
ಪುತ್ತೂರು: ಪ್ರಜಾಪ್ರಭುತ್ವದಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಕಾನೂನು ಇದೆ. ಕಾನೂನಿನ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರಿಗೂ ರಕ್ಷಣೆಯಿದೆ. ರಾಜರ ಕಾಲದಲ್ಲಿ ಕೋಟೆಗಳನ್ನು ಕಟ್ಟಿ ತಮ್ಮ ರಾಜ್ಯವನ್ನು ರಕ್ಷಣೆ ಮಾಡಿಕೊಂಡ ರೀತಿಯಲ್ಲಿ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಯ ರಕ್ಷಣೆಯನ್ನು ಕಾನೂನು ಮಾಡುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಂಕರಪ್ಪ ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಯುನಿಸೆಫ್ ಹೈದರಾಬಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಸಮಿತಿ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪುತ್ತೂರು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾ.ಪಂ ಸಭಾಂಗಣದಲ್ಲಿ ನಡೆದ ಮಕ್ಕಳ ಹಕ್ಕುಗಳು-ರಕ್ಷಣೆ ಕುರಿತು ನಡೆದ ಇಲಾಖಾ ಅಧಿಕಾರಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ್, ಕಾನೂನಿನ ಅನುಷ್ಟಾನವೇ ಎಲ್ಲಾ ವಿಚಾರಗಳಿಗೂ ಸರಿಯಾದ ಪರಿಹಾರವಲ್ಲ. ಮಾನವೀಯತೆಯ ಮೂಲಕ ಕಾನೂನುಗಳ ಅನುಷ್ಠಾನ ಮಾಡಿ ಮಕ್ಕಳ ಹಕ್ಕುಗಳ ಸಹಿತ ಎಲ್ಲವನ್ನೂ ಪರಿಹರಿಸಿಕೊಳ್ಳಲು ಸಾಧ್ಯವಿದೆ. ಮಕ್ಕಳ ರಕ್ಷಣೆಗಾಗಿ ಸಂವಿಧಾನದಡಿಯಲ್ಲಿರುವ ಹಕ್ಕುಗಳನ್ನು ಪಾಲಿಸಬೇಕು. ಮಕ್ಕಳ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಬೇರೆ ಬೇರೆ ಕಾರಣಗಳಿಂದ ವಿಫಲತೆಯಾಗಿರುವುದನ್ನು ನಾವು ಕಂಡಿದ್ದು ಇದಕ್ಕೆ ನಾವೇ ಹೊಣೆ. ಮಕ್ಕಳ ಹಕ್ಕುಗಳ ರಕ್ಷಣೆಯ ಕಾರ್ಯಕ್ಕಾಗಿ ನಾವು ವಿವಿಧ ಆಯಾಮಗಳಲ್ಲಿ ಚಿಂತನೆ ನಡೆಸಿ ಅದನ್ನು ಕಾರ್ಯಗತಗೊಳಿಸುವುದು ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ,
ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.