Header Ads
Header Ads
Breaking News

ಕಾಪು ಮಾರಿಯಮ್ಮ ದೇವಿಯ ನೂತನ ದೇವಾಲಯ ನಿರ್ಮಾಣ ಕಾರ್ಯಕ್ಕೆ ನಿಧಿಕುಂಭ ಸ್ಥಾಪನೆ.

ಐತಿಹಾಸಿಕ ಹಿನ್ನೆಲೆ ಮತ್ತು ದಟ್ಟವಾದ ನಂಬಿಕೆಯ ಕೇಂದ್ರ ಬಿಂದುವಾದ ಕಾಪು ಶ್ರೀ ಹೊಸಮಾರಿಗುಡಿಯು ಸುಮಾರು 35 ಕೋ. ರೂ. ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ದಾರಗೊಳ್ಳಲಿದ್ದು, ಮಾರಿಯಮ್ಮ ದೇವಿಯ ಭವ್ಯ ದೇವಾಲಯ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಜ. 23ರಂದು ಪೂರ್ವಾಹ್ನ 9.30ಕ್ಕೆ ನಿದಿಕುಂಭ ಸ್ಥಾಪನೆ ನೆರವೇರಲಿವೆ ಎಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದರು.

ಸುದ್ಧಿಗೋಷ್ಟಿಯಲ್ಲಿ ಈ ಬಗ್ಗೆ ವಿವರಿಸಿದ ಅವರು ನಿಧಿ ಕುಂಭ ಸ್ಥಾಪನೆಗೆ ಪೂರ್ವಭಾವಿಯಾಗಿ ದೇಶದ ಒಂಭತ್ತು ಶಕ್ತಿ ಪೀಠಗಳು ಮತ್ತು ಕರಾವಳಿಯ ದೇವಿ ದೇಗುಲಗಳ ಪ್ರಸಾದವನ್ನೂ ಸಂಗ್ರಹಿಸಲಾಗುತ್ತಿದೆ. ಅದನ್ನು ಕಾಪು ಜನಾರ್ದನ ದೇವಸ್ಥಾನದಿಂದ ಭವ್ಯ ಮೆರವಣಿಗೆಯ ಮೂಲಕ ಹೊಸ ಮಾರಿಗುಡಿ ತಂದು, ಉಡುಪಿ ಪೇಜಾವರ ಮಠಾದೀಶ ವಿಶ್ವೇಶತೀರ್ಥ ಶ್ರೀಪಾದರ ಮೂಲಕವಾಗಿ ನಿಧಿಕುಂಭಕ್ಕೆ ಸಮರ್ಪಿಸಲಾಗುವುದು. ಸಮಾರಂಭದಲ್ಲಿ ಧಾರ್ಮಿಕ ದತ್ತಿ ಸಚಿವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಂಸದರು ಮತ್ತು ಶಾಸಕರುಗಳು ಹಾಗೂ ವಿವಿಧ ಜನಪ್ರತಿನಿಧಿಗಳು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಮೂರು ಹಂತದಲ್ಲಿ ಜೀರ್ಣೊದ್ಧಾರ ಕಾರ್ಯಗಳು ನೆರವೇರಲಿದ್ದು, ಪ್ರಥಮ ಹಂತದಲ್ಲಿ ಸಂಪೂರ್ಣ ಶಿಲಾಮಯ ಹಿಲ್‌ಕಲ್ ರೆಡ್ ಶಿಲೆಯಲ್ಲಿ ಮಾರಿಯಮ್ಮ ದೇವಿಯ ಗರ್ಭಗುಡಿ, ಉಚ್ಚಂಗಿ ಗುಡಿ ನಿರ್ಮಾಣ, ನಾಲ್ಕು ದಿಕ್ಕಿನ ಸುತ್ತುಪೌಳಿ, ರಾಜಗೋಪುರವನ್ನೊಳಗೊಂಡ ಮುಖ ಮಂಟಪ, ಒಳ ಪ್ರಾಂಗಣ ಗೋಡೆ, ಪ್ರವೇಶ ದ್ವಾರ ನಿರ್ಮಾಣಗೊಳ್ಳಲಿದೆ. ಮುಂದಿನ ಹಂತದಲ್ಲಿ ಸುಸಜ್ಜಿತ ಸಭಾಭವನ ಸಹಿತವಾಗಿ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿವೆ. ದಂಡಿನ ಮಾರಿಯಾಗಿದ್ದು ಮುಂದೆ ಮಾರಿಯಮ್ಮನಾಗಿ ಈಗ ಮಾರಿಯಮ್ಮ ದೇವರೆಂದೇ ಪ್ರಸಿದ್ಧಳಾಗಿರುವ ಈ ಅಮ್ಮ (ಕಾಪುದಪ್ಪೆ) ಸ್ವತಃ ತಾನೇ ಮುಂದೆ ನಿಂತು ನವ ನಿರ್ಮಾಣ ಕಾರ್ಯವನ್ನು ಭಕ್ತರಿಂದ ಮಾಡಿಸಿಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ಮುಂಬಯಿ, ಹೊರ ಜಿಲ್ಲೆಗಳಾದ ಚಿಕ್ಕಮಗಳೂರು, ಕಾಸರಗೋಡು, ಉತ್ತರಕನ್ನಡ, ಶಿವಮೊಗ್ಗ ಸಹಿತವಾಗಿ ವಿವಿಧೆಡೆಗಳ ಭಕ್ತಾಧಿಗಳು ಆಗಮಿಸುತ್ತಾರೆ.