಮರಕಳ್ಳರಿಗೆ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕೂಡಲೇ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಸಂತ ನಡುಬೈಲು, ನಿಂತಿಕಲ್ಲು ಗ್ರಾಮೀಣ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಆಗ್ರಹಿಸಿದ್ದಾರೆ. ನಿಂತಿಕಲ್ಲು ಗ್ರಾಮೀಣ ಸೇವಾ ಪ್ರತಿಷ್ಠಾನದವರು ಈ ಕುರಿತು ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಈ ತನಕ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಲ್ಲ ಎಂದು ಆರೋಪಿಸಿರುವ ಪ್ರತಿಷ್ಠಾನದ ಅಧ್ಯಕ್ಷ ರೂಪರಾಜ್ ರೈ ಅವರು ಮರ ಕಡಿದು ಸಾಗಾಟ ಮಾಡಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ದೇವಾಲಯದ ಮರಗಳನ್ನು ದೇವಾಲಯಕ್ಕೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Related posts

Leave a Reply