ದೇವಾಲಯ ಸಮುಚ್ಚಯ ಪ್ರದೇಶದಲ್ಲಿ ಸುಂದರ ನೋಟವನ್ನು ಒದಗಿಸುವ ಉದ್ಯಾವನ ನಿರ್ಮಿಸಲಾಗುವುದು. ಒಂಭತ್ತು ಎಂಬ ನವಶಕ್ತಿಯ ನವದುರ್ಗೆಯರ ಒಂಬತ್ತು ಸೋಪಾನಗಳು, ಒಂಭತ್ತು ಹಂತಗಳು, ಒಂಭತ್ತು ಗೋಪುರಗಳು ಇರುವಂತೆ ನವ ನಿರ್ಮಾಣ ನಡೆಯಲಿದೆ. ಈ ಮೂಲಕ ಸುಂದರ ಶಿಲ್ಪಗಳ ಕಲರವ, ಮನೋಹರ ದೃಶ್ಯಾವಳಿಗಳ ಅನಾವರಣ, ವಾಸ್ತು ವಿನ್ಯಾಸ, ನಿರ್ಮಾಣ ಶೈಲಿಗಳೊಂದಿಗೆ ವಿದ್ವಾಂಸರ ಮತ್ತು ವಿಷಯ ತಜ್ಞರ ಸಲಹೆಯಂತೆ ಅಮ್ಮನ ಆಲಯ ಸಿದ್ಧಗೊಳಿಸಲಾಗುವುದು. ನವೀಕರಣಗೊಳ್ಳುವ ಈ ಆಲಯವು ಸಂಪೂರ್ಣ ಶಿಲಾಮಯವಾಗಿ ಮೂಡಿ ಬರಲಿದೆ.
ಲಿಂಗಣ್ಣ ಕವಿಯು ಕೆಳದಿನೃಪವಿಜಯ ಗ್ರಂಥದಲ್ಲಿ ವಿವರಿಸಿರುವಂತೆ ಕ್ರಿ. ಶ. 1743ರಲ್ಲಿ ಕೆಳದಿಯ ರಾಜ ಬಸಪ್ಪನಾಯಕನು ಕಾಪು ಕಡಲ ತೀರದಲ್ಲಿ ಮನೋಹರಗಡ ಎಂಬ ಕೋಟೆಯನ್ನು, ಕಾಪು ಹೊರವಲಯದ ಮಲ್ಲಾರಿನಲ್ಲಿ ಸೇನೆ ವಿಶ್ರಮಿಸಲು ದೊಡ್ಡ ಕೋಟೆಯೊಂದನ್ನು ರಚಿಸಿದ್ದರೆನ್ನಲಾಗಿದ್ದು, ಈ ಸೈನಿಕರು ತಮ್ಮ ಯುದ್ಧ ದೇವತೆಯಾಗಿ ತಮ್ಮೊಂದಿಗೆ ಕರೆತಂದು ಆರಾಧಿಸಿದ ದಂಡಿನ ಮಾರಿ ಎಂಬ ಶಕ್ತಿಯೇ ಕಾಪುವಿನ ಮಾರಿಯಮ್ಮ ಎಂದು ಭಕ್ತಜನರಿಂದ ಆರಾಧಿಸಲ್ಪಡುತ್ತಿದ್ದಾಳೆ. ಕ್ರಿ.ಶ. 1830ರಲ್ಲಿ ಈಗಿನ ಹೊಸ ಮಾರಿಗುಡಿಯನ್ನು ನಿರ್ಮಿಸಲಾಗಿತ್ತೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಕಾಪು ಮಾರಿಗುಡಿಯಲ್ಲಿ ವಾರ್ಷಿಕವಾಗಿ ನಡೆಯುವ ೩ ಮಾರಿಪೂಜೆಗಳಲ್ಲಿ ಸುಗ್ಗಿಯ ಮಾರಿಪೂಜೆ ಎಂಬುದು ತುಳುನಾಡಿನ ಸಪ್ತ ಮಹಾಜಾತ್ರೆಗಳಲ್ಲಿ ಒಂದೆಂದು ಪ್ರಸಿದ್ಧಿ ಪಡೆದಿದೆ. ಈ ಜಾತ್ರೆಗೆ ಕರ್ನಾಟಕ ರಾಜ್ಯದ್ಯಂತದಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ ಎಂದರು.

ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಅನಿಲ್ ಬಲ್ಲಾಳ್ ಬೀಡು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾದಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಗಂಗಾಧರ ಸುವರ್ಣ, ಪ್ರಚಾರ ಸಮಿತಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಮೊದಲಾದವರು ಸುದ್ಧಿಗೊಷ್ಟಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply